ನಮ್ಮ ದತ್ತಾಂಶಗಳಲ್ಲಿ ಮುಸ್ಲಿಮರ ವಿರುದ್ಧ ವ್ಯವಸ್ಥಿತ ಪಕ್ಷಪಾತ: ಅಬುಸಾಲೆಹ್ ಶರೀಫ್

Update: 2019-11-14 05:24 GMT

ಅಬುಸಾಲೆಹ್ ಶರೀಫ್ ಅವರು ಅಮೆರಿಕ-ಭಾರತ ನೀತಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಹೊಸದಿಲ್ಲಿಯಲ್ಲಿನ ಅಭಿವೃದ್ಧಿ ನೀತಿಯಲ್ಲಿನ ಸಂಶೋಧನೆ ಹಾಗೂ ಚರ್ಚಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹೊಸದಿಲ್ಲಿಯಲ್ಲಿನ ರಾಷ್ಟ್ರೀಯ ಅನ್ವಯಿಕ ಅರ್ಥಶಾಸ್ತ್ರ ಸಂಶೋಧನಾ ಮಂಡಳಿಯ ಮುಖ್ಯ ಅರ್ಥಶಾಸ್ತ್ರಜ್ಞರೂ ಆಗಿ (1994-2012) ಕಾರ್ಯನಿರ್ವಹಿಸಿದ್ದರು. 2010-11ರ ಅವಧಿಯಲ್ಲಿ ಅವರು ಸಾಚಾರ್ ಸಮಿತಿಗಾಗಿನ ಪ್ರಧಾನಿಯವರ ಉನ್ನತ ಮಟ್ಟದ ಸಾಚಾರ್ ಸಮಿತಿ ಹಾಗೂ ಗೃಹಖಾತೆಗಳಿಗಾಗಿನ ಕಾರ್ಯದರ್ಶಿಯಾಗಿದ್ದರು. ಅವರು ಭಾರತ ಸರಕಾರದ 13ನೇ ಹಣಕಾಸು ಆಯೋಗಕ್ಕೆ ನಾಮಕರಣಗೊಂಡಿದ್ದರು. ಶರೀಫ್ ಅವರು ಆಸ್ಟ್ರೇಲಿಯದ ಕ್ಯಾನ್‌ಬೆರ್ರಾದ ಎಎನ್‌ಯು ವಿಶ್ವವಿದ್ಯಾನಿಲಯ (1986) ಹಾಗೂ ಅಮೆರಿಕದ ಯೇಲ್ ವಿವಿಯ ಡಾಕ್ಟರೇಟ್ (1991-92) ಅಧ್ಯಯನ ಮಾಡಿದ್ದರು. ಜನವರಿ 2000ನೇ ಇಸವಿಯಲ್ಲಿ ಇಂಡಿಯಾ ಟುಡೇ ಪತ್ರಿಕೆಯ ಶತಮಾನದ ಮುಖಗಳು (ಅರ್ಥಶಾಸ್ತ್ರಜ್ಞ) ಎಂಬುದಾಗಿ ಗುರುತಿಸಲ್ಪಟ್ಟಿದ್ದರು. ಮುಹಮ್ಮದ್ ನೌಶಾದ್ ಖಾನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅಬುಸಾಲೆಹ್ ಶರೀಫ್ ಅವರು, ಮುಸ್ಲಿಮರು ಸಾಚಾರ್ ಸಮಿತಿಗೂ ಮೊದಲೇ ಸದಾ ಹಿಂದುಳಿದಿದ್ದರೆಂದು ಹೇಳುತ್ತಾರೆ.

ದತ್ತಾಂಶಗಳನ್ನು ಬಳಸಿ ಯಾರು ಕೂಡ ಹಿಂದೂಗಳ ಹಾಗೂ ಮುಸ್ಲಿಮರ ಸ್ಥಿತಿಗತಿ ಅಧ್ಯಯನ ಮಾಡಿರಲಿಲ್ಲ. ಮುಸ್ಲಿಮರ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ದತ್ತಾಂಶ -ಪ್ರೇರಿತ ಅಧ್ಯಯನಗಳಾಗಿದ್ದವು. ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಿ, ಅವರ ಸಂಖ್ಯೆ ಹಿಂದೂಗಳ ಸಂಖ್ಯೆಗಿಂತ ಹೆಚ್ಚಾಗಿ ಅವರು ಭಾರತವನ್ನು ಆಳುತ್ತಾರೆ ಎನ್ನುವಂತಹ ಮೂರ್ಖತನದ ಅಧ್ಯಯನಗಳು, ಸಂಶೋಧನೆಗಳು ನಡೆದಿದ್ದವು. ಸರಕಾರ ಕೂಡ ಇಂತಹ ಸಂಶೋಧನೆಯನ್ನು ಪ್ರೋತ್ಸಾಹಿಸಿತು. ಆದರೆ ಜನಸಂಖ್ಯೆ ಹೆಚ್ಚಳ ಒಂದು ಸಮುದಾಯದ ಶಿಕ್ಷಣ ಮಟ್ಟವನ್ನು ಅವಲಂಬಿಸಿದೆ ಎಂಬುದು ನಾವು ಮಾಡಿದ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದು ಬಂತು. ಮುಸ್ಲಿಮರ ‘ಫಲವತ್ತತೆ’ಗೂ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೂ ಬಲವಾದ ಸಂಬಂಧವಿದೆ ಎಂದು ನಾವು ಕಂಡುಕೊಂಡೆವು.

