ಇದುವರೆಗೆ ಯಾವುದೇ ನಿರ್ಧಾರ ತೆಗೆದುಗೊಂಡಿಲ್ಲ: ಕಾಂಗ್ರೆಸ್, ಎನ್‌ಸಿಪಿ

Update: 2019-11-12 17:56 GMT
ಫೋಟೊ:ANI

ಮುಂಬೈ, ನ. 12: ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಶಿವಸೇನೆಗೆ ಬೆಂಬಲಿಸುವ ಬಗ್ಗೆ ನಾವು ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಹಾಗೂ ಎನ್‌ಸಿಪಿ ಮಂಗಳವಾರ ಹೇಳಿದೆ. ಆದರೆ, ಈ ಬಗ್ಗೆ ಚರ್ಚೆ ಮುಂದುವರಿಸಲಿದ್ದೇವೆ ಎಂದು ಕಾಂಗ್ರೆಸ್ ಹಾಗೂ ಎನ್‌ಸಿಪಿ ಸ್ಪಷ್ಟಪಡಿಸಿದೆ.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್, ಶಿವಸೇನೆಗೆ ಬೆಂಬಲ ನೀಡಿದರೆ ನೀತಿಗಳು ಹಾಗೂ ಕಾರ್ಯಕ್ರಮಗಳು ಏನಾಗಿರಬೇಕು ಎಂಬ ಬಗ್ಗೆ ಉಭಯ ಪಕ್ಷಗಳು ಚರ್ಚಿಸಲಿದ್ದೇವೆ ಹಾಗೂ ಒಮ್ಮತದ ತೀರ್ಮಾನಕ್ಕೆ ಬರಲಿದ್ದೇವೆ ಎಂದರು. ಈ ವಿಷಯದ ಕುರಿತು ಎನ್‌ಸಿಪಿಯೊಂದಿಗೆ ಮಾತುಕತೆ ಮುಂದುವರಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ನಿಯೋಜಿತರಾಗಿದ್ದ ನಾಯಕರಾದ ಅಹ್ಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಸಿ. ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

 ‘‘ಸರಕಾರ ಸುಲಲಿತವಾಗಿ ಕಾರ್ಯಾಚರಿಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಜಾರಿಗೆ ತರಲು ನಾವು (ಕಾಂಗ್ರೆಸ್ ಹಾಗೂ ಎನ್‌ಸಿಪಿ) ಸಾಧ್ಯವಾದ ಮಟ್ಟಿಗೆ ಚರ್ಚೆ ನಡೆಸಲಿದ್ದೇವೆ’’ ಎಂದು ಅವರು ಹೇಳಿದರು. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಸ್ಪರ್ಧಿಸಿದ್ದ ಶಿವಸೇನೆ ಮುಂದಿನ ಸರಕಾರ ರಚಿಸಲು ಬೆಂಬಲ ಕೋರಿ ಸೋಮವಾರ ಕಾಂಗ್ರೆಸ್-ಎನ್‌ಸಿಪಿಯನ್ನು ಅಧಿಕೃತವಾಗಿ ಸಂಪರ್ಕಿಸಿತ್ತು ಎಂದು ಅಹ್ಮದ್ ಪಟೇಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News