ನೆಹರೂ ಕಟ್ಟಿದ ಭಾರತ

Update: 2019-11-13 16:40 GMT

ವಿಮರ್ಶಾತ್ಮಕವಾದ ಪ್ರಜಾಸತ್ತೆಗೆ ನೆಹರೂ ಆದ್ಯತೆಯನ್ನು ನೀಡಿದರು. ತನ್ನನ್ನಾಗಲಿ, ತನ್ನ ಸರಕಾರವನ್ನಾಗಲಿ ಟೀಕಿಸಿದವರನ್ನು ನೆಹರೂ ಎಂದೂ ದಮನಿಸಲಿಲ್ಲ. ಬದಲಿಗೆ ಟೀಕೆ, ವಿಮರ್ಶೆಗಳನ್ನು ಸದಾ ನಗುಮುಖದಿಂದ ಸ್ವಾಗತಿಸಿದರು. ಇಂದು ಭಾರತ ವಿಶ್ವದಲ್ಲಿ ಏನೆಲ್ಲ ಆಗಿದೆಯೋ ಅವೆಲ್ಲವೂ ನೆಹರೂ ಅವರ ದೂರದೃಷ್ಟಿಯ ಫಲ. ವಿಪರ್ಯಾಸವೆಂದರೆ ಇಂದು ನೆಹರೂ ಅವರು ಈ ದೇಶವನ್ನು ನಿಲ್ಲಿಸಿದ ನಾಲ್ಕೂ ಸ್ತಂಭಗಳು ಅಲುಗಾಡುತ್ತಿವೆ. ನೆಹರೂವನ್ನು ಟೀಕಿಸುವುದೇ ಆಡಳಿತ ನಡೆಸುವ ಕ್ರಮ ಎನ್ನುವ ಒಂದು ವರ್ಗ ಹುಟ್ಟಿಕೊಂಡಿದೆ.

ವಿಧಿಯ ಚಕ್ರ ಮುಂದೊಮ್ಮೆ ಈ ದೇಶವನ್ನು ತ್ಯಜಿಸಲು ಇಂಗ್ಲಿಷರನ್ನು ಖಂಡಿತವಾಗಿಯೂ ಒತ್ತಾಯಿಸುತ್ತದೆ. ಆದರೆ ಅವರು ಬಿಟ್ಟು ಹೋಗುವ ಭಾರತ ಹೇಗಿರುತ್ತದೆ? ಶ ತಮಾನಗಳಿಂದ ಹರಿಯುತ್ತಿದ್ದ ಹೊಳೆಯೊಂದು ಒಣಗಿದ ಬಳಿಕ, ಉಳಿವ ಕೆಸರು, ಕೊಳೆಯ ಜೊತೆಗೆ, ಸಂಪೂರ್ಣ ದುಃಖ ತುಂಬಿದ ಭಾರತವೊಂದನ್ನು ಅವರು ತ್ಯಜಿಸುತ್ತಾರೆ
- ರವೀಂದ್ರನಾಥ ಟ್ಯಾಗೋರ್, 1941

ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗುವಾಗ ಇಲ್ಲೇನೂ ಸಂಭ್ರಮಗಳು ತುಂಬಿ ತುಳುಕುತ್ತಿರಲಿಲ್ಲ. ಇಲ್ಲಿರುವ ಸುಖ, ಸಂತೋಷ, ಸಂಪತ್ತನ್ನು ನಿರಂತರವಾಗಿ ಸೂರೆ ಹೊಡೆದು ಬಡತನ, ದುಃಖಭರಿತ ದೇಶವನ್ನು ಅವರು ಬಿಟ್ಟು ಹೋದರು.