ಪ್ರ: ನೀವು ಬಹಳ ಸಮಯದಿಂದ ಓರ್ವ ದತ್ತಾಂಶ ಜನರೇಟರ್ ಆಗಿದ್ದೀರಿ. ಇದು ನಿರ್ದಿಷ್ಟವಾಗಿ ಭಾರತದ ಮುಸ್ಲಿಮರ ಹಾಗೂ ಇತರರ ಮುಂದಿರುವ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಹೇಗೆ ನೆರವಾಗಿದೆ?

► ನಾನು ಯಾವಾಗಲೂ ತಳಮಟ್ಟದಿಂದ ಕೆಲಸ ಮಾಡುತ್ತಾ ಬಂದಿದ್ದೇನೆ: ಗ್ರಾಮೀಣ ಪ್ರದೇಶಗಳಿಂದ ಹಾಗೂ ನಗರದ ಕೊಳಚೆ ಪ್ರದೇಶಗಳಿಂದ ರೈತರು, ಕಾರ್ಖಾನೆಗಳ ಕಾರ್ಮಿಕರು, ಹಿಂದೂಗಳು ಮತ್ತು ಮುಸ್ಲಿಮರಿಂದ ದತ್ತಾಂಶಗಳನ್ನು ಸಂಗ್ರಹಿಸುತ್ತಾ ಅವುಗಳ ಮೂಲಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ.

ಭಾರತದ ಕುರಿತಾದ ನನ್ನ ತಿಳಿವಳಿಕೆ ಸಂಖ್ಯೆಗಳ ಮೂಲಕವೇ ಮತ್ತು ಇದು ಒಂದು ವಿಶಿಷ್ಟ ಅನುಭವ. ನಾನು ಕರ್ನಾಟಕದವನೇ ಆದರೂ ದತ್ತಾಂಶಗಳ ಮೂಲಕವೇ ಪಂಜಾಬ್, ಬಿಹಾರ ಮತ್ತು ಯುಪಿಯಲ್ಲಿ ಏನಾಗುತ್ತಿದೆ ಎಂದು ನಾನು ಹೇಳಬಲ್ಲೆ.

► ಭಾರತದ ಜನಸಂಖ್ಯೆಯನ್ನು ವರ್ಗೀಕರಿಸುವಾಗ ನೀವು ಬಳಸಿದ ಮಾನದಂಡಗಳೇನು?

ವರ್ಗೀಕರಿಸುವಾಗ ಅರ್ಥಶಾಸ್ತ್ರದಲ್ಲಿ ಎರಡು ಪ್ರೀತಿಗಳನ್ನು ಬಳಸಲಾಗುತ್ತದೆ. ಒಂದು ಆದಾಯದ ವರ್ಗ ಮತ್ತು ಇನ್ನೊಂದು ದುಡಿಯುವ ವರ್ಗ. ಆದರೆ ಜನಸಂಖ್ಯೆಯನ್ನು ನಾವು ಇನ್ನೊಂದು ರೀತಿಯಲ್ಲಿಯೂ ವರ್ಗೀಕರಿಸಬಹುದಾಗಿದೆ. ಅದು ಧರ್ಮ ಮತ್ತು ಜಾತಿಯ ನೆಲೆಯಲ್ಲಿ ಮಾಡಬಹುದಾದ ವರ್ಗೀಕರಣ. ದತ್ತಾಂಶಗಳನ್ನು ಬಳಸಿ ಯಾರು ಕೂಡ ಹಿಂದೂಗಳ ಹಾಗೂ ಮುಸ್ಲಿಮರ ಸ್ಥಿತಿಗತಿ ಅಧ್ಯಯನ ಮಾಡಿರಲಿಲ್ಲ. ಮುಸ್ಲಿಮರ ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ ದತ್ತಾಂಶ -ಪ್ರೇರಿತ ಅಧ್ಯಯನಗಳಾಗಿದ್ದವು. ಮುಸ್ಲಿಮರ ಜನಸಂಖ್ಯೆ ಏರಿಕೆಯಾಗಿ, ಅವರ ಸಂಖ್ಯೆ ಹಿಂದೂಗಳ ಸಂಖ್ಯೆಗಿಂತ ಹೆಚ್ಚಾಗಿ ಅವರು ಭಾರತವನ್ನು ಆಳುತ್ತಾರೆ ಎನ್ನುವಂತಹ ಮೂರ್ಖತನದ ಅಧ್ಯಯನಗಳು, ಸಂಶೋಧನೆಗಳು ನಡೆದಿದ್ದವು. ಸರಕಾರ ಕೂಡ ಇಂತಹ ಸಂಶೋಧನೆಯನ್ನು ಪ್ರೋತ್ಸಾಹಿಸಿತು. ಆದರೆ ಜನಸಂಖ್ಯೆ ಹೆಚ್ಚಳ ಒಂದು ಸಮುದಾಯದ ಶಿಕ್ಷಣ ಮಟ್ಟವನ್ನು ಅವಲಂಬಿಸಿದೆ ಎಂಬುದು ನಾವು ಮಾಡಿದ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದು ಬಂತು. ಮುಸ್ಲಿಮರ ‘ಫಲವತ್ತತೆ’ಗೂ ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೂ ಬಲವಾದ ಸಂಬಂಧವಿದೆ ಎಂದು ನಾವು ಕಂಡುಕೊಂಡೆವು.

