ಮುಂದಿನ 5 ವರ್ಷ ಶಿವಸೇನೆ-ಎನ್ಸಿಪಿ- ಕಾಂಗ್ರೆಸ್ ಸರಕಾರ: ಶರದ್ ಪವಾರ್

Update: 2019-11-15 17:22 GMT

ಮುಂಬೈ, ನ.15: ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇರಿಕೊಂಡು ಸ್ಥಿರ ಸರಕಾರ ರಚಿಸಲಿದ್ದು ಸರಕಾರ 5 ವರ್ಷದ ಅವಧಿ ಪೂರೈಸಲಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.

 ನಾಗಪುರದಲ್ಲಿ ಅಕಾಲಿಕ ಮಳೆಯಿಂದ ಬೆಳೆಹಾನಿ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಮೈತ್ರಿಕೂಟದ ಸ್ಥಿರತೆಗೆ ಯಾವುದೇ ಸವಾಲು ಎದುರಾಗದು. ಈಗ ಸರಕಾರ ರಚನೆಯ ಬಗ್ಗೆ ಸಮಾಲೋಚನಾ ಪ್ರಕ್ರಿಯೆ ಮುಂದುವರಿದಿದ್ದು ಶನಿವಾರದೊಳಗೆ ಸರಕಾರ ರಚನೆಯಾಗಲಿದೆ. ಸರಕಾರ ಐದು ವರ್ಷ ಪೂರೈಸಲಿದೆ ಎಂದು ಪವಾರ್ ಹೇಳಿದರು.

  ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೆಚ್ಚು ಸಮಯ ಮುಂದುವರಿಯುವುದಿಲ್ಲ ಮತ್ತು ಹೊಸ ಚುನಾವಣೆಯೂ ನಡೆಯುವುದಿಲ್ಲ. ಮೂರು ಪಕ್ಷಗಳ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರಲಿದ್ದು ಇದು ಅಭಿವೃದ್ಧಿ ಉದ್ದೇಶದ, ಜನರ ಸಮಸ್ಯೆಯನ್ನು ಪರಿಹರಿಸಲು ಕಟಿಬದ್ಧವಾದ ಸರಕಾರವಾಗಿರಲಿದೆ ಎಂದವರು ಹೇಳಿದರು. ಮುಖ್ಯಮಂತ್ರಿ ಹುದ್ದೆಗೆ ಶಿವಸೇನೆಯ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪವಾರ್, ಕೆಲವರು ಮುಖ್ಯಮಂತ್ರಿ ಹುದ್ದೆಯನ್ನು ಕೇಳುತ್ತಿದ್ದರೆ ಅದನ್ನು ಪರಿಗಣಿಸಲಾಗುವುದು ಎಂದರು.

   ಶಿವಸೇನೆ ತೀವ್ರವಾದಿ ಹಿಂದುತ್ವದ ಪ್ರತಿಪಾದಕಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್, ಎನ್‌ಸಿಪಿ ಮತ್ತು ಕಾಂಗ್ರೆಸ್ ಯಾವಾಗಲೂ ಜಾತ್ಯತೀತ ನೀತಿಯನ್ನು ಪ್ರತಿಪಾದಿಸುತ್ತಿವೆ. ಸರಕಾರ ರಚನೆಯಾದ ಬಳಿಕವೂ ಈ ಎರಡು ಪಕ್ಷಗಳು ಇದೇ ನೀತಿಯನ್ನು ಪಾಲಿಸುತ್ತವೆ . ನಾವು ಇಸ್ಲಾಮ್ ಅಥವಾ ಹಿಂದೂ ಧರ್ಮದ ವಿರೋಧಿಗಳಲ್ಲ. ಆದರೆ ಸರಕಾರ ಜಾತ್ಯತೀತ ನೀತಿಯನ್ನು ಆಧರಿಸಿರಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ಇದಕ್ಕೂ ಮುನ್ನ, ಎನ್‌ಸಿಪಿಯ ಮುಂಬೈ ವಿಭಾಗದ ಅಧ್ಯಕ್ಷ ನವಾಬ್ ಮಲಿಕ್ ಕೂಡಾ ಮುಖ್ಯಮಂತ್ರಿ ಹುದ್ದೆ ಶಿವಸೇನೆಯ ಪಾಲಾಗುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಹಳೆಯ ಮೈತ್ರಿಯನ್ನು ಕಡಿದುಕೊಂಡಿರುವ ಶಿವಸೇನೆಯ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ಮುಖ್ಯಮಂತ್ರಿ ಶಿವಸೇನೆಯವರಾಗಿರುತ್ತಾರೆ. ಕಾಂಗ್ರೆಸ್ ಸರಕಾರದ ಭಾಗವಾಗಿರುತ್ತದೆಯೇ ಅಥವಾ ಬಾಹ್ಯ ಬೆಂಬಲ ನೀಡುತ್ತದೆಯೇ ಎಂಬುದು ಶೀಘ್ರ ನಿರ್ಧಾರವಾಗಲಿದೆ ಎಂದವರು ಹೇಳಿದ್ದರು.

ಫಡ್ನವೀಸ್ ಜ್ಯೋತಿಷಿ ಎಂದು ತಿಳಿದಿರಲಿಲ್ಲ: ಪವಾರ್ ಲೇವಡಿ

ಬಿಜೆಪಿಯಿಲ್ಲದೆ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಸಾಧ್ಯವಿಲ್ಲ. ರಚನೆಯಾದರೂ ಆರು ತಿಂಗಳೊಳಗೆ ಪತನವಾಗುತ್ತದೆ ಎಂಬ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಟೀಕಿಸಿದ ಪವಾರ್, ಅವರು ಈ ಹಿಂದೆ ‘ನಾನು ಮರಳಿ ಬರುತ್ತೇನೆ, ನಾನು ಮರಳಿ ಬರುತ್ತೇನೆ’ ಎಂದು ಜಪ ಮಾಡುತ್ತಿದ್ದುದು ನನಗೆ ತಿಳಿದಿದೆ. ಅವರನ್ನು ಕೆಲ ವರ್ಷಗಳಿಂದ ಬಲ್ಲೆ. ಆದರೆ ಅವರೊಬ್ಬ ಜ್ಯೋತಿಷಿ ಎಂದು ತಿಳಿದಿರಲಿಲ್ಲ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News