ಭಾರತದ ಚುನಾವಣಾ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸಿದ ಟಿ.ಎನ್.ಶೇಷನ್

Update: 2019-11-12 18:34 GMT

ಪ್ರತಿಯೊಂದು ಚುನಾವಣೆಯೂ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಕಾನೂನಿಗೆ ಅನುಗುಣವಾಗಿ ನಡೆಯಬೇಕೆಂಬ ತನ್ನ ನಿಲುವಿನಲ್ಲಿ ಅವರು ಒಂದಿಷ್ಟೂ ರಾಜಿ ಮಾಡಿಕೊಳ್ಳಲಿಲ್ಲ. 1994ರ ಡಿಸೆಂಬರ್‌ನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರೆನ್ನಲಾದ ಆಗಿನ ಕೇಂದ್ರ ಸಚಿವರಾದ ಸೀತಾರಾಮ ಕೇಸರಿ ಹಾಗೂ ಕಲ್ಪನಾಥ್ ರಾಯ್‌ರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು.

1990-96ರ ಅವಧಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಟಿ.ಎನ್.ಶೇಷನ್ ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಣಗೊಳಿಸುವ ಪ್ರಕ್ರಿಯೆಗೆ ನಾಂದಿ ಹಾಡಿದ ಧೀಮಂತ ಅಧಿಕಾರಿ. ಮತದಾರರ ಗುರುತು ಚೀಟಿ ಈ ನಿಟ್ಟಿನಲ್ಲಿ ಅವರು ಕೈಗೊಂಡ ಒಂದು ಮಹತ್ವದ ಉಪಕ್ರಮವಾಗಿತ್ತು. ಆ ತನಕ ಕೇವಲ ಚುನಾವಣಾ ಮಾದರಿ ನೀತಿ ಸಂಹಿತೆಯೆಂಬುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿತ್ತು. ಆ ಕಾಲದಲ್ಲಿ ಯಾವ ರಾಜಕೀಯ ಪಕ್ಷಗಳು ಕೂಡಾ ಚುನಾವಣಾ ನೀತಿ ಸಂಹಿತೆಯನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ರಾಜಕೀಯ ಪಕ್ಷಗಳ ಭಾರೀ ಟೀಕಾ ಪ್ರಹಾರಗಳಿಗೆ ಅಂಜದೆ ಶೇಷನ್ ಅವರು ಭಾರತದ ಚುನಾವಣೆಗಳಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತರುವ ಮೂಲಕ ತನ್ನ ಹುದ್ದೆಗಿರುವ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದರು.

ಕೇರಳದ ಪಾಲಕ್ಕಾಡ್‌ನಲ್ಲಿ 1932ರ ಡಿಸೆಂಬರ್ 5ರಂದು ಜನಿಸಿದ ಶೇಷನ್ ಅವರು 1995ರಲ್ಲಿ ತೇರ್ಗಡೆಗೊಂಡ ಐಎಎಸ್ ಅಧಿಕಾರಿಗಳ ತಮಿಳುನಾಡು ಕೇಡರ್‌ಗೆ ಸೇರಿದವರು. ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್‌ನ ಹಳೆ ವಿದ್ಯಾರ್ಥಿಯಾದ ಅವರು 1960ರ ದಶಕದಲ್ಲಿ ಬ್ರಿಟನ್‌ನ ಹಾರ್ವರ್ಡ್ ವಿವಿಯಲ್ಲಿ ಒಂದು ವರ್ಷದ ಮ್ಯಾನೇಜ್‌ಮೆಂಟ್ ಶಿಕ್ಷಣ ಕೋರ್ಸ್ ಮಾಡಿದ್ದರು.

1965-67ರ ದಶಕದಲ್ಲಿ ಶೇಷನ್ ಅವರು ಮದುರೈನ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ, ತಲೆಯೆತ್ತಿದ್ದ ಹಿಂದಿ ವಿರೋಧಿ ಚಳವಳಿಗಾರರ ದಾಂಧಲೆಯ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಗಮನಸೆಳೆದಿದ್ದರು. ಕೆ.ಗೋವಿಂದನ್ ಕುಟ್ಟಿ ಬರೆದಿರುವ ‘ಶೇಷನ್: ಆ್ಯನ್ ಇಂಟಿಮೇಟ್ ಸ್ಟೋರಿ’ (1994ರಲ್ಲಿ ಪ್ರಕಟ) ಆತ್ಮಕಥನದಲ್ಲಿ ಶೇಷನ್ ನಾಗರಿಕರ ಹಕ್ಕುಗಳನ್ನು ದಮನಿಸುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ಧ ದೂರುಗಳ ಮಹಾಪೂರವೇ ಆಗಿನ ಮುಖ್ಯಮಂತ್ರಿ ಎಂ. ಭಕ್ತವತ್ಸಲಂ ಅವರಿಗೆ ಬಂದಿದ್ದವು. ಆದಾಗ್ಯೂ, ಅಂತಹ ಯಾವುದೇ ಒತ್ತಡಗಳಿಗೆ ಶೇಷನ್ ಮಣಿಯಲೇ ಇಲ್ಲ.

