19 ವರ್ಷಗಳ ಬಳಿಕ ಮೊದಲ ಬಾರಿ ಅಗ್ರ-100ರಿಂದ ಹೊರಗುಳಿದ ಪೇಸ್

Update: 2019-11-11 19:07 GMT

  ಹೊಸದಿಲ್ಲಿ, ನ.11: ಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಎಟಿಪಿ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಐದು ಸ್ಥಾನಗಳನ್ನು ಕಳೆದುಕೊಂಡು 19 ವರ್ಷಗಳ ಬಳಿಕ ಮೊದಲ ಬಾರಿ ಅಗ್ರ-100ರಿಂದ ಹೊರಗುಳಿದಿದ್ದಾರೆ. 856 ಅಂಕ ಗಳಿಸಿರುವ ಪೇಸ್ ಡಬಲ್ಸ್ ರ್ಯಾಂಕಿಂಗ್‌ನಲ್ಲಿ ಭಾರತದ ನಾಲ್ಕನೇ ಗರಿಷ್ಠ ರ್ಯಾಂಕಿನ ಆಟಗಾರನಾಗಿದ್ದಾರೆ. ರೋಹನ್ ಬೋಪಣ್ಣ(38 ಅಂಕ), ಡಿವಿಜ್ ಶರಣ್(46) ಹಾಗೂ ಪೂರವ್ ರಾಜಾ(93)ಮೊದಲ ಮೂರು ಸ್ಥಾನದಲ್ಲಿದ್ದಾರೆ. ರಾಜಾ 8 ಸ್ಥಾನ ಭಡ್ತಿ ಪಡೆದು ಅಗ್ರ-100ರೊಳಗೆ ಮರು ಪ್ರವೇಶ ಮಾಡಿದ್ದಾರೆ.

46ರ ಹರೆಯದ ಪೇಸ್ 2000ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಅಗ್ರ-100 ರ್ಯಾಂಕಿಗಿಂತ ಹೊರಗುಳಿದಿದ್ದರು. ಆಗ ಅವರು 118ನೇ ರ್ಯಾಂಕಿನಲ್ಲಿದ್ದರು. ಭಾರತ ಕಂಡ ಶ್ರೇಷ್ಠ ಟೆನಿಸ್ ಪಟುವಾಗಿರುವ ಪೇಸ್ ಸಹ ಆಟಗಾರ ಮಹೇಶ್ ಭೂಪತಿ ಜೊತೆಗೂಡಿ 1990ರ ಅಂತ್ಯ ಹಾಗೂ 2000ರ ಆದಿಯಲ್ಲಿ ಡಬಲ್ಸ್ ವಿಭಾಗದಲ್ಲಿ ಪ್ರಾಬಲ್ಯ ಮೆರೆದಿದ್ದರು. 2014ರ ಆಗಸ್ಟ್‌ನಲ್ಲಿ ಪೇಸ್ ಅಗ್ರ-10ರಲ್ಲಿ ಸ್ಥಾನ ಕಳೆದುಕೊಂಡಿದ್ದರು. ಇನ್ನೆರಡು ವರ್ಷಗಳ ಬಳಿಕ ಅಗ್ರ-50ರಿಂದಲೂ ಹೊರಗುಳಿದಿದ್ದರು. 18 ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಪೇಸ್ ಈ ವರ್ಷದ ಸೆಪ್ಟಂಬರ್‌ನಲ್ಲಿ ಯುಎಸ್ ಓಪನ್ ಬಳಿಕ ಯಾವುದೇ ಪಂದ್ಯಗಳಲ್ಲಿ ಆಡಿಲ್ಲ. ಪಾಕಿಸ್ತಾನ ವಿರುದ್ಧ ಮುಂಬರುವ ಡೇವಿಸ್ ಕಪ್ ಪಂದ್ಯದಲ್ಲಿ ಲಭ್ಯವಿರುವುದಾಗಿ ಪೇಸ್ ಎಐಟಿಎಗೆ ತಿಳಿಸಿದ್ದಾರೆ. ಇದೇ ವೇಳೆ, ಸಿಂಗಲ್ಸ್ ರ್ಯಾಂಕಿಂಗ್‌ನಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರನಾಗಿ ಮುಂದುವರಿದಿದ್ದಾರೆ. ಚೆನ್ನೈನ ಎಡಗೈ ಆಟಗಾರ ಪ್ರಜ್ಞೇಶ್ 95ನೇ ರ್ಯಾಂಕಿನಲ್ಲಿದ್ದಾರೆ. ಸುಮಿತ್ ನಗಾಲ್(127), ರಾಮಕುಮಾರ್ ರಾಮನಾಥನ್(190),ಶಶಿ ಕುಮಾರ್ ಮುಕುಂದ್(250) ಹಾಗೂ ಸಾಕೇತ್ ಮೈನೇನಿ(267)ಆ ಬಳಿಕದ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News