ಮನೆ ಖರೀದಿಸುತ್ತೀರಾ?: ಈ ಮೂರು ಮೂಲ ನಿಯಮಗಳು ಗಮನದಲ್ಲಿರಲಿ

Update: 2019-11-16 12:39 GMT

ಹಣಕಾಸು ಅಂಶಕ್ಕಿಂತ ಹೆಚ್ಚಾಗಿ ಹೂಡಿಕೆದಾರನ ಮಾನಸಿಕತೆಯಿಂದ ಮೂಡುವ ಪ್ರಮುಖ ನಿರ್ಧಾರಗಳಲ್ಲಿ ಬಹುಶಃ ಮನೆ ಖರೀದಿ ಅತ್ಯಂತ ದೊಡ್ಡ ನಿರ್ಧಾರವೆನ್ನಬಹುದು. ಮನೆ ಖರೀದಿ ಎಲ್ಲರ ಕನಸೂ ಹೌದು ಮತ್ತು ಹೆಚ್ಚಿನ ರಿಯಲ್ ಎಸ್ಟೇಟ್ ಕುಳಗಳು ಖರೀದಿದಾರನ ಈ ಮಾನಸಿಕತೆಯನ್ನು ತಮ್ಮ ಲಾಭ ಹೆಚ್ಚಿಸಿಕೊಳ್ಳಲು ಬಳಸಲು ಪ್ರಯತ್ನಿಸುತ್ತಾರೆ. ಹಾಗೆ ನೋಡಿದರೆ ರಿಯಲ್ ಎಸ್ಟೇಟ್ ಕ್ಷೇತ್ರ ಈಗ ಮೊದಲಿನಂತಿಲ್ಲ,ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದರೂ ಎಚ್ಚರಿಕೆ ಈಗಲೂ ಅಗತ್ಯವಾಗಿದೆ.

ಡೆವಲಪರ್‌ಗಳು ಎಷ್ಟೇ ಹತಾಶರಾಗಿರಲಿ, 2008 ಅಥವಾ 2013ಕ್ಕೆ ಹೋಲಿಸಿದರೆ ಅಪಾರ್ಟ್‌ಮೆಂಟ್‌ಗಳ ಬೆಲೆಗಳು ಎಷ್ಟೇ ನ್ಯಾಯಯುತವಾಗಿರಲಿ,ಮನೆ ಖರೀದಿಯ ಈ ಮೂರು ಮೂಲ ನಿಯಮಗಳು ಈಗಲೂ ಹಿಂದಿನಷ್ಟೇ ಪ್ರಸ್ತುತವಾಗಿವೆ.

► ನಿಯಮ 1

ನೀವು ವಾಸವಾಗಿರಲು ಒಂದು ಮನೆ ಸಾಕು,ಹೀಗಾಗಿ ನಿಮ್ಮ ಖರೀದಿಯನ್ನು ಒಂದೇ ಮನೆಗೆ ಸೀಮಿತಗೊಳಿಸಿ. ಹೂಡಿಕೆಗಾಗಿ ಇನ್ನಷ್ಟು ಮನೆಗಳನ್ನು ಖರೀದಿಸುವ ಚಿಂತನೆಯನ್ನು ಮಾಡಲೇಬೇಡಿ. ಮೊದಲ ಮನೆ ಒಂದು ಅಗತ್ಯವಾಗಿದೆ. ಪ್ರತಿ ತಿಂಗಳು ಬಾಡಿಗೆ ಪಾವತಿಸಬೇಕಿಲ್ಲ ಮತ್ತು ಇಎಂಐಗಳ ಮೇಲೆ ತೆರಿಗೆ ರಿಯಾಯಿತಿ ದೊರೆಯುತ್ತದೆ ಎನ್ನುವುದನ್ನುಪರಿಗಣಿಸಿದರೆ ಅದು ಆರ್ಥಿಕವಾಗಿ ದೊಡ್ಡ ಲಾಭ ಎನ್ನುವುದು ನಿಮಗೆ ಅರ್ಥವಾಗುತ್ತದೆ.