ಪ್ರ: ದತ್ತಾಂಶಗಳನ್ನು ವಿಶ್ಲೇಷಿಸುವಾಗ ನಿಮಗೆ ಆಶ್ಚರ್ಯ ಉಂಟು ಮಾಡಿದ ಅಂಶಗಳೇನಾದರೂ ಕಂಡುಬಂದಿದ್ದವೇ?

►ಭಾರತದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದು ದೇಶದ ಸಾಂವಿಧಾನಿಕ ಗುರಿಯಾಗಿತ್ತು 60,70,80ರ ದಶಕಗಳಲ್ಲಿ ಒಬಿಸಿ ಕ್ರಾಂತಿ ನಡೆಯಿತು. ಸರಕಾರ ಒಬಿಸಿ ಹಿಂದೂಗಳಿಗೆ ಪ್ರಾಮುಖ್ಯತೆ ನೀಡಲಾರಂಭಿಸಿತು. ಮೀಸಲಾತಿ ಮೂಲಕ ಎಸ್ಸಿ ಎಸ್ಟಿಗಳಿಗೆ ಇನ್ನಷ್ಟು ಹೆಚ್ಚಿನ ಮಹತ್ವ ನೀಡಲಾಯಿತು. ಆದರೆ ದೇಶದ ವಿಭಜನೆಯ ಕಾರಣದಿಂದಾಗಿ ಮುಸ್ಲಿಮರ ವಿರುದ್ಧ ನಡೆಯುತ್ತಿದ್ದ ಪಕ್ಷಪಾತ ಧೋರಣೆ ಹಾಗೆಯೇ ಮುಂದುವರಿಯಿತು.

ಸರಕಾರದ ಮಟ್ಟದಲ್ಲಿ, ಸಂಪನ್ಮೂಲಗಳ ಹಂಚಿಕೆಯಾಗುವಾಗ ಕೂಡ ಆಡಳಿತ ವ್ಯವಸ್ಥೆಯ ಒಳಗಡೆಯೇ ಪಕ್ಷಪಾತ ನಡೆಯುತ್ತಿತ್ತು. ಸಾಚಾರ್ ಸಮಿತಿ ರಚನೆಯಾಗುವ ಮೊದಲೇ ಶಾಲೆಗಳು, ಅಂಗನವಾಡಿಗಳು ಆರೋಗ್ಯ ಸೇವೆ ಮತ್ತು ಎಲ್ಲ ರಂಗಗಳಲ್ಲೂ ಮುಸ್ಲಿಮರು ಯಾವಾಗಲೂ ಹಿಂದುಳಿದಿದ್ದರು. ಈ ವ್ಯವಸ್ಥಿತವಾದ ಪೂರ್ವಾಗ್ರಹ, ಪಕ್ಷಪಾತ ಮಾನವ ಅಭಿವೃದ್ಧಿ ವರದಿಯಲ್ಲಿ ಉಲ್ಲೇಖವಾಯಿತು.