ಎಂ.ಜಿ.ಆರ್. (1977-80) ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾಗ ಶೇಷನ್ ಅವರು ತಮಿಳುನಾಡು ಸರಕಾರದ ಕೈಗಾರಿಕಾ ಕಾರ್ಯದರ್ಶಿ ಹಾಗೂ ಕೃಷಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ತನ್ನ ರಾಜಕೀಯ ಧಣಿಗಳ ಜೊತೆಗಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡ ಪರಿಣಾಮವಾಗಿ ಶೇಷನ್ ಕೇಂದ್ರ ಸರಕಾರದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಯಿತು.

ಮುಖ್ಯ ಚುನಾವಣಾ ಆಯುಕ್ತರಾಗಿ ಶೇಷನ್ ಅವರು ಕೈಗೊಂಡ ಕ್ರಮಗಳನ್ನು ಕಂಡಾಗ ತನಗೇನೂ ಅಚ್ಚರಿಯಾಗಲಿಲ್ಲವೆಂದು ತಮಿಳುನಾಡಿನ ಜಾಗೃತ ಆಯೋಗದ ಮಾಜಿ ಆಯುಕ್ತ ಪಿ.ಎನ್. ವೇದನಾರಾಯಣನ್ ಹೇಳುತ್ತಾರೆ. ತಮಿಳುನಾಡು ಸರಕಾರದ ಕೈಕೆಳಗೆ ಅವರು ಕಾರ್ಯನಿರ್ವಹಿಸುತ್ತಿದ್ದಾಗಲೇ ತಾನೊಬ್ಬ ಉತ್ತಮ ಆಡಳಿತಗಾರನೆಂಬುದನ್ನು ಅವರು ಸಾಬೀತುಪಡಿಸಿದ್ದರೆಂದು ಅವರ ಐಎಎಸ್ ಸಹಪಾಠಿ- ಸ್ನೇಹಿತ ಪಿ.ಎನ್. ವೇದನಾರಾಯಣನ್ ಅವರು ಹೇಳುತ್ತಾರೆ.

ಕೇಂದ್ರ ಸರಕಾರದ ಸೇವೆಯಲ್ಲಿದ್ದಾಗ ಶೇಷನ್ ಅವರು ಪರಿಸರ ಹಾಗೂ ಅರಣ್ಯ ಇಲಾಖೆಯ ಕಾರ್ಯದರ್ಶಿ, ಭದ್ರತಾ ಕಾರ್ಯದರ್ಶಿ ಹಾಗೂ ಆನಂತರ ಸಂಪುಟ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 1989ರ ಲೋಕಸಭಾ ಚುನಾವಣೆಯಲ್ಲಿ ರಾಜೀವ್‌ಗಾಂಧಿ ಅಧಿಕಾರದಿಂದ ಕೆಳಗಿಳಿದಾಗ, ಶೇಷನ್ ಅವರನ್ನು ಸಂಪುಟ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡಲಾಯಿತು ಹಾಗೂ ಅವರನ್ನು ಯೋಜನಾ ಆಯೋಗದ ಸದಸ್ಯನನ್ನಾಗಿ ನೇಮಿಸಲಾಯಿತು.

ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಚಂದ್ರಶೇಖರ್ ಅವರು ಪ್ರಧಾನಿಯಾದಾಗ ಶೇಷನ್ ಅವರನ್ನು 1990ರ ಡಿಸೆಂಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಯಿತು. ಅಧಿಕಾರವಹಿಸಿಕೊಂಡ ಕೆಲವೇ ದಿನಗಳಲ್ಲಿ ಶೇಷನ್ ತನ್ನ ಹುದ್ದೆಯ ಸಾಮರ್ಥ್ಯವನ್ನು ತೋರಿಸಿಕೊಟ್ಟರು.

ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಶಿಸ್ತು ಎಂದರೆ ಏನೆಂಬುದನ್ನು ಶೇಷನ್ ಮನವರಿಕೆ ಮಾಡಿಕೊಟ್ಟರು. ಆದರೆ ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿ ಬಿಟ್ಟಿತು. ಇದಕ್ಕಾಗಿ ಹಲವಾರು ರಾಜಕಾರಣಿಗಳ ಕೆಂಗಣ್ಣಿಗೆ ಅವರು ಗುರಿಯಾಗಿದ್ದರು. ಆಗಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಶೇಷನ್‌ರನ್ನು ಉದ್ಧಟತನದ ಪ್ರತೀಕವೆಂದು ಬಣ್ಣಿಸಿದ್ದರು.

ಪ್ರತಿಯೊಂದು ಚುನಾವಣೆಯೂ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಕಾನೂನಿಗೆ ಅನುಗುಣವಾಗಿ ನಡೆಯಬೇಕೆಂಬ ತನ್ನ ನಿಲುವಿನಲ್ಲಿ ಅವರು ಒಂದಿಷ್ಟೂ ರಾಜಿ ಮಾಡಿಕೊಳ್ಳಲಿಲ್ಲ. 1994ರ ಡಿಸೆಂಬರ್‌ನಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದರೆನ್ನಲಾದ ಆಗಿನ ಕೇಂದ್ರ ಸಚಿವರಾದ ಸೀತಾರಾಮ ಕೇಸರಿ ಹಾಗೂ ಕಲ್ಪನಾಥ್ ರಾಯ್‌ರನ್ನು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಈ ಸನ್ನಿವೇಶದಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಮಧ್ಯಪ್ರವೇಶಿಸಿ ಅಂತಹ ಸಮಸ್ಯೆಗಳು ಮರುಕಳಿಸಲಾರವು ಎಂದು ಭರವಸೆ ನೀಡಿದರು.

ಶೇಷನ್ ಅವರು ಕೈಗೊಂಡ ವಿವಿಧ ಚುನಾವಣಾ ಸುಧಾರಣಾ ಕ್ರಮಗಳ ಭಾಗವಾಗಿ ಭಾರತೀಯ ಚುನಾವಣಾ ಆಯೋಗವು ಚುನಾವಣೆಗಳಲ್ಲಿ ನಡೆಯುವ 150 ತರದ ಅಕ್ರಮಗಳನ್ನು ಪಟ್ಟಿ ಮಾಡಿತ್ತು. ಶೇಷನ್ ಅವರು ಆರಂಭಿಸಿದ ಈ ಪ್ರಕ್ರಿಯೆಯನ್ನು ಅವರ ಉತ್ತರಾಧಿಕಾರಿಗಳು ಸುಧಾರಣೆಗೊಳಿಸುತ್ತಾ ಬಂದಿದ್ದಾರೆ.

ಶೇಷನ್ ಅವರ ಕಟ್ಟುನಿಟ್ಟಿನ ಚುನಾವಣಾ ಸುಧಾರಣಾ ಕ್ರಮಗಳು ರಾಜಕೀಯ ಪಕ್ಷಗಳಿಗೆ ಇರಿಸುಮುರಿಸುಂಟು ಮಾಡುತ್ತಲೇ ಇದ್ದಿತ್ತು. ಅವರ ಅಧಿಕಾರವನ್ನು ನಿಯಂತ್ರಿಸುವ ಉದ್ದೇಶದಿಂದಲೇ ಆಗಿನ ಕೇಂದ್ರ ಸರಕಾರವು ಚುನಾವಣಾ ಆಯೋಗವನ್ನು ಬಹುಸದಸ್ಯ ಸಂಸ್ಥೆಯಾಗಿ ರೂಪಿಸಿತ್ತು. ಸರಕಾರದ ನಡೆಯನ್ನು ಅವರು ವಿರೋಧಿಸಿದ್ದರೂ, ಚುನಾವಣಾ ಆಯುಕ್ತರನ್ನು ನೇಮಿಸುವ ಸರಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿತ್ತು.