► ನಿಯಮ 2

‘ಹಾಸಿಗೆಯಿದ್ದಷ್ಟು ಕಾಲು ಚಾಚು ’ಎಂಬ ನಾಣ್ಣುಡಿ ನೆನಪಿರಲಿ. ಮನೆ ಖರೀದಿಗಾಗಿ ನೀವು ನಿರ್ಧರಿಸಿರುವ ಬಜೆಟ್‌ನ್ನು ಹಿಗ್ಗಿಸುವ ಗೋಜಿಗೆ ಹೋಗಬೇಡಿ. ಸುಂದರವಾದ,ಐಷಾರಾಮಿ ಮನೆಯನ್ನು ನೀವು ಎಷ್ಟೇ ಇಷ್ಟಪಡಬಹುದು,ಆದರೆ ಮನೆ ಸಾಲದ ಇಎಂಐ ನಿಮ್ಮ ಕುಟುಂಬದ ಆದಾಯದ ಮೂರನೇ ಒಂದು ಭಾಗವನ್ನು ಮೀರಕೂಡದು. ರಿಯಲ್ ಎಸ್ಟೇಟ್ ಮಾರ್ಕೆಟಿಂಗ್ ತಂತ್ರದ ಆಮಿಷಗಳಿಗೆ ಮರುಳಾಗದೆ ಕಡಿಮೆ ದುಡ್ಡಿನಲ್ಲಿ ಒಳ್ಳೆಯ ಮನೆಗಾಗಿ ಪ್ರಯತ್ನಿಸಿ. ಭವಿಷ್ಯದಲ್ಲಿ ನಿಮ್ಮ ಖರೀದಿ ಶಕ್ತಿ ಇನ್ನಷ್ಟು ಹೆಚ್ಚಿದರೆ ನೀವು ಇನ್ನೂ ಒಳ್ಳೆಯ ಮನೆಯನ್ನು ಹೊಂದಬಹುದು.

► ನಿಯಮ 3

ಮನೆಯನ್ನು ಖರೀದಿಸಿ,ಭರವಸೆಯನ್ನಲ್ಲ. ರೇರಾ ಅಸ್ತಿತ್ವಕ್ಕೆ ಬಂದಿರುವುದರಿಂದ ಇದು ಸಮಸ್ಯೆಯಾಗಬಾರದು. ಅತಿಯಾದ ವೆಚ್ಚದಾಯಕ ಮನೆಗಳು ಜನರ ನೋವಿಗೆ ಕಾರಣವಲ್ಲ,ಹಣ ಪಾವತಿಸಿಯೂ ಮನೆ ಸ್ವಾಧೀನಕ್ಕೆ ಬರದಿದ್ದಾಗ ಅದು ನೋವನ್ನುಂಟು ಮಾಡುತ್ತದೆ. ರಿಯಲ್ ಎಸ್ಟೇಟ್ ಕ್ಷೇತ್ರ ಕುಸಿದಿರುವುದರಿಂದ ಕಂಗೆಟ್ಟಿರುವ ಡೆವಲಪರ್‌ಗಳು ನೀಡುವ ಭವಿಷ್ಯದ ಯಾವುದೇ ಭರವಸೆಯನ್ನು ಕಣ್ಣುಮುಚ್ಚಿಕೊಂಡು ನಂಬಬೇಡಿ,ವರ್ತಮಾನದಲ್ಲಿ ನಿಮಗೆ ಸಿಗುತ್ತದೆ ಎನ್ನುವುದನ್ನು ದೃಢಪಡಿಸಿಕೊಳ್ಳಿ. ನಿಮ್ಮ ಕನಸುಗಳು ಅಥವಾ ಡೆವಲಪರ್‌ಗಳ ಭರವಸೆಗಳಿಂದ ದಾರಿ ತಪ್ಪುವ ಬದಲು ವ್ಯಾವಹಾರಿಕತೆ ಮುಖ್ಯವಾಗಿರಲಿ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಮನೆಯನ್ನು ಖರೀದಿಸಿ. ಮನೆ ಖರೀದಿಸುವಾಗ ಈ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡರೆ ನೀವೂ ಸುರಕ್ಷಿತ,ನಿಮ್ಮ ಹಣವೂ ಸುರಕ್ಷಿತವಾಗಿರುತ್ತದೆ ಮತ್ತು ಸ್ವಂತಮನೆುಲ್ಲಿ ನೆಮ್ಮದಿಯಿಂದ ಬದುಕಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News