ಇಂದಿನಿಂದ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭ

Update: 2019-11-11 19:12 GMT

ಹಾಂಕಾಂಗ್, ನ.11: ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಮಂಗಳವಾರದಿಂದ ಇಲ್ಲಿ ಆರಂಭವಾಗಲಿದ್ದು, ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿರುವ ಭಾರತದ ಡಬಲ್ಸ್ ಆಟಗಾರರಾದ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಶ್ರೇಷ್ಠ ಪ್ರದರ್ಶನ ಮುಂದುವರಿಸುವತ್ತ ಚಿತ್ತವಿರಿಸಿದ್ದಾರೆ. ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಟೂರ್ನಿಯಲ್ಲಿ ಬೇಗನೇ ಸೋತು ನಿರ್ಗಮಿಸುವುದನ್ನು ತಪ್ಪಿಸಲು ಎದುರು ನೋಡುತ್ತಿದ್ದಾರೆ.

ವಿಶ್ವದ ನಂ.9ನೇ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಫ್ರೆಂಚ್ ಓಪನ್‌ನಲ್ಲಿ ರನ್ನರ್ಸ್ ಅಪ್ ಹಾಗೂ ಕಳೆದ ವಾರ ಮುಗಿದ ಚೀನಾ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.

ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಟಾಕುರೊ ಹೊಕಿ ಹಾಗೂ ಯುಗೊ ಕೊಬಯಶಿ ಅವರನ್ನು ಎದುರಿಸಲಿರುವ ಈ ಜೋಡಿಯ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ.

 ಸಿಂಧು ಹಾಗೂ ಸೈನಾ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್ ನಡೆದ ಬಳಿಕ ಈ ಇಬ್ಬರು ಆಟಗಾರ್ತಿಯರು ಸತತ ಟೂರ್ನಿಗಳಲ್ಲಿ ಬೇಗನೆ ಸೋತು ನಿರ್ಗಮಿಸಿದ್ದಾರೆ.

ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆಎಡವಿದ್ದ ಸಿಂಧು ಆಗಸ್ಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇಂಡೋನೇಶ್ಯ ಮಾಸ್ಟರ್ಸ್ ಚಾಂಪಿಯನ್ ಸೈನಾ ಮೊದಲ ಅಥವಾ ಎರಡನೇ ಸುತ್ತಿನ ಪಂದ್ಯಗಳಲ್ಲಿ ಸೋಲುತ್ತಿದ್ದಾರೆ.

ಕಳೆದ ವಾರ ನಡೆದ ಚೀನಾ ಓಪನ್ ಟೂರ್ನಿಯಲ್ಲಿ ಸಿಂಧು ಹಾಗೂ ಸೈನಾ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. ಸಿಂಧು ತೈವಾನ್‌ನ ಪೈ ಯು ಪೊಗೆ ಮೂರು ಗೇಮ್‌ಗಳ ಅಂತರದಿಂದ ಸೋತಿದ್ದರೆ, ಸೈನಾ ಚೀನಾದ ಕೈ ಯಾನ್‌ಗೆ ನೇರ ಗೇಮ್‌ಗಳ ಅಂತರದಿಂದ ಶರಣಾಗಿದ್ದರು.

  ಕುತೂಹಲದ ವಿಚಾರವೆಂದರೆ ಸೈನಾ ಹಾಂಕಾಂಗ್ ಓಪನ್‌ನ ಮೊದಲ ಸುತ್ತಿನಲ್ಲಿ ಚೀನಾದ ಆಟಗಾರ್ತಿಯನ್ನು ಮತ್ತೊಮ್ಮೆ ಎದುರಿಸಲಿದ್ದಾರೆ. ಆರನೇ ಶ್ರೇಯಾಂಕದ ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಕೊರಿಯಾದ ವಿಶ್ವದ ನಂ.19ನೇ ಆಟಗಾರ್ತಿ ಕಿಮ್ ಗಾ ವುನ್ ಸವಾಲನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.10ನೇ ಆಟಗಾರ ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ವಿಶ್ವದ ನಂ.1 ಆಟಗಾರ ಕೆಂಟೊ ಮೊಮೊಟಾರಿಂದ ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ.

ಸ್ವಿಸ್ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಆಟಗಾರ ಬಿ.ಸಾಯಿ ಪ್ರಣೀತ್ ಮೂರನೇ ಶ್ರೇಯಾಂಕದ ಚೀನಾದ ಆಟಗಾರ ಶಿ ಯು ಕ್ಯೂರನ್ನು ಮುಖಾಮುಖಿಯಾಗಲಿದ್ದಾರೆ.

ಸಮೀರ್ ವರ್ಮಾ, ಎಸ್.ಎಚ್. ಪ್ರಣಯ್ ಹಾಗೂ ಪಿ.ಕಶ್ಯಪ್ ಕ್ರಮವಾಗಿ ತೈವಾನ್‌ನ ವಾಂಗ್ ಝು ವೀ, ಚೀನಾದ ಹ್ವಾಂಗ್ ಯು ಕ್ಸಿಯಾಂಗ್ ಹಾಗೂ ಜಪಾನ್‌ನ ಕೆಂಟಾ ನಿಶಿಮೊಟೊರನ್ನು ಮುಖಾಮುಖಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News