1947 ರಲ್ಲಿ ಸ್ವಾತಂತ್ರ್ಯದ ನಂತರ, ಭಾರತವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿತ್ತು. ಬ್ರಿಟಿಷರ ಎರಡು ಶತಮಾನಗಳ ಲೂಟಿ, ನಿರ್ಲಕ್ಷ್ಯ ಮತ್ತು ಶೋಷಣೆಯಿಂದ 300 ದಶಲಕ್ಷಕ್ಕೂ ಹೆಚ್ಚು ಜನರು ನಿರ್ಗತಿಕರಾಗಿ ಕಳೆದುಹೋಗಿದ್ದರು. ಇಲ್ಲಿನ ಮೂಲಭೂತ ಸೌಲಭ್ಯಗಳು ಬ್ರಿಟನ್ ಹಿತಾಸಕ್ತಿಯನ್ನು ಪೂರೈಸುವುದಕ್ಕಾಗಿ ನಿರ್ಮಾಣವಾಗಿತ್ತೇ ಹೊರತು, ಜನರ ಅಗತ್ಯ ಪೂರೈಸುವುದಕ್ಕಲ್ಲ. ಬ್ರಿಟನ್ ಯುರೋಪ್ ಖಂಡದಲ್ಲಿ ಎರಡು ಯುದ್ಧವನ್ನು ಗೆಲ್ಲುವಾಗ, ಸೋತದ್ದು ಮಾತ್ರ ಭಾರತ. ಅದರಿಂದಾಗಿ ಬರಿದಾಗಿದ್ದು ಭಾರತದ ಸಂಪನ್ಮೂಲ ಮತ್ತು ಮಾನವ ಶಕ್ತಿ. ಬಂಗಾಳ ಕ್ಷಾಮ 30 ಲಕ್ಷ ಭಾರತೀಯರನ್ನು ಕೊಂದು ಹಾಕಿತ್ತು. ದೇಶವಿಭಜನೆಯಂತೂ ಗಾಯದ ಮೇಲೆ ಎಳೆದ ಬರೆ. ಸಾಮೂಹಿಕ ಹತ್ಯೆ, 14 ಮಿಲಿಯನ್ ನಿರಾಶ್ರಿತರ ಸೃಷ್ಟಿಗೆ ಕಾರಣವಾಯಿತು. ದೇಶದ ಅರ್ಧದಷ್ಟು ಜನಸಂಖ್ಯೆ ಬಡತನ ರೇಖೆಗಿಂತಲೂ ಕೆಳಗಿದ್ದರು. ಶೇ. 80ಕ್ಕೂ ಅಧಿಕ ಅನಕ್ಷರಸ್ಥರು, ಜನರ ಸರಾಸರಿ ಜೀವಿತಾವಧಿ ಕೇವಲ 30 ವರ್ಷ. ಜೊತೆಗೆ ಹೆಚ್ಚಿನ ಪ್ರದೇಶಗಳು ಬರಗಾಲ ಪೀಡಿತ.

ಹೀಗೆ ರೋಗಗ್ರಸ್ಥವಾಗಿ ಹುಟ್ಟಿದ ದೇಶ ಆ ರೋಗದಿಂದಲೇ ಬಹುಬೇಗ ಸಾಯುತ್ತದೆ ಎಂದು ವಿಶ್ವ ನಿರೀಕ್ಷಿಸಿತ್ತು. ಆದರೆ ಅದ್ಭುತವೊಂದು ಸಂಭವಿಸಿತು. 1950ರ ದಶಕದಲ್ಲಿ ಪಂಚವಾರ್ಷಿಕ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಿದಾಗ, ವಿಶ್ವ ಭಾರತದೆಡೆಗೆ ವಿಸ್ಮಿತವಾಗಿ ನೋಡಿತು. ಭಾರತದ ಮಾಜಿ ಆಡಳಿತಗಾರ ಬ್ರಿಟನ್‌ನ ಗ್ರಿಫಿತ್ ಭಾರತದ ಕ್ಷಿಪ್ರ ಅಭಿವೃದ್ಧಿಯನ್ನು ಶ್ಲಾಘಿಸುತ್ತಾ ‘‘ಸ್ವಾತಂತ್ರದ ಬಳಿಕದ ಭಾರತದ ಆಹಾರ ಉತ್ಪಾದನೆಯು ಅದ್ಭುತವಾಗಿದೆ. ಅಸಾಧ್ಯವೆಂದು ಭಾವಿಸಿದ್ದನ್ನು ಮಾಡುವಲ್ಲಿ ಭಾರತ ಯಶಸ್ವಿಯಾಗುತ್ತಿದೆ’’ ಎಂದು ಬರೆದಿದ್ದರು.

