ಆರ್‌ಸಿಇಪಿ ಭಾರತದ ಹಿತಾಸಕ್ತಿಗೆ ಪೂರಕ, ಚೀನಿ ಆಮದುಗಳ ಭೀತಿ ತಪ್ಪು: ಪನಗಾರಿಯಾ

Update: 2019-11-13 17:18 GMT
ಫೋಟೋ: indianexpress.com

ಹೊಸದಿಲ್ಲಿ,ನ.13: ಇತ್ತೀಚಿಗೆ ಭಾರತವು ಸಹಿ ಹಾಕಲು ನಿರಾಕರಿಸಿರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದವು ದೇಶದ ಹಿತಾಸಕ್ತಿಗಳಿಗೆ ಪೂರಕವಾಗಿರುತ್ತಿತ್ತು ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.

ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿಯ 15 ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿ ಭಾರತವು ಹಾಕದಿದ್ದರೆ ಯಾವುದೇ ಬಹುರಾಷ್ಟ್ರೀಯ ಕಂಪನಿಯು ನಮ್ಮ ದೇಶವನ್ನು ಪ್ರವೇಶಿಸಲು ಬಯಸುವುದಿಲ್ಲ ಎಂದಿದ್ದಾರೆ.

 ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ,ಆರ್‌ಸಿಇಪಿಯಿಂದ ಚೀನಿ ಆಮದು ಸರಕುಗಳು ದೇಶದ ಮಾರುಕಟ್ಟೆಯನ್ನು ಆಕ್ರಮಿಸುತ್ತವೆ ಎಂಬ ಭೀತಿಯನ್ನು ತಳ್ಳಿಹಾಕಿರುವ ಅವರು,ಇಂತಹ ಮುಕ್ತ ವ್ಯಾಪಾರ ಒಪ್ಪಂದಗಳು ತಕ್ಷಣವೇ ಜಾರಿಗೊಳ್ಳುವುದಿಲ್ಲ. ಸುಂಕಗಳನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ. ಹೀಗಾಗಿ ಇಂದು ಒಪ್ಪಂದಕ್ಕೆ ಸಹಿ ಹಾಕಿದರೆ ನಾಳೆಯೇ ಮಾರುಕಟ್ಟೆಗಳಿಗೆ ಚೀನಿ ಉತ್ಪನ್ನಗಳು ದಾಳಿ ಮಾಡುತ್ತವೆ ಎನ್ನುವುದು ಸಂಪೂರ್ಣ ತಪ್ಪು ಎಂದಿದ್ದಾರೆ.

ಬೃಹತ್ ಬಹು ರಾಷ್ಟ್ರೀಯ ಕಂಪನಿಗಳನ್ನು ಹೂಡಿಕೆದಾರರನ್ನಾಗಿ ದೇಶದೊಳಕ್ಕೆ ತರಲು ಇದು ಭಾರತಕ್ಕೆ ಸಕಾಲವಾಗಿದೆ. ಅವುಗಳಿಗೆ ಏಷ್ಯದ ಮಾರುಕಟ್ಟೆಗಳಲ್ಲಿ ಸುಂಕಮುಕ್ತ ಪ್ರವೇಶವಿದ್ದರೆ ಅದು ಅವು ಭಾರತದಲ್ಲಿ ನೆಲೆಗೊಳ್ಳಲು ಹೆಚ್ಚುವರಿ ಉತ್ತೇಜನವಾಗುತ್ತದೆ. ಇತರ 15 ರಾಷ್ಟ್ರಗಳು ಆರ್‌ಸಿಇಪಿಗೆ ಸಹಿ ಹಾಕಿ ನಾವು ಸುಮ್ಮನೆ ಕುಳಿತಿದ್ದರೆ ಯಾವುದೇ ಬಹು ರಾಷ್ಟ್ರೀಯ ಕಂಪನಿ ನಮ್ಮ ದೇಶಕ್ಕೆ ಬರಲು ಬಯಸುವುದಿಲ್ಲ ಎಂದು ಪನಗಾರಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News