ಜನರು ಮದುವೆಯಾಗುತ್ತಿದ್ದಾರೆ, ರೈಲುಗಳು ತುಂಬಿ ತುಳುಕುತ್ತಿವೆ, ಆರ್ಥಿಕ ಹಿಂಜರಿತವೆಲ್ಲಿದೆ?

Update: 2019-11-15 17:24 GMT

ಹೊಸದಿಲ್ಲಿ, ನ.15: ದೇಶದಲ್ಲಿ ಆರ್ಥಿಕ ಹಿಂಜರಿತವಿದೆ ಎಂಬುದು ಸರಿಯಲ್ಲ. ದೇಶದಲ್ಲಿ ಇಷ್ಟೊಂದು ಮದುವೆಯಾಗುತ್ತಿದೆ. ರೈಲುಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲೂ ಜನಜಂಗುಳಿ ಇರುತ್ತದೆ. ದೇಶದ ಅರ್ಥವ್ಯವಸ್ಥೆ ಸರಿಯಾಗಿದೆ ಎಂಬುದರ ಸೂಚಕ ಇದಾಗಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.

ಪ್ರತೀ ಮೂರು ವರ್ಷಕ್ಕೊಮ್ಮೆ ಅರ್ಥವ್ಯವಸ್ಥೆ ಮಂದಗತಿಗೆ ಜಾರುತ್ತದೆ, ಬಳಿಕ ತಕ್ಷಣ ಚೇತರಿಸಿಕೊಳ್ಳುತ್ತಿದೆ. ಇದು ತಿಳಿದೂ ಕೆಲವರು ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ಸೂಚಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಭಾರತವು ವಿಶ್ವದ ಉತ್ಪಾದನಾ ಕೇಂದ್ರವಾಗಿರಲಿದೆ ಎಂದು ರೈಲ್ವೇ ಖಾತೆಯ ಸಹಾಯಕ ಸಚಿವ ಅಂಗಡಿ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಟುಂಡಾ ಖುರ್ಜಾ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಅನ್ನು ಪರಿಶೀಲಿಸಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಸಚಿವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಸಹಿತ ವಿಪಕ್ಷಗಳು ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯವನ್ನು ಎತ್ತಲು ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News