ಇವತ್ತು ಮುಸ್ಲಿಮರ ಜನನ ಪ್ರಮಾಣ ದರ ಬಹುತೇಕ ಹಿಂದೂಗಳ ಜನನ ಪ್ರಮಾಣ ದರದಷ್ಟೇ ಇದೆ. ನಮ್ಮ (ಮುಸ್ಲಿಮರ) ದರ ಮೂವತ್ತು ವರ್ಷಗಳ ಹಿಂದೆ 5 ಅಥವಾ 5.5 ಇತ್ತು. ಈಗ ಇದು 2 ಅಥವಾ 2.5 ಇದೆ. ನಮ್ಮ ದೇಶ ದೊಡ್ಡದು, ಮಹಾನ್ ದೇಶ ನಮ್ಮದು. ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ. ಎಲ್ಲ ಸರಿ; ಆದರೆ ಮುಸ್ಲಿಮರ ವಿಷಯದಲ್ಲಿ ಯಾವ ಸರಕಾರ ಅಧಿಕಾರದಲ್ಲಿದ್ದರೂ ಅವರ ವಿರುದ್ಧ ವ್ಯವಸ್ಥಿತವಾದ ಪಕ್ಷಪಾತ ಧೋರಣೆ, ತಾರತಮ್ಯ ಇದ್ದೇ ಇದೆ.

ಪ್ರ: ದತ್ತಾಂಶಗಳ ತಪ್ಪು ಅರ್ಥೈಸುವಿಕೆ ಅಥವಾ ದತ್ತಾಂಶಗಳ ವಾಸ್ತವಿಕವಾದ (ಫ್ಯಾಕ್ಚುವಲ್) ತಪ್ಪುಗಳು ಹೇಗೆ ಅಪಾಯಕಾರಿಯಾಗಬಲ್ಲದು ಎಂದು ಅನ್ನಿಸುತ್ತದೆ ನಿಮಗೆ?

► 2004ರ ಸುಮಾರಿಗೆ ಗೋವಾದಲ್ಲಿ ನಡೆದ ಬಿಜೆಪಿ ಅಧಿವೇಶನದಲ್ಲಿ ಜನಗಣತಿಯ ಜನಸಂಖ್ಯೆಯ ಅಂಕಿ ಸಂಖ್ಯೆಗಳ ಚರ್ಚೆ ನಡೆಯಿತು. ಅಂದಿನ ಮಹಾ ರಿಜಿಸ್ಟ್ರಾರ್ ಅವರು ಹೊಂದಾಣಿಕೆ ಮಾಡಿರದ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದರು. ಅವುಗಳು ತಪ್ಪಾಗಿದ್ದವು. ಈ ಬಗ್ಗೆ ಯಾರೋ ಅಂದಿನ ಪ್ರಧಾನಿ ವಾಜಪೇಯಿ ಅವರೊಡನೆ ಕೇಳಿದರು. ಆಗ ಅವರು ತುಂಬಾ ಸಿಟ್ಟಾದರು. ಯಾಕೆಂದರೆ ಅವರು ತಪ್ಪುಅಂಕಿ ಸಂಖ್ಯೆಗಳನ್ನು ನೋಡಿದ್ದರು. ಅವರ ಪ್ರತಿಕ್ರಿಯೆಯಿಂದ ನಾನು ನೊಂದುಕೊಂಡೆ. ಬಳಿಕ ನಾನು ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಒಂದು ಲೇಖನ ಪ್ರಕಟಿಸಿದೆ. ಅದನ್ನು ಓದಿದ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನನಗೆ ದೂರವಾಣಿ ಕರೆ ಮಾಡಿ ನನ್ನನ್ನು ಅಭಿನಂದಿಸಿ ಅವರ ಜೊತೆ ಕಾಫಿ ಕೂಟಕ್ಕೆ ಆಹ್ವಾನಿಸಿದ್ದರು. ಅಲ್ಲಿ ನಾವು ಮಾತನಾಡಿದೆವು. ಆಗ ಅವರು ನಾವು ಒಂದು ಸಮಿತಿ ರಚಿಸುವುದು ಒಳ್ಳೆಯದು ಎಂದರು. ಹಾಗೆ ರಚನೆಯಾದ ಸಮಿತಿಯೇ ಸಾಚಾರ್ ಸಮಿತಿ. ನನ್ನನ್ನು ಆ ಸಮಿತಿಯ ಪ್ರಭಾರ ಕಾರ್ಯದರ್ಶಿಯಾಗಿ ಮಾಡಿದರು.

ಪ್ರ: ಸಾಚಾರ್ ಸಮಿತಿ ಮುಸ್ಲಿಮರಿಗಾಗಿ ಮಾತ್ರ ಎಂದು ಹಲವರು ಹೇಳುತ್ತಾರೆ. ಇದಕ್ಕೆ ಏನು ಹೇಳುತ್ತೀರಿ?

► ಸಾಚಾರ್ ಸಮಿತಿಯ ವರದಿಯು ಭಾರತೀಯ ಸಮುದಾಯದ ಒಂದು ಕನ್ನಡಿಯ ಹಾಗೆ. ಅದು ಕೇವಲ ಮುಸ್ಲಿಮರ ವರದಿಯಲ್ಲ. ಅದು ಇತರ ಎಲ್ಲ ಸಮುದಾಯಗಳನ್ನು ಕೂಡ ಹೋಲಿಸುತ್ತದೆ, ತುಲನಾತ್ಮಕವಾಗಿ ಅಧ್ಯಯನ ಮಾಡುತ್ತದೆ.

