ವಿಕಿಪೀಡಿಯಾ ಸಹ-ಸಂಸ್ಥಾಪಕ ರಿಂದ ಫೇಸ್‍ಬುಕ್, ಟ್ವಿಟರ್ ಗೆ ಪ್ರತಿಸ್ಪರ್ಧಿ ಜಾಲತಾಣ ಡಬ್ಲ್ಯುಟಿ. ಸೋಶಿಯಲ್

Update: 2019-11-16 06:05 GMT
ಜಿಮ್ಮಿ ವೇಲ್ಸ್ (Photo: Wikimedia Commons)

ನ್ಯೂಯಾರ್ಕ್; ವಿಕಿಪೀಡಿಯಾ ಸಹ-ಸಂಸ್ಥಾಪಕ ಜಿಮ್ಮಿ ವೇಲ್ಸ್ ಅವರು ಫೇಸ್‍ಬುಕ್ ಮತ್ತು ಟ್ವಿಟ್ಟರ್‍ಗೆ ಸ್ಪರ್ಧೆಯೊಡ್ಡುವ ಸಲುವಾಗಿ ಹೊಸ ಸಾಮಾಜಿಕ ಜಾಲತಾಣ 'ವಿಕಿಟ್ರಿಬ್ಯೂನ್ ಸೋಶಿಯಲ್' ಅಥವಾ ಡಬ್ಲ್ಯುಟಿ: ಸೋಶಿಯಲ್( WT: Social) ಆರಂಭಿಸಿದ್ದಾರೆ. ನೈಜ ಸುದ್ದಿಗಳನ್ನು ಶೇರ್ ಮಾಡಲು  ಹಾಗೂ ಉತ್ತಮ ಸಂವಾದಗಳು ಹಾಗೂ ಸಂಪರ್ಕಗಳಿಗೆ ಸಹಕಾರಿಯಾಗುವಂತಾಗಲು ಈ ಹೊಸ ಜಾಲತಾಣ ವೇದಿಕೆಯೊದಗಿಸುತ್ತಿದೆ.

ಫೇಸ್‍ಬುಕ್‍ನಂತಹುದೇ ನ್ಯೂಸ್ ಫೀಡ್ ಮುಖಾಂತರ ಬಳಕೆದಾರರು ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಲು ಡಬ್ಲ್ಯುಟಿ: ಸೋಶಿಯಲ್ ವೇದಿಕೆಯೊದಗಿಸಿದ್ದು ರಾಜಕಾರಣದಿಂದ ತಂತ್ರಜ್ಞಾನದ ತನಕ ವಿವಿಧ ವಿಚಾರಗಳ ಬಗ್ಗೆ ಚರ್ಚೆಗೆ ಇದು ಸಹಕಾರಿಯಾಗಲಿದೆ.

ಸಂಸ್ಥೆಯ ಅಬೌಟ್ ಅಸ್ ಪುಟದಲ್ಲಿ ಬಳಕೆದಾರರ ಕುರಿತಾದ ದತ್ತಾಂಶಗಳನ್ನು ಮಾರಾಟ ಮಾಡಲಾಗುವುದಿಲ್ಲವೆಂದು ಹೇಳಲಾಗಿದ್ದು ದೇಣಿಗೆ ಮೂಲಕ ಇದು ಕಾರ್ಯಾಚರಿಸಲಿದೆ. ಇದೇ ಕಾರಣದಿಂದ ಈ ವೇದಿಕೆ ಜಾಹೀರಾತು ಮುಕ್ತವಾಗಿರಲಿದೆ.

ಕಳೆದ ತಿಂಗಳು ಬಿಡುಗಡೆಯಾಗಿರುವ ಡಬ್ಲ್ಯುಟಿ: ಸೋಶಿಯಲ್ ಈಗಾಗಲೇ 50,000 ಬಳಕೆದಾರರನ್ನು ಹೊಂದುವತ್ತ ಸಾಗಿದೆ. ಸುಮಾರು 200ರಷ್ಟು ಜನರು ದೇಣಿಗೆಯನ್ನೂ ನೀಡಿದ್ದಾರೆ. ಯಾರು ಕೂಡ ಈ ಸಾಮಾಜಿಕ ಜಾಲತಾಣವನ್ನು ಸೇರಬಹುದಾದರೂ ಸದ್ಯ ಹೊಸ ಬಳಕೆದಾರರಿಗೆ ವೈಟಿಂಗ್ ಲಿಸ್ಟ್ ಇದೆ. ಕ್ಯೂನಲ್ಲಿ ನಿಲ್ಲುವುದು ನಿಮಗೆ ಬೇಕಿಲ್ಲದೇ ಇದ್ದರೆ ದೇಣಿಗೆ ನೀಡಿ ಸದಸ್ಯರಾಗಬಹುದು.

ಡಬ್ಲ್ಯುಟಿ: ಸೋಶಿಯಲ್ ದೊಡ್ಡ ಮಟ್ಟದ ಲಾಭ ತರದೇ ಇದ್ದರೂ ಸಂಸ್ಥೆ ಸುಸ್ಥಿರವಾಗಲು ಸಾಕಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News