ಗುಜರಾತಿನ ಆತಂಕಕಾರಿ ವಿಧೇಯಕ

Update: 2019-11-13 05:47 GMT

ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ಉದ್ದೇಶದಿಂದ ಈ ದೇಶದಲ್ಲಿ ತರುತ್ತಿರುವ ಕೆಲ ಶಾಸನಗಳು ಆಗಾಗ ವಿವಾದಕ್ಕೆ ಕಾರಣವಾಗುತ್ತಿವೆ. ಅದರಲ್ಲೂ ಬಿಜೆಪಿಯಂತಹ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ಇಂತಹ ವಿಧೇಯಕ ತಂದಾಗ ಮಾನವ ಹಕ್ಕು ಪರ ಹೋರಾಟಗಾರರಲ್ಲಿ, ಪ್ರಜಾಪ್ರಭುತ್ವವಾದಿಗಳಲ್ಲಿ ಸಕಾರಣವಾದ ಸಂದೇಹ ಸಹಜವಾಗಿ ಉಂಟಾಗುತ್ತದೆ. ಗುಜರಾತಿನ ವಿಧಾನಸಭೆ ಈ ಹಿಂದೆ ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆ ನಿಗ್ರಹ ವಿಧೇಯಕವನ್ನು ಅಂಗೀಕರಿಸಿ ರಾಷ್ಟ್ರಪತಿಯವರ ಅಂಕಿತಕ್ಕಾಗಿ ಕಳುಹಿಸಿದಾಗ ಮೂರು ಬಾರಿ ತಿರಸ್ಕೃತಗೊಂಡು ವಾಪಸು ಬಂದಿತ್ತು. ಇಂತಹ ವಿಧೇಯಕಕ್ಕೆ ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿ ಕಳುಹಿಸಿದ್ದಾರೆ.

 ಈಗ ರಾಷ್ಟ್ರಪತಿಯವರ ಅಂಕಿತ ಪಡೆದು ಬಂದಿರುವ ಈ ವಿಧೇಯಕ ಶಾಸನವಾಗಿ ಗುಜರಾತ್‌ನಲ್ಲಿ ಜಾರಿಯಾದ ನಂತರ ಮಾನವ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಬಹುದೆಂಬ ಭೀತಿ ಗುಜರಾತಿನಲ್ಲಿ ಆವರಿಸಿದೆ. ಈ ಭೀತಿಗೆ ಕಾರಣಗಳಿಲ್ಲದಿಲ್ಲ.

