ಬ್ಯಾಂಕ್ ಠೇವಣಿಗೆ ವಿಮೆ ರಕ್ಷಣೆ ಹೆಚ್ಚಿಸಲು ಸರಕಾರದ ನಿರ್ಧಾರ: ನಿರ್ಮಲಾ ಸೀತಾರಾಮನ್

Update: 2019-11-15 17:50 GMT

ಹೊಸದಿಲ್ಲಿ, ನ.15: ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿಗೆ ವಿಮೆ ರಕ್ಷಣೆಯನ್ನು ಈಗಿರುವ 1 ಲಕ್ಷ ರೂ.ಗಿಂತ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಬಹುರಾಜ್ಯ ಸಹಕಾರಿ ಬ್ಯಾಂಕ್‌ಗಳ ನಿಯಂತ್ರಣಕ್ಕೆ ಸರಕಾರ ಶಾಸನ ರೂಪಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಸೋಮವಾರ ಆರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ಶಾಸನಗಳನ್ನು ಜಾರಿಗೊಳಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಸ್ತುತ ಸಮಯದಲ್ಲಿ ಬ್ಯಾಂಕ್ ಗ್ರಾಹಕರು ತಮ್ಮ ಠೇವಣಿಗೆ 'ಡೆಪೊಸಿಟ್ ಇನ್ಷುರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್'ನಿಂದ 1 ಲಕ್ಷ ರೂ. ವಿಮೆ ರಕ್ಷಣೆ ಪಡೆಯುತ್ತಿದ್ದಾರೆ. ಭಾರತದ ಬ್ಯಾಂಕ್ ಠೇವಣಿ ವಿಮೆ ವಿಶ್ವದಲ್ಲೇ ಅತ್ಯಂತ ಕನಿಷ್ಟವಾಗಿದೆ.

ಕಲ್ಯಾಣ ಯೋಜನೆಗಳಿಗೆ ನಿಗದಿಯಾಗುವ ಮೊತ್ತವನ್ನು ಕಡಿತಗೊಳಿಸುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ. ಬಜೆಟ್‌ನಲ್ಲಿ ನಿಗದಿಯಾಗಿರುವ ಪೂರ್ಣ ಮೊತ್ತವನ್ನು ಕಲ್ಯಾಣ ಯೋಜನೆಗೆ ಬಳಸಲು ಎಲ್ಲಾ ಇಲಾಖೆಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದವರು ಹೇಳಿದ್ದಾರೆ. ಟೆಲಿಕಾಂ ಕ್ಷೇತ್ರದಲ್ಲಿ ಎದುರಾಗಿರುವ ಬಿಕ್ಕಟ್ಟಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಸಂಸ್ಥೆ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಬೇಕೆಂದು ನಾವು ಬಯಸುವುದಿಲ್ಲ. ಎಲ್ಲರೂ ಏಳಿಗೆಯಾಗಬೇಕು ಎಂಬ ಆಶಯ ನಮ್ಮದು ಎಂದರು. ಟೆಲಿಕಾಂ ಸಂಸ್ಥೆಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ನೇಮಿಸಲಾಗಿರುವ ಕಾರ್ಯದರ್ಶಿಗಳ ಸಮಿತಿ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಸಚಿವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಟೆಲಿಕಾಂ ಸಂಸ್ಥೆಗಳು ಸರಕಾರಕ್ಕೆ 1.42 ಲಕ್ಷ ಕೋಟಿ ರೂ. ಶಾಸನಬದ್ಧ ಬಾಕಿ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಸುಪ್ರೀಂಕೋರ್ಟ್ ಆದೇಶ ಹೊರಬಿದ್ದ ಬಳಿಕ , ಟೆಲಿಕಾಂ ಕ್ಷೇತ್ರಕ್ಕೆ ಎದುರಾಗಿರುವ ಆರ್ಥಿಕ ಒತ್ತಡವನ್ನು ಕಡಿಮೆಗೊಳಿಸುವ ಕ್ರಮದ ಬಗ್ಗೆ ಸಲಹೆ ನೀಡಲು ಕಳೆದ ತಿಂಗಳು ಸರಕಾರ ಕಾರ್ಯದರ್ಶಿಗಳ ಸಮಿತಿಯನ್ನು ರಚಿಸಿದೆ. ಈ ಮಧ್ಯೆ, ಸೆಪ್ಟೆಂಬರ್‌ಗೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ ವೊಡಫೋನ್ ಐಡಿಯ ಮತ್ತು ಏರ್‌ಟೆಲ್ ಸಂಸ್ಥೆಗಳು ಒಟ್ಟು 74,000 ಕೋಟಿ ನಷ್ಟ ಅನುಭವಿಸಿವೆ ಎಂದು ತ್ರೈಮಾಸಿಕ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News