×
Ad

ಸರಕಾರಿ ವಿರೋಧಿ ಪ್ರತಿಭಟನೆಗೆ ಸಿಂಹವನ್ನೇ ಕರೆ ತಂದ ವ್ಯಕ್ತಿ!

Update: 2019-11-15 18:10 IST
Photo: Twitter(@SaraAlHashemia)

ಬಾಗ್ದಾದ್: ಇರಾಕ್ ನಲ್ಲಿ ನಡೆದ ಸರಕಾರಿ ವಿರೋಧಿ ಪ್ರತಿಭಟನೆಗೆ ವ್ಯಕ್ತಿಯೊಬ್ಬ ಸಿಂಹವನ್ನೇ ಕರೆದುಕೊಂಡು ಹೋಗಿದ್ದಾನೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿಂಹದ ಮೈಗೆ ದೇಶದ ಧ್ವಜವನ್ನು ಸುತ್ತಲಾಗಿತ್ತಲ್ಲದೆ  ಆ ವ್ಯಕ್ತಿ ಅದನ್ನು ಸರಪಳಿಯಲ್ಲಿ ಹಿಡಿದುಕೊಂಡಿರುವುದೂ ಕಾಣಿಸಿದೆ. ಸಿಂಹ ಅಲ್ಲಿದ್ದ ಜನರ ಗುಂಪೊಂದರತ್ತ ಒಮ್ಮೆ ಹಾರಿದರೂ  ಕೊನೆಗೆ ತನ್ನನ್ನು ಕರೆ ತಂದ ವ್ಯಕ್ತಿಯ ಬಳಿಯಲ್ಲಿಯೇ ಸುಮ್ಮನೆ ಕುಳಿತುಕೊಂಡಿದೆ.

ಈ ದೃಶ್ಯವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲವಾದರೂ  ಕಳೆದ ಒಂದೂವರೆ ತಿಂಗಳುಗಳ ಅವಧಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದಿನಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದ್ದು ಕೆಲವು ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿವೆ. ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ಕಾದಾಡಿದ ಹಲವಾರು ಘಟನೆಗಳೂ ನಡೆದಿದ್ದು ಇಲ್ಲಿಯ ತನಕ ಕನಿಷ್ಠ 320 ಜನರು ಮೃತಪಟ್ಟು ಸಾವಿರಾರು ಇತರರು ಗಾಯಗೊಂಡಿದ್ದಾರೆ.

ಗುರುವಾರ ನಡೆದ ಹಿಂಸಾಚಾರದಲ್ಲಿ ನಾಲ್ಕು ಮಂದಿ ಮೃತಪಟ್ಟು 65ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಸರಕಾರ ಜನರ ಜನಜೀವನ ಸುಧಾರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಇರಾಕ್ ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News