ಈ ವಿಧೇಯಕ ಮೊದಲ ಬಾರಿ 2002ರಲ್ಲಿ ಗುಜರಾತ್ ವಿಧಾನ ಸಭೆಯಲ್ಲಿ ಅನುಮೋದನೆ ಪಡೆಯಿತು. ಆನಂತರ ರಾಷ್ಟ್ರಪತಿಯವರ ಅಂಕಿತಕ್ಕಾಗಿ ಳುಹಿಸಲಾಯಿತು.ಆದರೆ ಆಗಿನ ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ ಈ ವಿವಾದಾಸ್ಪದ ವಿಧೇಯಕಕ್ಕೆ ಸಹಿ ಹಾಕಲು ಒಪ್ಪಲಿಲ್ಲ. 2008ರಲ್ಲಿ ಈ ವಿಧೇಯಕ ಮತ್ತೆ ರಾಷ್ಟ್ರಪತಿ ಭವನದ ಅಂಗಳಕ್ಕೆ ಬಂತು. ಆಗ ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ್ ಈ ವಿಧೇಯಕದಲ್ಲಿರುವ ಕೆಲ ವಿವಾದಾತ್ಮಕ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಂಕಿತ ಹಾಕಲು ನಿರಾಕರಿಸಿ ವಾಪಸು ಕಳುಹಿಸಿದರು. 2015ರಲ್ಲಿ ಗುಜರಾತಿನ ಈ ವಿಧೇಯಕ ಮತ್ತೆ ಅನುಮೋದನೆಗಾಗಿ ರಾಷ್ಟ್ರಪತಿ ಭವನಕ್ಕೆ ತಲುಪಿತು. ಆದರೆ ಆಗ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಕೂಡ ಕೆಲ ಅಂಶಗಳನ್ನು ಉಲ್ಲೇಖಿಸಿ ಸಹಿ ಹಾಕಲು ನಿರಾಕರಿಸಿದರು. ಹೀಗೆ ಹಿಂದಿನ ಮೂವರು ರಾಷ್ಟ್ರಪತಿಗಳಿಂದ ತಿರಸ್ಕರಿಸಲ್ಪಟ್ಟಿದ್ದ ಈ ವಿವಾದಾತ್ಮಕ ವಿಧೇಯಕಕ್ಕೆ ಈಗಿನ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾರ ಗೌರವವಿದೆ. ಆದರೆ ಅದಕ್ಕೆ ಚ್ಯುತಿ ತರುವಂತಹ ಕೆಲವು ಅಂಶಗಳು ಈ ವಿಧೇಯಕದಲ್ಲಿರುವುದು ಆತಂಕದ ಸಂಗತಿಯಾಗಿದೆ. ಯಾವುದೇ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವ ವ್ಯಕ್ತಿಯು ಪೊಲೀಸ್ ಅಧಿಕಾರಿಗಳ ಎದುರು ನೀಡುವ ತಪ್ಪೊಪ್ಪಿಗೆ ಹೇಳಿಕೆಗಳನ್ನು ನ್ಯಾಯಾಲಯವು ಪುರಾವೆಯಾಗಿ ಪರಿಗಣಿಸಬೇಕೆಂದು ಈ ವಿಧೇಯಕ ಹೇಳುತ್ತದೆ. ಇದು ಭಾರತದಲ್ಲಿನ ಕ್ರಿಮಿನಲ್ ಅಪರಾಧಗಳ ತನಿಖಾ ವ್ಯವಸ್ಥೆ ಯಲ್ಲಿ ಜಾರಿಯಲ್ಲಿರುವ ಕಾಯ್ದೆಯ ಆಶಯಕ್ಕೆ ವ್ಯತಿರಿಕ್ತವಾಗಿದೆ. ದೇಶದಲ್ಲಿ ಈಗಿರುವ ಭಾರತೀಯ ಸಾಕ್ಷ ಕಾಯ್ದೆಯ 24 ಮತ್ತು 25ನೇ ವಿಧಿಯನ್ವಯ ಪೊಲೀಸ್ ಅಧಿಕಾರಿಗಳ ಎದುರು ಆರೋಪಿ ತಪ್ಪೊಪ್ಪಿಕೊಳ್ಳುವುದು ಸಾಕ್ಷಿ ಎಂದು ಪರಿಗಣಿಸಲ್ಪಡುವುದಿಲ್ಲ. ಆರೋಪಿಯು ತಾನು ತಪ್ಪು ಮಾಡಿದ್ದೇನೆಂದು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹೇಳಿದಾಗ ಮಾತ್ರ ಅದು ಸಾಕ್ಷವಾಗಿ ಪರಿಗಣಿಸಲ್ಪಡುತ್ತದೆ.

ಯಾವುದೇ ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ ಪೊಲೀಸರ ತನಿಖೆಯ ಸ್ವರೂಪ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಪೊಲೀಸರು ನಿರ್ದಿಷ್ಟ ಅಪರಾಧ ಪ್ರಕರಣವೊಂದರಲ್ಲಿ ಸದರಿ ಕಾಯ್ದೆಯ ಅಡಿಯಲ್ಲಿ ಆರೋಪಿಯೆಂದು ಒಬ್ಬನನ್ನು ಬಂಧಿಸಿ ತಮ್ಮ ವಶದಲ್ಲಿದ್ದಾಗ ಅವನಿಂದ ಬಲವಂತವಾಗಿ ತಪ್ಪೊಪ್ಪಿಗೆ ಹೇಳಿಕೆಯನ್ನು ಪಡೆದು ಅದನ್ನೇ ಸಾಕ್ಷವಾಗಿ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಹೀಗೆ ಮಾಡಿದರೆ ವಿನಾಕಾರಣವಾಗಿ ಅಮಾಯಕರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹೀಗೆ ಮಾಡಿ ಪ್ರಭುತ್ವ ಭಿನ್ನಮತವನ್ನು, ಪ್ರತಿರೋಧವನ್ನು ಹಾಗೂ ಮಾನವ ಹಕ್ಕು ಪರ ಧ್ವನಿಯನ್ನು ಹತ್ತಿಕ್ಕಬಹುದು. ಈ ವಿಧೇಯಕದಲ್ಲಿ ಈ ಅಪಾಯಕಾರಿ ಅಂಶವಿದೆ. ಇದು ನ್ಯಾಯಾಧೀಶರಿಗೆ ಮಾತ್ರ ಇರುವ ಅಧಿಕಾರವನ್ನು ಪೊಲೀಸರಿಗೆ ನೀಡುತ್ತದೆ. ಇದು ಜನತಂತ್ರದ ಅಂತಃಸತ್ವವನ್ನೇ ನಾಶ ಮಾಡುತ್ತದೆ.