1950ರ ದಶಕ ಉರುಳಿದಾಗ ಮತ್ತು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದಾಗ, ಭಾರತ ಅಭಿವೃದ್ಧಿಯ ದಿಕ್ಕಿನತ್ತ ದಾವಿಸುತ್ತಿರುವುದು ವಿಶ್ವದ ಗಮನಕ್ಕೆ ಬಂದಿತು; ಕೃಷಿ ಕ್ಷೇತ್ರ ಮಾತ್ರವಲ್ಲ, ಕೈಗಾರಿಕೆಗಳಲ್ಲೂ ಭಾರತ ಮುಂದಕ್ಕೆ ಹೆಜ್ಜೆಯಿಟ್ಟಿತು. ಅಣೆಕಟ್ಟುಗಳು ಎದ್ದವು. ಬರಗಾಲ ಪೀಡಿತ ಪ್ರದೇಶಗಳಲ್ಲಿ ಹಸಿರು ಉಕ್ಕಿದವು. 1900-1947ರ ನಡುವಿನ 40 ವರ್ಷಗಳ ಶೂನ್ಯ-ಶೇಕಡಾ ಬೆಳವಣಿಗೆಯಿಂದ, 1962 ರವರೆಗೆ ಆರ್ಥಿಕತೆಯು ವಾರ್ಷಿಕವಾಗಿ 4 ಪ್ರತಿಶತದಷ್ಟು ಬೆಳೆಯಿತು. ಇದು ಚೀನಾ, ಜಪಾನ್ ಮತ್ತು ಯುಕೆಗಿಂತ ಮುಂದಿದೆ.

ಅಂದ ಹಾಗೆ ಈ ಸಾಧನೆಯ ಹಿಂದೆ ಒಂದು ಶಕ್ತಿಯಿದೆ. ಆ ಶಕ್ತಿಯ ಹೆಸರು ಜವಾಹರಲಾಲ್ ನೆಹರೂ. ತನ್ನ ಕೈಗೆ ಸಿಕ್ಕಿದ ಒಣಗಿದ ನದಿಯಲ್ಲಿ ಮತ್ತೆ ನೀರು ಉಕ್ಕಿಸಿದ ಹೆಮ್ಮೆ ಅವರದು. ಭಾರತದ ಅಭಿವೃದ್ಧಿಯ ಕೆಚ್ಚೆದೆಯ ಹೋರಾಟದ ಹಿಂದೆ ಅಂದಿನ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಹೃದಯ ಮತ್ತು ಆತ್ಮವಿತ್ತು ಎಂದು ಅಮೆರಿಕದ ರಾಜಕೀಯ ತಜ್ಞ ಮೈಕೆಲ್ ಬ್ರಚರ್ ಬಣ್ಣಿಸುತ್ತಾರೆ. ಗಾಂಧಿಯ ಹತ್ಯೆಯ ಬಳಿಕ 1947ರಿಂದ 1964ರವರೆಗೆ, ನೆಹರೂ ಭಾರತದ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ದೂರದೃಷ್ಟಿಯ ಫಲವಾಗಿ ಅಭಿವೃದ್ಧಿ ಹೊಂದಿದ ಯಶಸ್ವೀ ಪ್ರಜಾಪ್ರಭುತ್ವ ದೇಶದೊಳಗೆ ನಾವು ಬದುಕಿದ್ದೇವೆ.

