ಭಾರತ ಮತ್ತು ಚೀನಾ ಸಮುದ್ರಕ್ಕೆ ಸುರಿಯುವ ತ್ಯಾಜ್ಯ ಲಾಸ್ ಏಂಜಲೀಸ್‍ಗೆ ಹರಿದು ಬರುತ್ತಿದೆ: ಟ್ರಂಪ್

Update: 2019-11-13 12:46 GMT

ನ್ಯೂಯಾರ್ಕ್, ನ.13: "ಚೀನಾ, ಭಾರತ ಮತ್ತು ರಷ್ಯಾ ತಮ್ಮ ಕೈಗಾರಿಕೆಗಳು ಉಂಟು ಮಾಡುವ ಮಾಲಿನ್ಯ ಹಾಗೂ ತ್ಯಾಜ್ಯದ ಸಮಸ್ಯೆ ನಿವಾರಣೆಗೆ ಏನನ್ನೂ ಮಾಡುತ್ತಿಲ್ಲ. ಅವುಗಳು ಸುರಿದ ತ್ಯಾಜ್ಯಗಳು ಸಾಗರದಲ್ಲಿ ಹರಿದು ಲಾಸ್ ಏಂಜಲೀಸ್ ಗೆ ಬರುತ್ತಿವೆ" ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಹವಾಮಾನ ಬದಲಾವಣೆ' ಒಂದು ಕ್ಲಿಷ್ಟಕರ ವಿಚಾರ ಎಂದ ಅವರು, ಇತರರು ನಂಬಲಿ, ಬಿಡಲಿ, ತನ್ನನ್ನು ತಾನು ಹಲವು ವಿಧಗಳಲ್ಲಿ 'ಪರಿಸರವಾದಿ' ಎಂದು ತಿಳಿದುಕೊಂಡಿದ್ದಾಗಿ ಟ್ರಂಪ್ ಹೇಳಿದ್ದಾರೆ.

"ನಾನು ಕೂಡ ಇದರ ಭಾಗವಾಗಿದ್ದೇನೆ. ಆದರೆ ನನಗೆ ಈ ಗ್ರಹದ ಅತ್ಯಂತ ಪರಿಶುದ್ಧ ಗಾಳಿ ಬೇಕು, ನನಗೆ ಶುದ್ಧ ನೀರು ಮತ್ತು ಗಾಳಿ ಬೇಕು'' ಎಂದು ಇಕನಾಮಿಕ್ ಕ್ಲಬ್ ಆಫ್ ನ್ಯೂಯಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

"ಅಮೆರಿಕಾದ ಉದ್ಯೋಗಗಳನ್ನು ಕೊಂದ ಹಾಗೂ ವಿದೇಶಿ ಮಾಲಿನ್ಯಕಾರರನ್ನು ರಕ್ಷಿಸಿದ ಭಯಾನಕ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕಾ ಹಿಂದೆ ಸರಿಯಿತು. ಈ ಒಪ್ಪಂದ ಅದು ಏಕಪಕ್ಷೀಯವಾಗಿತ್ತು, ನ್ಯಾಯಯುತವಾಗಿರಲಿಲ್ಲ'' ಎಂದೂ ಅವರು ತಿಳಿಸಿದರು.

ಪ್ಯಾರಿಸ್ ಹವಾಮಾನ ಒಪ್ಪಂದ ಅಮೆರಿಕಾಗೆ ವಿನಾಶಕಾರಿಯಾಗಿತ್ತು ಹಾಗೂ ಹಲವಾರು ಟ್ರಿಲಿಯನ್ ಡಾಲರ್ ನಷ್ಟವುಂಟು ಮಾಡುತ್ತಿತ್ತು ಎಂದೂ ಟ್ರಂಪ್ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News