ಅಮೆರಿಕದಲ್ಲಿ ಅತಿ ಹೆಚ್ಚು ದ್ವೇಷಾಪರಾಧ ಘಟನೆಗಳು ಯಾರ ವಿರುದ್ಧ ಗೊತ್ತಾ?

Update: 2019-11-13 17:21 GMT

ವಾಶಿಂಗ್ಟನ್, ನ. 13: ಅಮೆರಿಕದಲ್ಲಿ ಕಳೆದ ವರ್ಷ ಯಹೂದಿಗಳ ವಿರುದ್ಧ ಧರ್ಮದ ಆಧಾರದಲ್ಲಿ ಅತಿ ಹೆಚ್ಚಿನ ದ್ವೇಷಾಪರಾಧಗಳು ನಡೆದಿವೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ)ನ ಅಂಕಿ-ಅಂಶಗಳು ತಿಳಿಸಿವೆ. ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಮುಸ್ಲಿಮರು ಮತ್ತು ಸಿಖ್ಖರು ಇದ್ದಾರೆ.

ಅಮೆರಿಕದಲ್ಲಿ 2018ರಲ್ಲಿ ಒಟ್ಟು 7,120 ದ್ವೇಷಾಪರಾಧ ಪ್ರಕರಣಗಳು ನಡೆದಿವೆ ಎಂಬುದಾಗಿ ಕಾನೂನು ಅನುಷ್ಠಾನ ಸಂಸ್ಥೆಗಳು ಎಫ್‌ಬಿಐಗೆ ವರದಿ ಮಾಡಿವೆ ಎಂದು ಅದು ಮಂಗಳವಾರ ಬಿಡುಗಡೆ ಮಾಡಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇದು 2017ರಲ್ಲಿ ನಡೆದ 7,175 ಪ್ರಕರಣಗಳಿಗಿಂತ ಕೊಂಚ ಕಡಿಮೆಯಾಗಿದೆ.

ಕಳೆದ ವರ್ಷ ಧರ್ಮದ ಆಧಾರದಲ್ಲಿ ಯಹೂದಿಗಳ ವಿರುದ್ಧ ಅತಿ ಹೆಚ್ಚಿನ ಅಪರಾಧಗಳು, ಅಂದರೆ 835 ಅಪರಾಧ ಪ್ರಕರಣಗಳು ನಡೆದಿವೆ. ಮುಸ್ಲಿಮರ ವಿರುದ್ಧ 188 ಮತ್ತು ಸಿಖ್ಖರ ವಿರುದ್ಧ 60 ಅಪರಾಧಗಳು ನಡೆದಿವೆ.

ಇತರ ಧರ್ಮದವರ ವಿರುದ್ಧ 91 ದ್ವೇಷಾಪರಾಧಗಳು ನಡೆದಿವೆ ಎಂದು ಎಫ್‌ಬಿಐ ವರದಿ ತಿಳಿಸಿದೆ. ಈ ಪೈಕಿ 12 ಅಪರಾಧಗಳು ಹಿಂದೂಗಳ ವಿರುದ್ಧ ನಡೆದರೆ, 10 ಅಪರಾಧಗಳನ್ನು ಬೌದ್ಧರ ವಿರುದ್ಧ ನಡೆಸಲಾಗಿದೆ.

ಜನಾಂಗೀಯ ದ್ವೇಷಾಪರಾಧಕ್ಕೆ ಕರಿಯರು ಅತಿ ಹೆಚ್ಚು ಬಲಿ

 ಅದೇ ವೇಳೆ, ಜನಾಂಗೀಯ ಆಧಾರದಲ್ಲಿ 4,047 ದ್ವೇಷಾಪರಾಧಗಳು ನಡೆದಿವೆ ಎಂದು ಎಫ್‌ ಬಿಐ ವರದಿ ಹೇಳಿದೆ. ಈ ವಿಭಾಗದಲ್ಲಿ, ಗರಿಷ್ಠ, ಅಂದರೆ 1,943 ದ್ವೇಷಾಪರಾಧಗಳು ಕರಿಯರು ಅಥವಾ ಆಫ್ರಿಕನ್ ಅಮೆರಿಕನ್ನರ ವಿರುದ್ಧ ನಡೆದಿವೆ. ಎರಡನೇ ಅತಿ ಹೆಚ್ಚು, ಅಂದರೆ 762 ಅಪರಾಧಗಳು ಬಿಳಿಯರ ವಿರುದ್ಧ ಮತ್ತು 485 ಅಪರಾಧಗಳು ಹಿಸ್ಪಾನಿಕ್ (ಲ್ಯಾಟಿನೊ) ಜನಾಂಗೀಯರ ವಿರುದ್ಧ ನಡೆದಿವೆ.

2018ರಲ್ಲಿ ಏಶ್ಯನ್ನರ ವಿರುದ್ಧ ಅಮೆರಿಕದಲ್ಲಿ 148 ದ್ವೇಷಾಪರಾಧ ಪ್ರಕರಣಗಳು ನಡೆದಿವೆ ಎಂದು ಎಫ್‌ಬಿಯ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News