ನೆಹರೂ ಚಿಂತನೆಯ ನಾಲ್ಕು ಸ್ತಂಭಗಳು
ನಾಲ್ಕು ಸ್ತಂಭಗಳ ಮೇಲೆ ನೆಹರೂ ಅವರು ಭಾರತವನ್ನು ನಿರ್ಮಿಸಿದರು. ಪ್ರಜಾಪ್ರಭುತ್ವ, ಜಾತ್ಯತೀತತೆ, ಸಮಾಜವಾದ ಮತ್ತು ಅಲಿಪ್ತ ನೀತಿ. ಸ್ವಾತಂತ್ರ ಚಳವಳಿಯಲ್ಲಿ ತೊಡಗಿಸಿಕೊಂಡು ಗಳಿಸಿದ ಅನುಭವ, ಗಾಂಧೀಜಿಯ ಜೊತೆಗಿನ ಚರ್ಚೆ, ವಿದೇಶಗಳ ರಾಜಕೀಯ ಬೆಳವಣಿಗೆಗಳ ಆಳವಾದ ಅಧ್ಯಯನದ ತಳಹದಿಯಲ್ಲಿ ರೂಪುಗೊಂ ಚಿಂತನೆಗಳು ನೆಹರೂ ಅವರದು.

ರಾತ್ರೋರಾತ್ರಿ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಯಿತು; ಅದರ ಜನಸಂಖ್ಯೆಯ ಸಂಪೂರ್ಣ ಗಾತ್ರವು ಇತರ ಪ್ರಜಾಪ್ರಭುತ್ವ ದೇಶಗಳಲ್ಲಿರುವ ಜನರಿಗಿಂತ ದೊಡ್ಡದಾದ ಮತದಾರರ ನೆಲೆಯನ್ನು ನೀಡಿತು. ಆದರೆ ಆ ಮತದಾರರು ಬಡವರು ಮತ್ತು ಅನಕ್ಷರಸ್ಥರು ಆಗಿರುವುದು ನೆಹರೂ ಅವರಿಗೆ ಬಹುದೊಡ್ಡ ಸವಾಲಾಗಿತ್ತು. ಪ್ರಜಾಸತ್ತೆಯು ಯಶಸ್ವಿಯಾಗಬೇಕಾದರೆ ಪ್ರಬುದ್ಧ ಜನರನ್ನು ರೂಪಿಸುವುದೂ ಅಷ್ಟೇ ಅಗತ್ಯದ ಕೆಲಸ. ಈ ನಿಟ್ಟಿನಲ್ಲಿ ತಳಸ್ತರದ ಜನರವರೆಗೆ ತಲುಪುವ ಅಗತ್ಯವನ್ನು ಅವರು ಮನಗಂಡರು.

ಸ್ವರಾಜ್ ಕಲ್ಪನೆಯಲ್ಲಿ ಹುಟ್ಟಿದ ಪಂಚಾಯತ್ ರಾಜ್‌ನ್ನು ಹಳ್ಳಿಗಳಿಗೆ ತಲುಪಿಸುವಲ್ಲಿ ನೆಹರೂ ಶ್ರಮಿಸಿದರು. ರಾಜಕೀಯ ಪ್ರಜಾಸತ್ತೆ ಯಶಸ್ವಿಯಾಗಬೇಕಾದರೆ ಆರ್ಥಿಕವಾಗಿಯೂ ಜನರು ಸ್ವತಂತ್ರವಾಗಬೇಕು ಎನ್ನುವುದು ಅವರ ನಿಲುವಾಗಿತ್ತು. 1957ರಲ್ಲಿ, ನೆಹರೂ ಪಂಚಾಯತ್ ರಾಜ್ ಪರಿಕಲ್ಪನೆಯ ಮೂರು ಹಂತವನ್ನು ಪರಿಚಯಿಸಿದರು. ಪ್ರಜಾಸತ್ತೆಯನ್ನು ಹಳ್ಳಿಯಿಂದ ಆರಂಭಗೊಳಿಸುವ ಅವರ ಕನಸಿಗೆ ರೂಪ ಸಿಕ್ಕಿತು. ಏಳು ವರ್ಷಗಳ ಕಾಲ ಇದಕ್ಕಾಗಿ ಶ್ರಮಿಸಿದರು. 1964ರಲ್ಲಿ ನೆಹರೂ ಅವರ ಸಾವಿನೊಂದಿಗೆ, ಪಂಚಾಯತಿ ರಾಜ್ ನಿಧಾನಗತಿಯ ಸಾವನ್ನಪ್ಪಿತು. ಅದು ಮತ್ತೆ ಪುನರುತ್ಥಾನ ಗೊಂಡದ್ದು ರಾಜೀವ್‌ಗಾಂಧಿ ಕಾಲದಲ್ಲಿ. ನೆಹರೂ ಅಲ್ಲದೆ ಬೇರಾರೇ ಪ್ರಧಾನಿಯಾಗಿದ್ದರೂ ಈ ದೇಶದ ಜಾತ್ಯತೀತ ನೆಲೆಗಟ್ಟು ಇಷ್ಟು ಗಟ್ಟಿಯಾಗಿ ಉಳಿಯುತ್ತಿರಲಿಲ್ಲ. ಜಾತ್ಯತೀತ ಭಾರತಕ್ಕಾಗಿ ಅವರು ಕೊನೆಯವರೆಗೂ ಶ್ರಮಿಸಿದರು.