ಈ ವಿಧೇಯಕದ ಇನ್ನೊಂದು ಅಪಾಯಕಾರಿ ಅಂಶವೆಂದರೆ ದೂರವಾಣಿ ಸಂಭಾಷಣೆಯನ್ನು ಇದು ಸಾಕ್ಷವಾಗಿ ಪರಿಗಣಿಸುತ್ತದೆ. ಸಂವಿಧಾನದ ಪ್ರಕಾರ ಖಾಸಗಿತನವು ಮೂಲಭೂತ ಹಕ್ಕು ಎಂದು ಪರಿಗಣಿಸಲ್ಪಡುತ್ತದೆ. ಆದರೆ ಈ ವಿಧೇಯಕ ದೂರವಾಣಿ ಸಂಭಾಷಣೆಯನ್ನು ಸಾಕ್ಷವಾಗಿ ಪರಿಗಣಿಸುತ್ತದೆ. ಇದರಿಂದ ವ್ಯಕ್ತಿಯೊಬ್ಬನ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗುತ್ತದೆ.

ಭಯೋತ್ಪಾದಕ ಚಟುವಟಿಕೆ ಅಪಾಯಕಾರಿ ಅದನ್ನು ಖಂಡಿತ ಹತ್ತಿಕ್ಕಬೇಕು. ಆದರೆ ಅದರ ಹೆಸರಿನಲ್ಲಿ ರಾಜಕೀಯ ವಿರೋಧಿಗಳನ್ನು, ಸೈದ್ಧಾಂತಿಕ ಎದುರಾಳಿಗಳನ್ನು, ಮಾನವ ಹಕ್ಕುಪರ ಹೋರಾಟಗಾರರನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ದಮನ ಮಾಡುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. ಮಹಾರಾಷ್ಟ್ರದಲ್ಲಿ ಈಗಾಗಲೇ ಇಂತಹ ಕಾಯ್ದೆಯಿಲ್ಲದೆಯೂ ದಲಿತ ಪರ , ಮಾನವ ಹಕ್ಕು ಪರ ಹೋರಾಟಗಾರರನ್ನು, ವಕೀಲರನ್ನು, ಪ್ರಾಧ್ಯಾಪಕರನ್ನು, ಕವಿಗಳನ್ನು ಜೈಲಿಗೆ ಹಾಕಿ ಒಂದೂವರೆ ವರ್ಷವೇ ಗತಿಸಿತು. ಗುಜರಾತಿನ ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿದೆ. ನರೇಂದ್ರ ಮೋದಿ ಆ ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಕಾಲದಿಂದಲೂ ಅಲ್ಲಿ ನಿರಂತರ ದಮನ ಸತ್ರ ನಡೆಯುತ್ತ್ತಾ ಬಂದಿದೆ.

ದೇಶಕ್ಕೆ ಅಪಾಯಕಾರಿಯಾದ ಭಯೋತ್ಪಾದಕತೆಯನ್ನು ಹತ್ತಿಕ್ಕಲು ಯಾರ ಅಭ್ಯಂತರವೂ ಇಲ್ಲ. ಆದರೆ ಅದರ ಹೆಸರಿನಲ್ಲಿ ಮಾನವ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ದಮನ ಸರಿಯಲ್ಲ. ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕಲು ಇಂತಹ ಕಾನೂನಿನ ಅಗತ್ಯವಿಲ್ಲ. ಇದರ ಬದಲಾಗಿ ಈಗಿನ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಸುಸಜ್ಜಿತಗೊಳಿಸಬೇಕು. ಆಧುನಿಕ ತರಬೇತಿ, ಅಗತ್ಯ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು. ಅದರ ಬದಲಾಗಿ ಸರಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುವವರನ್ನು ದಮನ ಮಾಡಲು ಇಂತಹ ಫ್ಯಾಶಿಸ್ಟ್ ಕಾನೂನು ತರುವುದು ಸರಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News