ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಹಿಂಸಾಚಾರ: ಅರ್ಜೆಂಟೀನದಲ್ಲಿ ಸೂ ಕಿ, ಇತರರ ವಿರುದ್ಧ ಮೊಕದ್ದಮೆ

Update: 2019-11-14 17:05 GMT
ಫೋಟೋ: abc.net.au

ಬ್ಯೂನಸ್ ಐರಿಸ್ (ಅರ್ಜೆಂಟೀನ), ನ. 14: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ವಿರುದ್ಧ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದೂರದ ಅರ್ಜೆಂಟೀನ ದೇಶದಲ್ಲಿ ಬುಧವಾರ ಮೊಕದ್ದಮೆಯೊಂದು ದಾಖಲಾಗಿದೆ. ಮೊಕದ್ದಮೆಯಲ್ಲಿ ಮ್ಯಾನ್ಮಾರ್‌ನ ವಾಸ್ತವಿಕ ನಾಯಕಿ ಆಂಗ್ ಸಾನ್ ಸೂ ಕಿ ಸೇರಿದಂತೆ ಆ ದೇಶದ ಹಲವು ಉನ್ನತ ಅಧಿಕಾರಿಗಳನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.

ರೊಹಿಂಗ್ಯಾ ಮತ್ತು ಲ್ಯಾಟಿನ್ ಅಮೆರಿಕದ ಮಾನವಹಕ್ಕು ಗುಂಪುಗಳು ‘ಜಾಗತಿಕ ಕಾರ್ಯವ್ಯಾಪ್ತಿ’ ಎಂಬ ತತ್ವದ ಅಡಿಯಲ್ಲಿ ಅರ್ಜೆಂಟೀನದಲ್ಲಿ ಈ ಮೊಕದ್ದಮೆಯನ್ನು ಹೂಡಿವೆ.

ಯುದ್ಧಾಪರಾಧಗಳು ಮತ್ತು ಮಾನವತೆಯ ವಿರುದ್ಧ ಅಪರಾಧ ಮುಂತಾದ ಕೆಲವು ಕೃತ್ಯಗಳು ಎಷ್ಟು ಭಯಾನಕವೆಂದರೆ, ಅವುಗಳು ಯಾವುದೇ ಒಂದು ದೇಶಕ್ಕೆ ಸೀಮಿತವಲ್ಲ, ಅವುಗಳ ವಿಚಾರಣೆಯನ್ನು ಎಲ್ಲಿ ಬೇಕಾದರೂ ಮಾಡಬಹುದು ಎಂಬ ನೆಲೆಯಲ್ಲಿ ಅರ್ಜೆಂಟೀನದಲ್ಲಿ ಈ ಮೊಕದ್ದಮೆ ದಾಖಲಾಗಿದೆ.

ರೊಹಿಂಗ್ಯಾ ಮುಸ್ಲಿಮ್ ಅಲ್ಪಸಂಖ್ಯಾತರ ಅಸ್ತಿತ್ವವನ್ನೇ ಬೆದರಿಸುವ ಹಿಂಸಾಚಾರಕ್ಕಾಗಿ ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥ ಮಿನ್ ಆಂಗ್ ಹಲಯಂಗ್ ಮತ್ತು ನಾಗರಿಕ ಸರಕಾರದ ಮುಖ್ಯಸ್ಥೆ ಸೂ ಕಿ ಸೇರಿದಂತೆ ಉನ್ನತ ಸೇನಾ ಮತ್ತು ರಾಜಕೀಯ ನಾಯಕರು ಕಾನೂನನ್ನು ಎದುರಿಸಬೇಕು ಎಂದು ಮೊಕದ್ದಮೆ ಆಗ್ರಹಿಸಿದೆ.

ಮ್ಯಾನ್ಮಾರ್‌ನಲ್ಲಿ 2017ರ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ನೂರಾರು ರೊಹಿಂಗ್ಯಾ ಮುಸ್ಲಿಮರು ಮೃತಪಟ್ಟಿದ್ದಾರೆ ಹಾಗೂ ಸುಮಾರು 8 ಲಕ್ಷ ಮಂದಿ ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News