ಪ್ರ: ದಲಿತ ಮಕ್ಕಳಿಗೆ ಹೋಲಿಸಿದಾಗ ಮುಸ್ಲಿಂ ಮಕ್ಕಳ ಸಾಧನೆಯ ಮಟ್ಟ ತುಂಬಾ ಕೆಳಗೆ ಇದೆ ಎಂದಿದ್ದೀರಿ ನೀವು. ಇದಕ್ಕೆ ಏನು ಕಾರಣ?

► ಮುಸ್ಲಿಂ ಶಿಕ್ಷಣ ಇಂದಿಗೂ ಕೆಳಮಟ್ಟದಲ್ಲಿರುವುದಕ್ಕೆ ಸರಕಾರದ ವೈಫಲ್ಯವೇ ಕಾರಣ. ಮುಸ್ಲಿಮರು ಶಿಕ್ಷಣ ಪಡೆಯಲು ಬಯಸುವುದಿಲ್ಲ ಎನ್ನುವುದು ಕಾರಣವಲ್ಲ. ಅವರು ಶಿಕ್ಷಣ ಪಡೆಯಲು ಬಯಸುತ್ತಾರೆ. ಆದರೆ ಅವರ ಆಸುಪಾಸಿನಲ್ಲಿ ಸರಕಾರ ಉತ್ತಮ ಶಾಲೆ ಕಾಲೇಜುಗಳನ್ನು ನೀಡಿಲ್ಲ. ಇನ್ನೊಂದೆಡೆ ಖಾಸಗಿ ಹೂಡಿಕೆದಾರರು ಶಾಲೆಗಳನ್ನು ತೆರೆದು ಹಣ ದೋಚಲು ಆರಂಭಿಸಿದರು. ಹಾಗಾಗಿ ಬಹಳ ಮಂದಿ ಮುಸ್ಲಿಮರು ಮದ್ರಸಾಗಳಿಗೆ ಹೋಗಲಾರಂಭಿಸಿದರು. ಆದರೆ ಅವರಿಗೆ ಬೇಕಾಗಿದ್ದಿದ್ದು ಮದ್ರಸಾಗಳಲ್ಲ. ಬದಲಾಗಿ ಸೆಕ್ಯೂಲರ್ ಶಾಲೆಗಳು. ಸರಕಾರ ಈ ಶಾಲೆಗಳನ್ನು ಅವರಿಗೆ ಒದಗಿಸಲಿಲ್ಲ. ಜನರು ಮದ್ರಸಾಗಳಿಗೆ ಹೋಗಬಹುದು, ಹೋಗಬಾರದೆಂದೇನೂ ಅಲ್ಲ. ಆದರೆ ಅದೇ ವೇಳೆ ಗುಣಮಟ್ಟದ ಶಾಲೆಗಳ ಅಗತ್ಯವಿತ್ತು. ಪರಿಣಾಮವಾಗಿ ಮದ್ರಸಾಗಳು ಆರಂಭವಾದವು ಮತ್ತು ಈಗ ಅವರು (ಸರಕಾರ) ಮದ್ರಸಾಗಳು ತೀವ್ರಗಾಮಿತ್ವದ ತಾಣಗಳೆಂದು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುತ್ತಾರೆ.

ಪ್ರ: ಅಲ್ಪಸಂಖ್ಯಾತ ಸಚಿವಾಲಯದ ಬಗ್ಗೆ ನಿಮ್ಮ ಅನಿಸಿಕೆ ಏನು? ಕಳೆದ ಹಲವು ವರ್ಷಗಳಲ್ಲಿ ಅದು ಎಷ್ಟು ಪರಿಣಾಮಕಾರಿಯಾಗಿದೆ.?

