ಅಭ್ಯಾಸ ಆರಂಭಿಸಿದ ಎಂಎಸ್ ಧೋನಿ ವಿಂಡೀಸ್ ವಿರುದ್ಧ ಸರಣಿಗೆ ಅಲಭ್ಯ

Update: 2019-11-15 17:45 GMT

ಹೊಸದಿಲ್ಲಿ, ನ.15: ಮಹೇಂದ್ರ ಸಿಂಗ್ ಧೋನಿ ತನ್ನ ತವರುಪಟ್ಟಣ ರಾಂಚಿಯಲ್ಲಿ ನೆಟ್ ಪ್ರಾಕ್ಟೀಸ್ ಆರಂಭಿಸಿದ್ದಾರೆ. ಆದರೆ, ಅವರು ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಲಭ್ಯವಿರುವ ಸಾಧ್ಯತೆಯಿಲ್ಲ.

ಮಾಜಿ ನಾಯಕ ಧೋನಿ ಜುಲೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ಪಂದ್ಯ ಆಡಿದ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯದಲ್ಲಿ ಭಾಗಿಯಾಗಿಲ್ಲ. ಇದೀಗ ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ನೆಟ್ ಸೆಶನ್‌ನಲ್ಲಿ ಭಾಗವಹಿಸಿರುವ ಧೋನಿ ತಂಡಕ್ಕೆ ವಾಪಸಾಗುವ ವಿಶ್ವಾಸ ಮೂಡಿಸಿದ್ದಾರೆ.

ಧೋನಿ ಮತ್ತೆ ಅಭ್ಯಾಸ ಆರಂಭಿಸಿದ್ದರೂ ವೆಸ್ಟ್‌ಇಂಡೀಸ್ ವಿರುದ್ಧ ಮುಂಬೈನಲ್ಲಿ ಡಿ.6ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ-20 ಹಾಗೂ 3 ಪಂದ್ಯಗಳ ಏಕದಿನ ಸರಣಿಯಿಂದ ದೂರ ಉಳಿದಿದ್ದಾರೆ.

‘‘ಧೋನಿ ಅವರು ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ಲಭ್ಯವಿರುವುದಿಲ್ಲ’’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ನ್ಯೂಝಿಲ್ಯಾಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ ಭಾರತ ತಂಡ ಸೋತ ಬಳಿಕ ಧೋನಿಯ ವೃತ್ತಿಜೀವನದ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಆದರೆ, ಧೋನಿ ಈ ಬಗ್ಗೆ ತುಟಿ ಬಿಚ್ಚಲಿಲ್ಲ.

ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ರಿಷಭ್ ಪಂತ್‌ರನ್ನು ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡುವ ಮೂಲಕ ಧೋನಿಯನ್ನು ಬದಿಗೆ ಸರಿಸುವ ಪ್ರಯತ್ನ ಮಾಡಿದ್ದರು. ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯ ನೇರ ಪ್ರಸಾರದ ಹೊಣೆಹೊತ್ತಿರುವ ಸಂಸ್ಥೆಯೊಂದಿಗೆ ಧೋನಿ ನ.22ರಿಂದ 26ರ ತನಕ ಕೋಲ್ಕತಾದಲ್ಲಿ ನಡೆಯಲಿರುವ ಮೊತ್ತ ಮೊದಲ ಅಹರ್ನಿಶಿ ಟೆಸ್ಟ್ ನಲ್ಲಿ ವೀಕ್ಷಕವಿವರಣೆಗಾರನಾಗಿ ಕಾರ್ಯನಿರ್ವಹಿಸಲು ಬಯಸಿದ್ದರು. ಆದರೆ, ಬಿಸಿಸಿಐ ನಿಯಮದ ಪ್ರಕಾರ ಧೋನಿ ವೀಕ್ಷಕವಿವರಣೆ ನೀಡುವುದು ಸ್ವಹಿತಾಸಕ್ತಿ ಸಂಘರ್ಷ ಎನಿಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News