ಭಾರತೀಯ ಚುನಾವಣಾ ಆಯೋಗದ ಇತಿಹಾಸದಲ್ಲೇ ಶೇಷನ್ ಅವರ ಅಧಿಕಾರಾವಧಿಯು ಮಹತ್ವದ ತಿರುವಾಗಿದೆ ಎಂದು ‘ಮಿರಾಕಲ್ ಆಫ್ ಡೆಮಾಕ್ರಸಿ: ಇಂಡಿಯಾಸ್ ಅಮೇಝಿಂಗ್ ಜರ್ನಿ’ ಕೃತಿಯಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ಬಣ್ಣಿಸಿದ್ದಾರೆ. ‘‘ಒಂದು ವೇಳೆ ಚುನಾವಣಾ ಆಯೋಗದ ಇತಿಹಾಸವನ್ನು ಬರೆಯಬೇಕಿದ್ದಲ್ಲಿ ಅದನ್ನು ಎರಡು ಭಾಗಗಳಾಗಿ ವಿಭಾಗಿಸಬೇಕಾಗಿದೆ. ಶೇಷನ್ ಪೂರ್ವ ಯುಗದಲ್ಲಿ ಚುನಾವಣಾ ಆಯೋಗವು ಕೇವಲ ಒಂದು ಸರಕಾರದ ಇಲಾಖೆಯಾಗಿ ಕಾರ್ಯನಿರ್ವಹಿಸಿತ್ತು ಹಾಗೂ ಶೇಷನ್ ಆನಂತರದ ಯುಗದಲ್ಲಿ ಚುನಾವಣಾ ಆಯೋಗವು ಹೆಚ್ಚು ಸ್ವತಂತ್ರವಾಗಿತ್ತು’’ ಎಂದವರು ತಮ್ಮ ಕೃತಿಯಲ್ಲಿ ಗಮನಸೆಳೆದಿದ್ದರು.

ಮ್ಯಾಗ್ಸೆಸೆ ಪ್ರಶಸ್ತಿ

1990ರ ದಶಕದಲ್ಲಿ ಶೇಷನ್ ಅವರು ದೇಶದ ಮಧ್ಯಮವರ್ಗದ ಜನತೆಗೆ ಒಂದು ಐಕಾನ್ ಆಗಿದ್ದರು ಹಾಗೂ ಭ್ರಷ್ಟಾಚಾರ ಮತ್ತು ಚುನಾವಣಾ ಅಕ್ರಮಗಳ ವಿರುದ್ಧ ಧರ್ಮಯುದ್ಧ ಸಾರಿದ ವ್ಯಕ್ತಿಯಾಗಿ ಕಂಡುಬಂದಿದ್ದರು. 1996ರಲ್ಲಿ ಶೇಷನ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಾಗ ಅವರು ಅಂತರ್‌ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದರು. 1997ರಲ್ಲಿ ಶೇಷನ್ ಅವರು ರಾಷ್ಟ್ರಪತಿ ಚುನಾವಣೆಗೆ ಕೆ.ಆರ್.ನಾರಾಯಣ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಎರಡು ವರ್ಷಗಳ ಆನಂತರ ಕಾಂಗ್ರೆಸ್ ಪಕ್ಷವು ಗುಜರಾತ್‌ನ ಗಾಂಧಿನಗರ ಕ್ಷೇತ್ರದಲ್ಲಿ ಶೇಷನ್ ಅವರನ್ನು ಬಿಜೆಪಿ ಅಭ್ಯರ್ಥಿ ಹಾಗೂ ಆಗಿನ ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ವಿರುದ್ಧ ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲೂ ಶೇಷನ್ ಪರಾಭವಗೊಂಡಿದ್ದರು.

ತರುವಾಯ ಶೇಷನ್ ಅವರು ಸತ್ಯಾಭಾಮ ವಿಜ್ಞಾನ ಹಾಗೂ ತಂತ್ರಜ್ಞಾನ ಸಂಸ್ಥೆಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು.

ಕ್ರಾಂತಿಕಾರಿ ಸುಧಾರಣೆಗಳ ಮೂಲಕ ಭಾರತದ ಚುನಾವಣಾ ವ್ಯವಸ್ಥೆಗೆ ಹೊಸದಿಕ್ಕನ್ನು ತೋರಿದ ಶೇಷನ್ ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ. ಶೇಷನ್ ಈಗಿಲ್ಲವಾದರೂ ಚುನಾವಣಾ ಆಯುಕ್ತರಾಗಿ ಅವರ ಸಾಧನೆಯು ಅವರನ್ನು ಭಾರತೀಯರ ಮನದಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ.

ಕೃಪೆ: ದಿ ಹಿಂದೂ

Writer - ಟಿ. ಎನ್. ರಾಮಕೃಷ್ಣನ್

contributor

Editor - ಟಿ. ಎನ್. ರಾಮಕೃಷ್ಣನ್

contributor

Similar News