ವಾಯು ಮಾಲಿನ್ಯಕ್ಕೆ ತುತ್ತಾಗಿರುವ ದಿಲ್ಲಿಯಲ್ಲಿ ಈ 'ಆಕ್ಸಿಜನ್ ಬಾರ್' ಈಗ ಬಹು ಬೇಡಿಕೆಯ ಸ್ಥಳ

Update: 2019-11-16 13:06 GMT
Photo: Anushree Fadnavis/Reuters

ಹೊಸದಿಲ್ಲಿ: ದಕ್ಷಿಣ ದಿಲ್ಲಿಯ ಸೆಲೆಕ್ಟ್ ಸಿಟಿ ವಾಕ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ 'ಆಕ್ಸಿ ಪ್ಯೂರ್-ಆಕ್ಸಿಜನ್ ಬಾರ್' ವಾಯು ಮಾಲಿನ್ಯದಿಂದ ಕಂಗೆಟ್ಟಿರುವ ರಾಜಧಾನಿಯ ನಿವಾಸಿಗಳಿಂದ ಬಹು ಬೇಡಿಕೆ ಪಡೆದಿರುವ ಸ್ಥಳವಾಗಿ ಬಿಟ್ಟಿದೆ.  ಮೇ ತಿಂಗಳಲ್ಲಿ  26 ವರ್ಷದ ಆರ್ಯವೀರ್ ಕುಮಾರ್ ಈ ಆಕ್ಸಿಜನ್ ಬಾರ್ ಆರಂಭಿಸಿದಾಗ ಹೆಚ್ಚಿನ ಜನರು ಅದರಲ್ಲಿ ಆಸಕ್ತಿ ವಹಿಸಿರಲಿಲ್ಲ. ಜೆಟ್ ಲ್ಯಾಗ್, ನಿದ್ರಾಹೀನತೆ ಹಾಗೂ ಖಿನ್ನತೆ ಸಮಸ್ಯೆಯಿರುವವರಿಗೆ ಈ ಆಮ್ಲಜನಕದ ಬಾರ್ ಉಪಯುಕ್ತ ಎಂದು ಹೇಳಲಾಗಿತ್ತಾದರೂ  ಜನರು ಮಾತ್ರ ಉತ್ಸಾಹ ತೋರಿಸಿರಲಿಲ್ಲ.

ಆದರೆ ಯಾವಾಗ ವಾಯು ಮಾಲಿನ್ಯದ ಬಿಸಿ ರಾಜಧಾನಿಗೆ ತಟ್ಟಿತೋ ಅಂದಿನಿಂದ ಈ ಆಕ್ಸಿಜನ್ ಬಾರ್ ಬಹು ಬೇಡಿಕೆಯ ಸ್ಥಳವಾಗಿದೆ. ಶುದ್ಧ ಗಾಳಿಗೆ ಪರಿತಪಿಸುತ್ತಿರುವ ನಾಗರಿಕರು ಇಲ್ಲಿಗೆ ಧಾವಿಸುತ್ತಿದ್ದಾರೆ. ಹದಿನೈದು ನಿಮಿಷ ಅವಧಿಗೆ ಇಲ್ಲಿ ರೂ. 299ರಿಂದ ರೂ. 499 ತನಕ  ಶುಲ್ಕ ವಿಧಿಸಲಾಗುತ್ತಿದೆ.

ಈಗ ಕಂಪೆನಿ ಲಾಭ ಗಳಿಸುತ್ತಿದೆ ಎಂದು ಹೇಳುವ ಕುಮಾರ್ ತಾವು ಮೊದಲು 2015ರಲ್ಲಿ ಲಾಸ್ ಏಂಜಲಿಸ್‍ನಲ್ಲಿ ಆಕ್ಸಿಜನ್ ಬಾರ್ ನೋಡಿದ್ದಾಗಿ ಹೇಳಿದರು.

ಅವರ ಆಕ್ಸಿಜನ್ ಬಾರ್ ಗೆ ಈಗ ಬೇಡಿಕೆ ಅದೆಷ್ಟು ಹೆಚ್ಚಿದೆಯೆಂದರೆ ಅವರು ಇಂದಿರಾ ಗಾಂಧಿ ವಿಮಾಣ ನಿಲ್ದಾಣದ ಟರ್ಮಿನಲ್ 3ರಲ್ಲಿ ಇನ್ನೆರಡು ವಾರಗಳಲ್ಲಿ ಇನ್ನೊಂದು ಶಾಖೆ ತೆರೆಯಲಿದ್ದಾರೆ.

ಈ ಆಕ್ಸಿಜನ್ ಬಾರ್ ನಲ್ಲಿ ಗ್ರಾಹಕರ ಮೂಗಿನ ಹೊಳ್ಳೆಗಳಡಿಯಲ್ಲಿ ಒಂದು ಆಕ್ಸಿ ಪ್ಯೂರ್ ಪೈಪ್  ಇಡಲಾಗುತ್ತದೆ ಹಾಗೂ ಇದರ ಮೂಲಕ ಅವರ ಆಯ್ಕೆಯ  ಸುವಾಸನೆಯ ಆಮ್ಲಜನಕಯುಕ್ತ ಶುದ್ಧ ಗಾಳಿಯನ್ನು ಅವರು  ಪಡೆಯಬಹುದಾಗಿದೆ. ಈ ಗಾಳಿ ಆಕ್ಸಿಜನ್ ಉತ್ಪಾದನಾ ಮಶೀನಿನ ಮೂಲಕ ಕೊಳವೆಗೆ ಪ್ರವೇಶಿಸುತ್ತದೆ. ಸುತ್ತಲಿನ ಗಾಳಿಯನ್ನು ಈ ಯಂತ್ರ ಪರಿಶುದ್ಧಗೊಳಿಸಿ ನಂತರ ಕೊಳವೆಗೆ ವರ್ಗಾಯಿಸುತ್ತದೆ.

ಒಬ್ಬ ಗ್ರಾಹಕನಿಗೆ  15ಕ್ಕಿಂತ ಹೆಚ್ಚು ನಿಮಿಷ ಇಲ್ಲಿ ಈ ಸೇವೆ ನೀಡಲಾಗುವುದಿಲ್ಲ, ಇದು ಯಾವುದೇ ರೋಗವನ್ನು ಗುಣಪಡಿಸುವುದಿ, ಕೇವಲ ಚೇತೋಹಾರಿ ಕ್ರಮವಾಗಿದೆ, ಎಂದು ಕುಮಾರ್ ತಿಳಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News