ಲಾಯರ್ಸ್ ಕಲೆಕ್ಟಿವ್ ಪ್ರಕರಣ: ಜೈಸಿಂಗ್, ಗ್ರೋವರ್‌ಗೆ ನೀಡಿರುವ ಮಧ್ಯಂತರ ರಕ್ಷಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ನಕಾರ

Update: 2019-11-14 14:24 GMT
ಫೋಟೋ: PTI

ಹೊಸದಿಲ್ಲಿ,ನ.13: ವಿದೇಶಿ ದೇಣಿಗೆಗಳ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ)ಯ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್ ಮತ್ತು ಆನಂದ ಗ್ರೋವರ್ ಹಾಗೂ ಅವರ ಎನ್‌ಜಿಒ ಲಾಯರ್ಸ್ ಕಲೆಕ್ಟಿವ್ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ಸಿಬಿಐಗೆ ನಿರ್ದೇಶ ನೀಡಿರುವ ಬಾಂಬೆ ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯನ್ನು ನೀಡಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರಾಕರಿಸಿದೆ.

ಜು.25ರ ಬಾಂಬೆ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು.

ಮು.ನ್ಯಾ.ರಂಜನ್ ಗೊಗೊಯಿ ನೇತೃತ್ವದ ಪೀಠವು ಲಾಯರ್ಸ್ ಕಲೆಕ್ಟಿವ್,ಜೈಸಿಂಗ್ ಮತ್ತು ಗ್ರೋವರ್‌ಗೆ ನೋಟಿಸುಗಳನ್ನು ಹೊರಡಿಸಿದೆ.

ಲಾಯರ್ಸ್ ಕಲೆಕ್ಟಿವ್ 2006-07 ಮತ್ತು 2014-15ರ ನಡುವಿನ ಅವಧಿಯಲ್ಲಿ 32.39 ಕೋ.ರೂ.ಗಳ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವಲ್ಲಿ ಅಕ್ರಮಗಳನ್ನು ಎಸಗಿತ್ತು ಎಂದು ಆರೋಪಿಸಲಾಗಿದೆ. ಈ ಆರೋಪಗಳಿಗೆ ಎನ್‌ಜಿಒ ನೀಡಿದ್ದ ಉತ್ತರ ತೃಪ್ತಿದಾಯಕವಾಗಿರಲಿಲ್ಲವಾದ್ದರಿಂದ ಗೃಹ ಸಚಿವಾಲಯವು 2016ರಲ್ಲಿ ಎಫ್‌ಸಿಆರ್‌ಎ ಅಡಿ ಅದರ ನೋಂದಣಿಯನ್ನು ರದ್ದುಗೊಳಿಸಿತ್ತು.

ಕಳೆದ ಜುಲೈನಲ್ಲಿ ಸಿಬಿಐ ದಿಲ್ಲಿ ಹಾಗೂ ಮುಂಬೈನಲ್ಲಿಯ ಜೈಸಿಂಗ್ ಮತ್ತು ಗ್ರೋವರ್ ಅವರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.

ತನ್ನ ವಿರುದ್ಧ ಎಫ್‌ಐಆರ್‌ಗೆ ಯಾವುದೇ ಆಧಾರವಿಲ್ಲ ಮತ್ತು ತನ್ನ ಪದಾಧಿಕಾರಿಗಳು ಹಿಂದೆ ಕೈಗೆತ್ತಿಕೊಂಡಿದ್ದ ಪ್ರಕರಣಗಳಿಗಾಗಿ ಅವರನ್ನು ಗುರಿಯಾಗಿಸಿಕೊಳ್ಳಲು ಹಾಗೂ ಅವರ ಧ್ವನಿಯನ್ನಡಗಿಸಲು ಅದನ್ನು ದಾಖಲಿಸಲಾಗಿದೆ ಎಂದು ಲಾಯರ್ಸ್ ಕಲೆಕ್ಟಿವ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News