ಲವಂಗದ ಔಷಧೀಯ ಗುಣಗಳು ನಿಮಗೆ ಗೊತ್ತೇ?

Update: 2019-11-14 14:00 GMT
ಫೋಟೋ: zeenews.india.com

ಸಿಹಿಖಾದ್ಯಗಳು, ಮಾಂಸಾಹಾರ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಪರಿಮಳಯುಕ್ತ ಲವಂಗವು ಬ್ಯಾಕ್ಟೀರಿಯಾ ನಿರೋಧಕ ಮತ್ತು ನಂಜು ನಿರೋಧಕ ಗುಣಗಳನ್ನು ಹೊಂದಿದ್ದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವಾಗುವ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಜೊತೆಗೆ ಇತರ ಹಲವಾರು ಆರೋಗ್ಯಲಾಭಗಳನ್ನೂ ನೀಡುತ್ತದೆ. ಆಯುರ್ವೇದದಲ್ಲಿ ಲವಂಗದ ಬಳಕೆ ಸಾಮಾನ್ಯವಾಗಿದೆ. ಅದರಲ್ಲಿರುವ ವಿಟಾಮಿನ್ ಸಿ, ಕ್ಯಾಲ್ಸಿಯಂ, ಪ್ರೋಟಿನ್,ನಾರು ಮತ್ತು ಕಾರ್ಬೊಹೈಡ್ರೇಟ್‌ಗಳು ಶರೀರಕ್ಕೆ ಉಪಯುಕ್ತವಾಗಿದೆ. ಲವಂಗದಲ್ಲಿರುವ ಪೋಷಕಾಂಶಗಳು ಮಲಬದತ್ಧೆಯನ್ನು ನಿವಾರಿಸುವ ಜೊತೆಗೆ ವಾಂತಿ,ವಾಯು ಮತ್ತು ಉರಿಯಂತಹ ಉದರ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಪಡೆಯಲೂ ನೆರವಾಗುತ್ತವೆ.

ಜೀರ್ಣಕ್ರಿಯೆ ಉತ್ತಮಗೊಳ್ಳಲು ಹೆಚ್ಚು ಜೊಲ್ಲಿನ ಉತ್ಪಾದನೆ ಅಗತ್ಯವಾಗಿದೆ. ಇದಕ್ಕಾಗಿ ಲವಂಗವನ್ನು ಬಾಯಿಯಲ್ಲಿಟ್ಟು ಕೊಂಡು ಚೀಪಬಹುದಾಗಿದೆ. ಅದರ ತೀಕ್ಷ್ಣ ರುಚಿ ಇಷ್ಟವಿಲ್ಲದಿದ್ದರೆ ಊಟದೊಂದಿಗೆ ಅಥವಾ ಸಿಹಿತಿಂಡಿಯ ರೂಪದಲ್ಲಿ ಸೇವಿಸಬಹುದು.

ಬಾಯಿಯ ಆರೋಗ್ಯವನ್ನು ಕಾಯ್ದುಕೊಳ್ಳಲು ಲವಂಗದ ತೈಲವು ನೈಸರ್ಗಿಕ ವಿಧಾನವಾಗಿದೆ. ಅದು ಹಲ್ಲುಗಳಲ್ಲಿನ ಪಾಚಿ,ವಸಡುಗಳ ಸೋಂಕು ಮತ್ತು ಬಾಯಿಯಲ್ಲಿಯ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಲವಂಗವು ಜೀರ್ಣಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ರಕ್ತ ಪರಿಚಲನೆಯನ್ನು ಹೆಚ್ಚಿಸುವ ಅದು ಬಾಯಿಯ ದುರ್ವಾಸನೆಯನ್ನೂ ನಿವಾರಿಸುತ್ತದೆ. ಲವಂಗದ ಕಷಾಯವು ಹಾನಿಕಾರಕ ಬ್ಯಾಕ್ಟೀರಿಯಾ ಗಳನ್ನು ನಿರ್ಮೂಲಿಸುವ ಮೂಲಕ ಜೀರ್ಣ ವ್ಯವಸ್ಥೆಯನ್ನು ಆರೋಗ್ಯಯುತವಾಗಿಸುತ್ತದೆ. ಒಂದು ಕಪ್ ನೀರಿನಲ್ಲಿ ಕೆಲವು ಲವಂಗಗಳನ್ನು ಹಾಕಿ ಕುದಿಸಿದರೆ ಕಷಾಯ ಸಿದ್ಧವಾಗುತ್ತದೆ,ಇದನ್ನು ಬೆಳಿಗ್ಗೆ ಮತ್ತು ಸಂಜೆ ಸೇವಿಸಬಹುದು.

 ವಾಂತಿ ಮತ್ತು ಹೊಟ್ಟೆಯಲ್ಲಿ ಉರಿಯ ಅನುಭವವಾಗುತ್ತಿದ್ದರೆ ಮೂರು ಹನಿ ಲವಂಗದ ಎಸೆನ್ಶಿಯಲ್ ಆಯಿಲ್ ಅಥವಾ ಸಾರಭೂತ ತೈಲವನ್ನು ನೀರಿನಲ್ಲಿ ಬೆರೆಸಿ ಸೇವಿಸಿದರೆ ಶಮನಗೊಳ್ಳುತ್ತದೆ.

ಲವಂಗದ ಕಷಾಯವು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಲವಂಗವು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ,ಹೊಟ್ಟೆಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ,ಯಕೃತ್ತನ್ನು ಅರೋಗ್ಯಯುತವಾಗಿರಿಸುತ್ತದೆ,ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ,ಹೊಟ್ಟೆ ಹುಣ್ಣುಗಳನ್ನು ನಿವಾರಿಸುತ್ತದೆ ಮತ್ತು ಮೂಳೆಗಳನ್ನು ಸದೃಢಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News