► ಸಾಚಾರ್ ಸಮಿತಿ ಕೆಲವು ಉತ್ತಮ ಸಲಹೆಗಳನ್ನು ನೀಡಿತು ಮತ್ತು ಅವುಗಳು ಸಾಮಾನ್ಯವಾಗಿ ಸೆಕ್ಯುಲರ್ ಸಹಭಾಗಿತ್ವದ ಸ್ವರೂಪದಲ್ಲಿದ್ದವು. ಆದರೆ, ದುರದೃಷ್ಟವಶಾತ್ ಆಗ ಮನಮೋಹನ್ ಸಿಂಗ್‌ರವರ ಸರಕಾರವು ಒಂದು ಅಲ್ಪಸಂಖ್ಯಾತ ಸಚಿವಾಲಯವನ್ನು ಸೃಷ್ಟಿಸಿತು. ನಾವು ಅದಕ್ಕೆ ವಿರೋಧವಾಗಿದ್ದೆವು. ಕೆಲವೊಮ್ಮೆ ಸಚಿವ ಸ್ಥಾನಕ್ಕೆ ತಪ್ಪು ವ್ಯಕ್ತಿ ಆಯ್ಕೆಯಾಗುತ್ತಿದ್ದರು. ಇನ್ನು ಕೆಲವು ಸಲ ನಮ್ಮ ಶಿಫಾರಸುಗಳನ್ನು ಜಾರಿ ಮಾಡಲು ಸಚಿವಾಲಯಕ್ಕೆ ಸಾಕಷ್ಟು ಅಧಿಕಾರ ಇರುತ್ತಿರಲಿಲ್ಲ. ಈಗ ಸಚಿವಾಲಯ ಏನು ಮಾಡುತ್ತಿದೆ ಎಂದು ನಮಗೆಲ್ಲ ಗೊತ್ತಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಬದಲು ಅವರು ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಆಡಳಿತವಿರುವಾಗ ಮಕ್ಕಳಿಗೆ ಶಾಲಾ-ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿವೇತನವಾಗಿ ನಗದು ಹಣ ದೊರಕುತ್ತಿತ್ತು. ಈಗ ಅವರು ಈ ಮೊತ್ತವನ್ನು ಕಡಿಮೆ ಮಾಡಿದ್ದಾರೆ. ಮಕ್ಕಳಿಗೆ ಜೀವನದಲ್ಲಿ ಒಮ್ಮೆ ವಿದ್ಯಾರ್ಥಿವೇತನ ದೊರಕಿದರೆ ಸಾಲದು, ಅವರು ಶಿಕ್ಷಣ ಮುಗಿಸುವವರೆಗೆ ಅವರಿಗೆ ಪ್ರತಿವರ್ಷ ಅದು ದೊರಕಬೇಕು.

ಮುಸ್ಲಿಮರಲ್ಲದೆ ಇತರ ಅಲ್ಪಸಂಖ್ಯಾತರೂ ಇದ್ದಾರೆ. ಆದರೆ ಅವರ ಸಂಖ್ಯೆ ಚಿಕ್ಕದು. ಮುಸ್ಲಿಮರು ಶೇ. 80 ಇದ್ದರು; ಅವರಿಗೆ ಶೇ. 60 ಪಾಲು ಸಿಗಬೇಕಿತ್ತು. ಆದರೆ ಅವರಿಗೆ ಸಿಕ್ಕಿದ್ದು ಶೇ. 50. ಮುಸ್ಲಿಮರಿಗೆ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.

ಪ್ರ: ಸಾಚಾರ್ ಸಮಿತಿಯ ವರದಿ ಪ್ರಬಲವಾದ ದತ್ತಾಂಶಗಳನ್ನು ಹೊಂದಿರುವ, ಭಾರತದ ಮುಸ್ಲಿಮರ ಸಾಮಾಜಿಕ-ಆರ್ಥಿಕ ಸ್ಥಿತಿಯ ಕುರಿತಾದ ಒಂದು ಅಥೆಂಟಿಕ್ ದಾಖಲಾತಿ ಎಂದು ಹಲವರು ನಂಬಿದ್ದಾರೆ. ಆದರೆ, ಈಗ ಯಾವುದೇ ದತ್ತಾಂಶದ ಬಗ್ಗೆ ಅಂತಿಮ ನಿರ್ಧಾರ ಕಂಡುಬರುತ್ತಿಲ್ಲ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

► ದತ್ತಾಂಶಕ್ಕೆ ಸಂಬಂಧಿಸಿ ಗಂಭೀರವಾದ ಸಮಸ್ಯೆ ಇದೆ ಎಂದು ನಮಗೆ ಗೊತ್ತಿದೆ. ದತ್ತಾಂಶ ಸಂಗ್ರಹ ನಿಗದಿತವಾಗಿ ನಡೆದಿಲ್ಲ. ನಿಗದಿತವಾಗಿ ನಡೆದಾಗ ಮಾತ್ರ ದತ್ತಾಂಶಗಳ ನಮ್ಮ ಅರ್ಥೈಸುವಿಕೆಯಲ್ಲಿ ಒಂದು ಸ್ಪಷ್ಟತೆ, ಸುವ್ಯವಸ್ಥೆ ಇರುತ್ತದೆ. ಮುಂದಿನ ವರ್ಷ ಸಂಗ್ರಹಿಸಲ್ಪಡುವ ದತ್ತಾಂಶಗಳಾದರೂ ನಮಗೆ ಅಥವಾ ತಜ್ಞರಿಗೆ ದೊರಕುವಂತಾದಲ್ಲಿ ಆಗ ನಮ್ಮ ದೇಶದ ಕುರಿತಾದ ಸತ್ಯ ತಿಳಿದೀತು.

