ವಿಂಡೀಸ್ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

Update: 2019-11-15 17:51 GMT

ಪ್ರೊವಿಡೆನ್ಸ್, ನ.15: ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ವೆಸ್ಟ್‌ಇಂಡೀಸ್ ಮಹಿಳಾ ತಂಡವನ್ನು 7 ವಿಕೆಟ್‌ಗಳಿಂದ ಭರ್ಜರಿ ಅಂತರದಿಂದ ಮಣಿಸಿತು. ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡವನ್ನು ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 59 ರನ್‌ಗೆ ನಿಯಂತ್ರಿಸಿತು. ಗೆಲ್ಲಲು ಸುಲಭ ಗುರಿ ಪಡೆದ ಭಾರತದ ಪರ ಜೆಮಿಮಾ ರೋಡ್ರಿಗಸ್ ಔಟಾಗದೆ 40 ರನ್ ಗಳಿಸಿದರು. 16.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟದಲ್ಲಿ ಭಾರತ ಗೆಲುವಿನ ದಡ ಸೇರಿತು.

 ವೆಸ್ಟ್‌ಇಂಡೀಸ್ ಅಗ್ರ ಕ್ರಮಾಂಕ ಮತ್ತೊಮ್ಮೆ ಪವರ್ ಪ್ಲೇ ಓವರ್‌ನ ಲಾಭ ಎತ್ತಲು ವಿಫಲವಾಗಿ ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಹೇಲಿ ಮ್ಯಾಥ್ಯೂಸ್ 5 ರನ್ ಗಳಿಸಿ ಅನುಜಾ ಪಾಟೀಲ್‌ಗೆ ರಿಟರ್ನ್ ಕ್ಯಾಚ್ ನೀಡಿ ಔಟಾದರು. ಬ್ಯಾಟಿಂಗ್‌ನಲ್ಲಿ ಪರದಾಟ ಮುಂದುವರಿಸಿದ ಶೆಮೈನ್ ಕ್ಯಾಂಪ್‌ಬೆಲ್ 12 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿದರು.

 9ನೇ ಓವರ್‌ನಲ್ಲಿ ಸ್ಟಾಸಿ-ಆ್ಯನ್ ಕಿಂಗ್ ವಿಕೆಟ್ ಪತನಗೊಂಡಾಗ ವಿಂಡೀಸ್ 10 ಓವರ್‌ಗಳಲ್ಲಿ 27 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು.

ಚೆಡಿಯನ್ ನೇಶನ್ ಹಾಗೂ ನಟಾಶಾ ಮೆಕ್‌ಲೀನ್ ನಿಧಾನವಾಗಿ ಬ್ಯಾಟಿಂಗ್ ಮಾಡಿ ತಂಡದ ಇನಿಂಗ್ಸ್ ಆಧರಿಸಲು ಯತ್ನಿಸಿದರು. ಸ್ಟೇಡಿಯಂನ ಮೂರು ಸೆಟ್‌ಗಳ ಲೈಟ್ ಆಫ್ ಆಗಿತ್ತು. ಪಂದ್ಯ ಮತ್ತೆ ಆರಂಭವಾದ ಬಳಿಕವೂ ವಿಂಡೀಸ್ ಆಟಗಾರ್ತಿಯರು ಭಾರತೀಯ ಬೌಲರ್‌ಗಳ ಎದುರು ರನ್ ಗಳಿಸಲು ಪರದಾಟ ನಡೆಸಿದರು. ಅಂತಿಮವಾಗಿ ವಿಂಡೀಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 59 ರನ್ ಗಳಿಸಲಷ್ಟೇ ಶಕ್ತವಾಯಿತು.

ಚಿಲ್ಲಿ ಹೆನ್ರಿ 18 ಎಸೆತಗಳಲ್ಲಿ 11 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.

ಭಾರತದ ಬೌಲಿಂಗ್ ವಿಭಾಗದಲ್ಲಿ ರಾಧಾ ಯಾದವ್ 4 ಓವರ್‌ಗಳಲ್ಲಿ 6 ರನ್ ನೀಡಿ ಎರಡು ವಿಕೆಟ್ ಪಡೆದರು. ದೀಪ್ತಿ ಶರ್ಮಾ 12 ರನ್‌ಗೆ 2 ವಿಕೆಟ್ ಉಡಾಯಿಸಿದರು.

ಭಾರತೀಯ ತಂಡ ಮೂರು ವಿಕೆಟ್ ಕಳೆದುಕೊಂಡ ಹೊರತಾಗಿಯೂ ಗೆಲುವಿನ ಗುರಿಯನ್ನು ಸುಲಭವಾಗಿ ತಲುಪಿತು. ಮ್ಯಾಥ್ಯೂಸ್ ಅವರು ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(0)ರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು.

ಸ್ಮತಿ ಮಂಧಾನ ಹಾಗೂ ಹರ್ಮನ್‌ಪ್ರೀತ್ ಕೌರ್ ಕ್ರಮವಾಗಿ ಮ್ಯಾಥ್ಯೂಸ್ ಹಾಗೂ ಫ್ಲೆಚರ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಜೆಮಿಮಾ ರೋಡ್ರಿಗಸ್ ಹಾಗೂ ದೀಪ್ತಿ ಶರ್ಮಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ನಾಲ್ಕನೇ ಟ್ವೆಂಟಿ-20 ಪಂದ್ಯ ನ.17ರಂದು ನಡೆಯಲಿದೆ. ಐದನೇ ಹಾಗೂ ಕೊನೆಯ ಪಂದ್ಯ ನ.20ರಂದು ನಿಗದಿಯಾಗಿದೆ. ಈ ಎರಡು ಪಂದ್ಯಗಳು ಪ್ರಾವಿಡೆನ್ಸ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News