ನೆಹರೂ 1951ರಲ್ಲಿ ಹೀಗೆ ಹೇಳಿದ್ದರು: ‘‘ಧರ್ಮದ ಹೆಸರಿನಲ್ಲಿ ಯಾರಾದರೂ ಇನ್ನೊಬ್ಬರ ವಿರುದ್ಧ ಕೈ ಎತ್ತುವುದ್ತಿದ್ದರೆ, ಅದು ಸರಕಾರದ ಒಳಗಿನ ಅಥವಾ ಹೊರಗಿನವರಾಗಿರಲಿ, ನನ್ನ ಜೀವನದ ಕೊನೆಯ ಉಸಿರಿನವರೆಗೂ ನಾನು ಅವರೊಂದಿಗೆ ಹೋರಾಡುತ್ತೇನೆ.’’ ಅವರು ಮಂದಿರ ಮಸೀದಿಗಳ ದೇಶಕ್ಕೆ ಆದ್ಯತೆಗಳನ್ನು ನೀಡಲಿಲ್ಲ. ಬದಲಿಗೆ ‘‘ಈ ದೇಶದ ಪಾಲಿಗೆ ಬೃಹತ್ ಅಣೆಕಟ್ಟುಗಳೇ ದೇವಸ್ಥಾನಗಳು’’ ಎಂದು ಘೋಷಿಸಿದರು. ಒಂದೆಡೆ ಕೈಗಾರಿಕೆಗಳಿಗೆ ಆದ್ಯತೆಗಳನ್ನು ನೀಡುತ್ತಲೇ ಮಗದೊಂದೆಡೆ ಸಮಾಜವಾದದ ಮೂಲಕ ಆರ್ಥಿಕತೆಯನ್ನು ಕಟ್ಟುವ ಕನಸು ಕಂಡರು.

ನೆಹರೂ ಪ್ರಧಾನಿಯಾಗಿದ್ದಾಗ ವಿಶ್ವವು ಅಮೆರಿಕ-ರಶ್ಯಗಳಾಗಿ ಒಡೆದಿತ್ತು. ನೆಹರೂ ಅವರು ಈ ಎರಡೂ ದೇಶಗಳ ನಡುವೆ ಗುರುತಿಸಿಕೊಳ್ಳದೆ ಅಲಿಪ್ತ ದೇಶಗಳ ನಾಯಕನಾಗಿ ಗುರುತಿಸಿಕೊಂಡರು. ತೃತೀಯ ಶಕ್ತಿಯ ನೇತೃತ್ವವನ್ನು ವಹಿಸಿದರು. ವಿಶ್ವದ ಎರಡು ಸೂಪರ್ ಶಕ್ತಿಗಳ ನಿರಾಕರಣೆ ನೆಹರೂ ಅವರ ವಿದೇಶಾಂಗ ನೀತಿಯ ಬಹುದೊಡ್ಡ ಹೆಗ್ಗಳಿಕೆಯಾಗಿತ್ತು. ಇದೇ ಸಂದರ್ಭದಲ್ಲಿ ಭಾರತದಂತಹ ಬಡ ದೇಶಕ್ಕೆ ಸಮಾಜವಾದದ ಅಗತ್ಯವನ್ನೂ ಅವರು ಮನಗಂಡರು. ರಶ್ಯದ ಜೊತೆಗೆ ಮೃದು ಒಲವನ್ನು ಇಟ್ಟುಕೊಂಡರು.