ಈಗ ಐಟಿ, ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ, ಗೂಗಲ್, ಅಮೆಝಾನ್, ಉಬರ್ ಇತ್ಯಾದಿಗಳ ಕಾಲ. ಓಲಾ ಅಥವಾ ಉಬರ್ ಬಳಸುವವರ ಮೂಲಕ ಮಧ್ಯಮವರ್ಗವನ್ನು ಅರ್ಥಮಾಡಿಕೊಳ್ಳಲು ಬೇಕಾದ ಉತ್ತಮ ಸ್ಯಾಂಪಲ್ ದೊರಕುತ್ತದೆ. ಅಂತಿಮವಾಗಿ ನಾವು ಈ ಎಲ್ಲಾ ದತ್ತಾಂಶಗಳ ವಿಶ್ಲೇಷಣೆ ಮಾಡುವುದು ಯಾರಿಗಾಗಿ? ಸರಕಾರಕ್ಕಾಗಿ. ಸರಕಾರ ಅದನ್ನು ಗಮನಿಸಬೇಕು. ಅದು ಗಮನಿಸುವಂತೆ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ.

ಪ್ರ: ಯುಎಸ್-ಇಂಡಿಯಾ ಪಾಲಿಸಿ ಇನ್‌ಸ್ಟಿಟ್ಯೂಟ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೀವು ಭಾರತ-ಅಮೆರಿಕ ನೀತಿಯಲ್ಲಿ ಏನಾದರೂ ಬದಲಾವಣೆಯನ್ನು ಗಮನಿಸಿದ್ದೀರಾ? ಅಥವಾ ಅದು ಯಾವಾಗಲೂ ಇರುವ ಹಾಗೆ ಇದೆಯೇ?

► ನನ್ನ ತಿಳುವಳಿಕೆಯ ಪ್ರಕಾರ ಅಮೆರಿಕ ಒಂದು ಮಹಾನ್ ರಾಷ್ಟ್ರ ಹಾಗೂ ಒಂದು ಶ್ರೇಷ್ಠ ಪ್ರಭುತ್ವ. ಆದರೆ ಅಲ್ಲಿಯ ಅಧ್ಯಕ್ಷರನ್ನು ಒಬ್ಬ ಉತ್ತಮ ರಾಜಕೀಯ ಮುತ್ಸದ್ದಿ ಎಂದು ನಾನು ಪರಿಗಣಿಸಲಾರೆ. ಮತದಾರರನ್ನು ತುಷ್ಟೀಕರಿಸುವ ಭರದಲ್ಲಿ ಅವರು ಬಹುಪಕ್ಷೀಯತೆ ಹಾಗೂ ದ್ವಿಪಕ್ಷೀಯತೆಯನ್ನು ನಾಶಮಾಡಿದ್ದಾರೆ.

ಪ್ರ: ನೀವು ಇವತ್ತು ಭಾರತವನ್ನು ನೋಡುವಾಗ ನಿಮಗೆ ಯಾವುದು ಸಂತೋಷ ನೀಡುತ್ತದೆ? ಮತ್ತು ಯಾವುದು ನಿಮ್ಮನ್ನು ಅತ್ಯಂತ ಹೆಚ್ಚು ಆತಂಕಕ್ಕೆ ಈಡುಮಾಡುತ್ತದೆ?

► ಓಹ್.. ಇವತ್ತಿನ ಭಾರತದ ಬಗ್ಗೆ ನಾನು ತುಂಬ ಸಂತೋಷ ಪಡುತ್ತೇನೆ. ಯಾಕೆಂದರೆ ಭಾರತವನ್ನು ನಾನು ಕಳೆದ 40 ವರ್ಷಗಳಲ್ಲಿ ಕಣ್ಣಾರೆ ಕಂಡಿದ್ದೇನೆ. ಭಾರತ ಒಂದು ಬೃಹತ್ ಶಕ್ತಿ. ನಮ್ಮಲ್ಲಿ ಬಡತನ ಇದೆ ನಿಜ, ಆದರೆ ಇಂದಿನ ಭಾರತ ಹಿಂದೆ ಇದ್ದ ಭಾರತವಲ್ಲ; ಅದೀಗ ತುಂಬ ಬದಲಾಗಿದೆ, ಅಭಿವೃದ್ಧಿ ಹೊಂದಿದೆ. ಮುಂದಿನ ವರ್ಷ ಭಾರತದ ಪರಿಸ್ಥಿತಿ ತುಂಬ ಹದಗೆಡಬಹುದು. ಯಾಕೆಂದರೆ ತೈಲ ಮತ್ತು ಶಕ್ತಿ ರಂಗಗಳಲ್ಲಿ ನನಗೆ ದೊಡ್ಡ ಸಮಸ್ಯೆ ಕಾಣಿಸುತ್ತಿದೆ, ಮುಂದಿನ ವರ್ಷ ಹಣದುಬ್ಬರ ಇನ್ನಷ್ಟು ತೀವ್ರವಾಗಬಹುದು. ಆದ್ದರಿಂದ ಬೆಳವಣೆಗೆಯಲ್ಲಿ ಕುಂಠಿತವಾಗಬಹುದು. ಆದರೆ ನಾವು ಹಿಂದಕ್ಕೆ ಸಾಗುತ್ತಿದ್ದೇವೆ ಎಂದು ಇದರ ಅರ್ಥವಲ್ಲ,

