​ಅಮ್ನೆಸ್ಟಿ ಕಚೇರಿಗಳ ಮೇಲೆ ಸಿಬಿಐ ದಾಳಿ

Update: 2019-11-16 05:06 GMT

ಹೊಸದಿಲ್ಲಿ : ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆರೋಪದಲ್ಲಿ ಮಾನವಹಕ್ಕು ಹೋರಾಟ ಸಂಸ್ಥೆ ​ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಬೆಂಗಳೂರು ಹಾಗೂ ಹೊಸದಿಲ್ಲಿಯಲ್ಲಿರುವ ನಾಲ್ಕು ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

"ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಪ್ರತಿ ಬಾರಿ ಧ್ವನಿ ಎತ್ತಿದಾಗಲೆಲ್ಲ ಈ ಬಗೆಯ ಕಿರುಕುಳ ನೀಡಲಾಗುತ್ತಿದೆ" ಎಂದು ಲಂಡನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸರ್ಕಾರೇತರ ಸಂಸ್ಥೆ ದಾಳಿಯ ವಿರುದ್ಧ ಕಿಡಿ ಕಾರಿದೆ.

ಕಚೇರಿಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದ್ದರೂ, ಇಂಡಿಯನ್ಸ್ ಫಾರ್ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಟ್ರಸ್ಟ್‌ನ ಆಡಳಿತ ಮಂಡಳಿ ಅವಿನಾಶ್ ಕುಮಾರ್ ಅವರನ್ನು ಮುಂದಿನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಡಿ. 1ರಿಂದ ಅವರ ಅಧಿಕಾರಾವಧಿ ಆರಂಭವಾಗಲಿದ್ದು, ಆಕಾರ್ ಪಟೇಲ್ ಅವರ ಸ್ಥಾನವನ್ನು ತುಂಬಲಿದ್ದಾರೆ.

ನ. 5ರಂದು ಗೃಹ ಸಚಿವಾಲಯ ನೀಡಿದ ದೂರಿನ ಆಧಾರದಲ್ಲಿ ಶುಕ್ರವಾರ ದಾಳಿ ನಡೆಸಲಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸೌತ್ ಏಷ್ಯಾ ಫೌಂಡೇಷನ್ ಮತ್ತು ಇತರ ಕೆಲ ಸಂಸ್ಥೆಯ ವ್ಯಕ್ತಿಗಳ ವಿರುದ್ಧ ದೂರು ನೀಡಲಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ, ಅಮ್ನೆಸ್ಟಿ ಇಂಡಿಯಾಗೆ ಗೃಹ ಸಚಿವಾಲಯದ ಅನುಮೋದನೆ ಇಲ್ಲದೇ ವಿದೇಶಿ ನೇರ ಹೂಡಿಕೆ ರೂಪದಲ್ಲಿ 10 ಕೋಟಿ ರೂ. ಪಾವತಿಸಿದೆ ಎನ್ನುವುದು ದೂರಿನ ಸಾರಾಂಶ. ಅಂತೆಯೇ ಮತ್ತೆ 26 ಕೋಟಿ ರೂ. ಗಳನ್ನು ಬ್ರಿಟನ್‌ನ ಕೆಲ ಸಂಸ್ಥೆಗಳು ಅಮ್ನೆಸ್ಟಿ ಇಂಡಿಯಾಗೆ ಅನುಮತಿ ಇಲ್ಲದೇ ಪಾವತಿಸಿವೆ ಎಂದೂ ಆಪಾದಿಸಲಾಗಿದೆ. ಈ ಹಣದಿಂದ ಎಫ್‌ಸಿಆರ್‌ಎ ಉಲ್ಲಂಘಿಸಿ ಅಮ್ನೆಸ್ಟಿ ಚಟುವಟಿಕೆಗಳನ್ನು ಭಾರತದಲ್ಲಿ ವಿಸ್ತರಿಸಲಾಗಿದೆ ಎಂದು ದೂರಲಾಗಿದೆ.

ಆದರೆ ಭಾರತೀಯ ಹಾಗೂ ಅಂತರ್ ರಾಷ್ಟ್ರೀಯ ಕಾನೂನುಗಳಿಗೆ ತಾನು ಬದ್ಧವಾಗಿರುವುದಾಗಿ ಅಮ್ನೆಸ್ಟಿ ಇಂಡಿಯಾ ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News