ನೆಹರೂ ಅವರು ಕೈಗಾರಿಕಾ ಕ್ರಾಂತಿಯನ್ನು ಬೆಂಬಲಿಸಿದರು. ಆದರೆ ಇದೇ ಸಂದರ್ಭದಲ್ಲಿ ಅದು ಮಾನವೀಯ ನೆಲೆಯಲ್ಲಿರಬೇಕು ಎಂದು ಬಯಸಿದರು. ನೆಹರೂ ಸಮಾಜವಾದವು ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಮತ್ತು ಸಂಗ್ರಹಿಸಲು ಅನುಮತಿಸಲಿಲ್ಲ, ಅಂದರೆ ಕೈಗಾರಿಕೀಕರಣಕ್ಕೆ ಅಗತ್ಯವಾದ ಹೆಚ್ಚುವರಿ ಭೂಮಿಯನ್ನು ಭಾರತೀಯ ಕಾರ್ಮಿಕ ವರ್ಗ ಮತ್ತು ರೈತರಿಂದ ಬಲವಂತವಾಗಿ ಪಡೆಯಲು ಸಾಧ್ಯವಿರಲಿಲ್ಲ. ಇತ್ತ ರೈಲ್ವೆಗಳು, ವಿಮಾನಯಾನ ಸಂಸ್ಥೆಗಳು, ಬ್ರಿಟಿಷ್ ಸಂಸ್ಥೆಗಳ ಎಡಭಾಗ ಮತ್ತು ಇಂಪೀರಿಯಲ್ ಬ್ಯಾಂಕ್ (ನಂತರ ಇದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು) ನೆಹರೂ ಕಾಲದಲ್ಲೇ ರಾಷ್ಟ್ರೀಕರಣಗೊಂಡಿತು.

ನೆಹರೂ ಅವರ ಮೂರು ಪಂಚ ವಾರ್ಷಿಕ ಯೋಜನೆಗಳ ಅವಧಿಯಲ್ಲಿ (1951-1965), ಭಾರತದ ಕೈಗಾರಿಕಾ ವಲಯವು ವರ್ಷಕ್ಕೆ 7 1 ಪ್ರತಿಶತದಷ್ಟು ಬೆಳೆಯಿತು. ಗ್ರಾಹಕ-ಸರಕುಗಳ ಉದ್ಯಮಗಳ ಸಂಖ್ಯೆ 7 0 ಪ್ರತಿಶತದಷ್ಟು ಹೆಚ್ಚಾದವು. ಉತ್ಪಾದನೆ ಬಂಡವಾಳ ಸರಕುಗಳ ಹತ್ತು ಪಟ್ಟು ಹೆಚ್ಚಾದವು. ಭಾರತವು ತನ್ನ ಕೈಗಾರಿಕಾ ಸರಕುಗಳ 90 ಪ್ರತಿಶತವನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಿಂದ 1960 ರಲ್ಲಿ ಅದನ್ನು ಅರ್ಧಕ್ಕೆ ಇಳಿಸಿತು ಮತ್ತು 1974 ರಲ್ಲಿ ಕೇವಲ 9 ಪ್ರತಿಶತದಷ್ಟು ಸರಕುಗಳನ್ನು ಆಮದು ಮಾಡಿತು. ಈ ರೀತಿಯ ಆರ್ಥಿಕ ಸ್ವಾಯತ್ತತೆಯು ಭಾರತವನ್ನು ಸ್ವಾವಲಂಬಿಯನ್ನಾಗಿಸುತ್ತಾ ಬಂತು.