ಪ್ರ: ನಾವು ಆರ್ಥಿಕ ಬೆಳವಣಿಗೆ ಬಗ್ಗೆ ಮಾತಾಡುವಾಗ ಕೇವಲ ಜಿಡಿಪಿ ಬಗ್ಗೆ ಮಾತಾಡುತ್ತೇವೆ. ನಮ್ಮ ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ ಮಾತಾಡುವುದಿಲ್ಲ. ಈ ಕುರಿತು ನೀವು ಏನು ಹೇಳುತ್ತೀರಿ?

► ನಿಜವಾಗಿ ಆರ್ಥಿಕ ಬೆಳವಣಿಗೆಯನ್ನು ನಿಮ್ಮ ಹತ್ತಿರ ಎಷ್ಟು ಹಣ, ಚಿನ್ನ, ಮನೆ ಇದೆ ಎಂಬ ನೆಲೆಯಲ್ಲಿ ನಿರ್ಧರಿಸಬಾರದು. ಬದಲಾಗಿ ನಿಮಗೆ ಎಷ್ಟು ಶಿಕ್ಷಣ ದೊರಕಿದೆ, ನೀವು ಎಷ್ಟು ಆರೋಗ್ಯವಂತರಾಗಿದ್ದೀರಿ ಎಂಬ ನೆಲೆಯಲ್ಲಿ ನಿರ್ಧರಿಸಬೇಕು.

ಪ್ರ: ನೊಬೆಲ್ ಪ್ರಸಸ್ತಿ ಪಡೆದಿರುವ ಪ್ರೊ. ಅಮರ್ತ್ಯ ಸೇನ್, ಮುಹಮ್ಮದ್ ರಿಯಾಸ್ ಮತ್ತು ಈಗ ಅಭಿಜಿತ್ ಬ್ಯಾನರ್ಜಿ ಎಲ್ಲರೂ ಕಲ್ಯಾಣ ಹಾಗೂ ಅಭಿವೃದ್ಧಿ ಪರ ಅರ್ಥಶಾಸ್ತ್ರಕ್ಕೆ ನೊಬೆಲ್ ಪಡೆದಿದ್ದಾರೆ. ಈಗ ಪ್ರಪಂಚ ಅಬಿವೃದ್ಧಿ ಮತ್ತು ಕಲ್ಯಾಣ (ವಲ್ಫೇರ್) ಅರ್ಥಶಾಸ್ತ್ರಕ್ಕೆ ಬಹಳ ಮಹತ್ವ ನೀಡುತ್ತಿವೆ ಎಂಬುದು ಇದರ ಅರ್ಥವೇ?

ಸಂಪನ್ಮೂಲಗಳಿಂದ ಇಡೀ ವಿಶ್ವಕ್ಕೆ ಲಾಭವಾಗಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಆದರೆ ಕೆಲವೇ ಮಂದಿ ಸಂಪನ್ಮೂಲಗಳನ್ನು ನಿಯಂತ್ರಿಸುತ್ತಿದ್ದಾರೆ. ಜಗತ್ತು ಕಲ್ಯಾಣ ಹಾಗೂ ಅಬಿವೃದ್ಧಿಯ ಕಡೆಗೆ ಸಾಗುತ್ತಿದೆ. ಹಾಗಾಗಿ ಕಲ್ಯಾಣ ಅರ್ಥಶಾಸ್ತ್ರಕ್ಕೆ ಪ್ರಶಸ್ತಿ ಬರುತ್ತಿದೆ. ಹಾಗೆಂದು ನಾವು ಬಿಲಿಯಾಧೀಶರನ್ನು ನಿಂದಿಸುವಂತಿಲ್ಲ. ಅವರು ರಾಜಕೀಯವಾದಾಗ, ರಾಜಕೀಯ ಮಾಡಲಾರಂಭಿಸಿದಾಗ ಅದು ನಿಂದನಾರ್ಹವಾಗುತ್ತದೆ. ಭಾರತದಲ್ಲಿ ಹೀಗಾಗಲಾರದೆಂದು ನನ್ನ ಭರವಸೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News