ಬಳಕೆದಾರರ ಮಾಹಿತಿಗಾಗಿ ಕೇಂದ್ರದಿಂದ ‘ತುರ್ತು’ ವಿನಂತಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ: ಫೇಸ್ ಬುಕ್

Update: 2019-11-15 07:12 GMT

ಹೊಸದಿಲ್ಲಿ, ನ.15: ಬಳಕೆದಾರರ ಮಾಹಿತಿಗಾಗಿ ಭಾರತೀಯ ಸರಕಾರ ಹಾಗೂ ಕಾನೂನು ಜಾರಿ ಏಜೆನ್ಸಿಗಳಿಂದ ಫೇಸ್‌ಬುಕ್‌ಗೆ ಬರುತ್ತಿರುವ ‘ತುರ್ತು’ವಿನಂತಿಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕಂಪೆನಿಯ ಹೊಸ ಪಾರದರ್ಶಕತೆ ವರದಿಯಲ್ಲಿ ತಿಳಿದುಬಂದಿದೆ.

2019ರ ಮೊದಲ ಆರು ತಿಂಗಳ ಅವಧಿಯಲ್ಲಿ 1,615 ತುರ್ತು ವಿನಂತಿಗಳು ಬಂದಿದ್ದವು. 2018ರ ಕೊನೆಯಲ್ಲಿ 861 ವಿನಂತಿಗಳನ್ನು ಸ್ವೀಕರಿಸಲಾಗಿತ್ತು. ಒಟ್ಟಾರೆ ಕಳೆದ ವರ್ಷ 1,478 ‘ತುರ್ತು’ ವಿನಂತಿಗಳು ಬಂದಿದ್ದು, ಇದು 2017ಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. 2017ರಲ್ಲಿ 460 ವಿನಂತಿಗಳು ಬಂದಿದ್ದವು ಎಂದು ಬುಧವಾರ ಬಿಡುಗಡೆಯಾಗಿರುವ ವರದಿಯಲ್ಲಿ ಬಹಿರಂಗವಾಗಿದೆ.

 ಸಾಮಾನ್ಯವಾಗಿ ಅಮೆರಿಕ ಮೂಲದ ಕಂಪೆನಿ ಫೇಸ್‌ಬುಕ್‌ಗೆ ಅಂಕಿ-ಅಂಶಗಾಗಿ ವಿನಂತಿಗಳನ್ನು ‘ಪರಸ್ಪರ ಕಾನೂನು ನೆರವು ಒಪ್ಪಂದದ’ ಪ್ರಕಾರ ಅಮೆರಿಕದ ಕಾನೂನು ವಿಭಾಗದ ಮುಖಾಂತರ ನಡೆಯುತ್ತದೆ. ಆದರೆ, ‘ತುರ್ತು’ವಿನಂತಿಗಳನ್ನು ಫೇಸ್‌ಬುಕ್‌ಗೆ ‘ಕಾನೂನು ಜಾರಿ ಅಂತರ್ಜಾಲ ಕೋರಿಕೆ ಪದ್ಧತಿ’ಯ ಮೂಲಕ ನೇರವಾಗಿ ಕಳುಹಿಸಲಾಗುತ್ತದೆ.

‘‘ತುರ್ತು ಸಂದರ್ಭದಲ್ಲಿ ಕಾನೂನು ಏಜೆನ್ಸಿಗಳು ಕಾನೂನು ಪ್ರಕ್ರಿಯೆಯಿಲ್ಲದೆ ವಿನಂತಿಗಳನ್ನು ಸಲ್ಲಿಸುತ್ತವೆ. ದಾಖಲೆಗಳನ್ನು ಆಧರಿಸಿ ಕಾನೂನು ಜಾರಿ ಏಜೆನ್ಸಿಗಳಿಗೆ ಮಾಹಿತಿಯನ್ನು ನಾವು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬಹುದು. ಅಲ್ಲಿ ನಮಗೆ ನಂಬಿಕೆಗೆ ಕಾರಣವಾಗುವ ಗಂಭೀರ ದೈಹಿಕ ಗಾಯ ಅಥವಾ ಸಾವಿನ ವಿಚಾರ ಒಳಗೊಂಡಿರುತ್ತದೆ’’ ಎಂದು ಫೇಸ್‌ಬುಕ್ ವರದಿ ತಿಳಿಸಿದೆ.

 2016ರಲ್ಲಿ ಸಾಮಾನ್ಯ ಪ್ರಕ್ರಿಯೆಯ ಮೂಲಕ ಸರಕಾರದಿಂದ ಫೇಸ್‌ಬುಕ್‌ಗೆ ಶೇ.1ರಷ್ಟ್ಟೂ ಕೋರಿಕೆ ಬಂದಿರಲಿಲ್ಲ. ಇದೀಗ ‘ತುರ್ತು’ಮಾರ್ಗದ ಮುಖಾಂತರ ಅಂಕಿ-ಅಂಶ ಗಳನ್ನು ಕೋರಿ ಬರುತ್ತಿರುವ ವಿನಂತಿಗಳ ಪ್ರಮಾಣ ಶೇ.7ಕ್ಕೆ ಏರಿಕೆಯಾಗಿದೆ. ಫೇಸ್‌ಬುಕ್‌ನಲ್ಲಿನ ವಿಷಯವನ್ನು ತೆಗೆದುಹಾಕಲು ಕೋರಿ ಹೆಚ್ಚು ಮನವಿ ಸಲ್ಲಿಸಿದ ದೇಶಗಳ ಪೈಕಿ ಭಾರತ ಈ ವರ್ಷ 6ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಿದೆ. ಪಾಕಿಸ್ತಾನ ಹಾಗೂ ಮೆಕ್ಸಿಕೊ ಮೊದಲೆರಡು ಸ್ಥಾನದಲ್ಲಿವೆ. 2019ರ ಆದಿಯಲ್ಲಿ ಭಾರತ 1,250 ವಿಷಯವನ್ನು ತೆಗೆದು ಹಾಕಲು ವಿನಂತಿಸಿತ್ತು.

ಸರಕಾರದ ವಿನಂತಿಯ ಮೇರೆಗೆ ಫೇಸ್‌ಬುಕ್ 2019ರ ಮೊದಲಾರ್ಧದಲ್ಲಿ 1,211 ಪೋಸ್ಟ್‌ಗಳು, 19 ಪುಟಗಳು ಅಥವಾ ಗುಂಪುಗಳು ಹಾಗೂ ಎರಡು ಪ್ರೊಫೈಲ್‌ಗಳನ್ನು ತೆಗೆದುಹಾಕಿದೆ. ಇದೇ ಅವಧಿಯಲ್ಲಿ ಕಂಪೆನಿಯು 17 ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆಗೆದಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News