1947ರಲ್ಲಿ, ಭಾರತದ ಒಟ್ಟು ವ್ಯಾಪಾರದ 45 ಪ್ರತಿಶತ ಅಮೆರಿಕ ಮತ್ತು ಬ್ರಿಟನ್ ಜೊತೆ ಇತ್ತು. 1977ರ ಹೊತ್ತಿಗೆ, ಇದನ್ನು ಕೇವಲ 20 ಪ್ರತಿಶತಕ್ಕೆ ಇಳಿಸಲಾಯಿತು. 1947ರ ನಂತರ, ಭಾರತವು ತೀವ್ರ ಆಹಾರದ ಕೊರತೆಯನ್ನು ಎದುರಿಸಿತು ಮತ್ತು 1947 ಮತ್ತು 1953 ರ ನಡುವೆ 14 ದಶಲಕ್ಷ ಟನ್ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಆದ್ದರಿಂದ, ಕೃಷಿಯಲ್ಲಿ ಕ್ರಾಂತಿಕಾರಕ ಕಾರ್ಯವನ್ನು ನೆಹರೂ ವಹಿಸಿಕೊಂಡರು. 1957ರ ಹೊತ್ತಿಗೆ 150 ವರ್ಷಗಳ ಹಿಂದಿನ ಹಳೆಯ ಜಮೀನ್ದಾರಿ ವ್ಯವಸ್ಥೆಯಿಂದ ಭಾರತ ಹೊರಬಂತು. ರೈತರಿಗೆ ಸಹಕಾರಿ ಮತ್ತು ಸಾಂಸ್ಥಿಕ ಸಬ್ಸಿಡಿಗಳನ್ನು ನೀಡುವ ಮೂಲಕ ಭೂಮಾಲಕರು ಮತ್ತು ಬಡ್ಡಿಕೋರರಿಂದ ಕೃಷಿ ವಲಯವನ್ನು ನಿಧಾನಕ್ಕೆ ಹೊರತರುವ ಪ್ರಯತ್ನ ಮಾಡಿದರು. ಮತ್ತು ಕೊನೆಯದಾಗಿ ಜ್ಞಾನ ಕ್ಷೇತ್ರ ನೆಹರೂ ಅವರ ಮುಂದೆ ಖಾಲಿ ಬಿದ್ದಿತ್ತು. ಬ್ರಿಟಿಷರು ಉದ್ದೇಶಪೂರ್ವಕವಾಗಿ ಭಾರತವನ್ನು ಬೌದ್ಧಿಕವಾಗಿ ಬಂಜರು ಪಾಳುಭೂಮಿಯಾಗಿಸಿ ತೊರೆದರು. ಸ್ವತಃ ಕೇಂಬ್ರಿಜ್‌ನಲ್ಲಿ ಶಿಕ್ಷಣ ಪಡೆದಿದ್ದ ನೆಹರೂ ಅವರಿಗೆ ಜ್ಞಾನದ ಕುರಿತಂತೆ ಸ್ಪಷ್ಟ ಕಲ್ಪನೆಯಿತ್ತು. ಪ್ರತಿಷ್ಠಿತ ಐಐಟಿಗಳು (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ), ಸಿಎಸ್‌ಐಆರ್ (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ), ಭಾಭಾ ಪರಮಾಣು ಸಂಶೋಧನಾ ಕೇಂದ್ರ, ರಾಷ್ಟ್ರೀಯ ಭೌತಿಕ ಮತ್ತು ರಾಸಾಯನಿಕ ಪ್ರಯೋಗಾಲಯಗಳು, ಏಮ್ಸ್ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್) ನೆಹರೂ ಅವರ ಕೊಡುಗೆ. ಬಾಂಬೆಯಲ್ಲಿ ಪರಮಾಣು ರಿಯಾಕ್ಟರ್ ಅನ್ನು ಸ್ಥಾಪಿಸಲಾಯಿತು. ವೈಜ್ಞಾನಿಕ ಸಂಶೋಧನೆಗೆ ನೀಡುವ ರಾಷ್ಟ್ರೀಯ ವೆಚ್ಚವು 1949ರಲ್ಲಿ 10 ಮಿಲಿಯನ್ ರೂ. ಇದ್ದರೆ, ಅದು 1977ರಲ್ಲಿ 4.5 ಬಿಲಿಯನ್ ರೂ.ಗಳಿಗೆ ಏರಿತು.

ವಿಮರ್ಶಾತ್ಮಕವಾದ ಪ್ರಜಾಸತ್ತೆಗೆ ನೆಹರೂ ಆದ್ಯತೆಯನ್ನು ನೀಡಿದರು. ತನ್ನನ್ನಾಗಲಿ, ತನ್ನ ಸರಕಾರವನ್ನಾಗಲಿ ಟೀಕಿಸಿದವರನ್ನು ನೆಹರೂ ಎಂದೂ ದಮನಿಸಲಿಲ್ಲ. ಬದಲಿಗೆ ಟೀಕೆ, ವಿಮರ್ಶೆಗಳನ್ನು ಸದಾ ನಗುಮುಖದಿಂದ ಸ್ವಾಗತಿಸಿದರು. ಇಂದು ಭಾರತ ವಿಶ್ವದಲ್ಲಿ ಏನೆಲ್ಲ ಆಗಿದೆಯೋ ಅವೆಲ್ಲವೂ ನೆಹರೂ ಅವರ ದೂರದೃಷ್ಟಿಯ ಫಲ.

ವಿಪರ್ಯಾಸವೆಂದರೆ ಇಂದು ನೆಹರೂ ಅವರು ಈ ದೇಶವನ್ನು ನಿಲ್ಲಿಸಿದ ನಾಲ್ಕೂ ಸ್ತಂಭಗಳು ಅಲುಗಾಡುತ್ತಿವೆ. ನೆಹರೂವನ್ನು ಟೀಕಿಸುವುದೇ ಆಡಳಿತ ನಡೆಸುವ ಕ್ರಮ ಎನ್ನುವ ಒಂದು ವರ್ಗ ಹುಟ್ಟಿಕೊಂಡಿದೆ. ಅಣೆಕಟ್ಟುಗಳು, ಕೈಗಾರಿಕೆಗಳ ಜಾಗದಲ್ಲಿ ಪ್ರತಿಮೆಗಳು, ಮಂದಿರಗಳು ತಲೆಯೆತ್ತುತ್ತಿವೆ. ನೆಹರೂ ವಿರುದ್ಧ ವಿರೋಧಿಗಳು ನಡೆಸುವ ಪ್ರತಿ ದಾಳಿಗಳು ಅಂತಿಮವಾಗಿ ಈ ದೇಶದ ಪ್ರಜಾಸತ್ತೆಗೆ, ಅಭಿವೃದ್ಧಿಗೆ ಘಾಸಿ ಮಾಡುತ್ತಿವೆ. ನೆಹರೂ ಕಟ್ಟಿ ನಿಲ್ಲಿಸಿದ ದೇಶವನ್ನು ಸರ್ವನಾಶ ಮಾಡುತ್ತಿರುವುದನ್ನೇ ಸಾಧನೆಯೆಂದು ಮಾಧ್ಯಮಗಳು ಬಿಂಬಿಸುತ್ತಿವೆ. ನೆಹರೂ ಚಿಂತನೆಯ ಅಗತ್ಯವನ್ನು ವರ್ತಮಾನ ಕೂಗಿ ಹೇಳುತ್ತಿದೆ.

Writer - ಅವನೀಂದ್ರ ಬೆಂಗಳೂರು

contributor

Editor - ಅವನೀಂದ್ರ ಬೆಂಗಳೂರು

contributor

Similar News