ತಾಯಿಗೆ ಬಳುವಳಿಯಾಗಿ ಬಂದಿದ್ದ ಜಮೀನಿನಲ್ಲಿ ಪಾಲು ಕೇಳಿದ ಮಕ್ಕಳು: 1 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

Update: 2019-11-16 12:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.16: ತಾಯಿಗೆ ತಾತನಿಂದ ಬಳುವಳಿಯಾಗಿ ಬಂದ ಜಮೀನಿನಲ್ಲಿ ತಮಗೂ ಪಾಲು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ 3 ಮಕ್ಕಳಿಗೆ 1 ಲಕ್ಷ ರೂ.ದಂಡ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. 

ನಮ್ಮ ಅನುಮತಿ ಇಲ್ಲದೆ ಮಾರಾಟ ಮಾಡಿರುವ ಆಸ್ತಿಯಲ್ಲಿ ತಮಗೂ ಪಾಲು ಕೊಡಿಸಬೇಕೆಂದು 3 ಮಕ್ಕಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಾಧೀಶ ರೋಣ ವಾಸುದೇವ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಮಗಳಿಗೆ ತಂದೆಯಿಂದ ಬಳುವಳಿಯಾಗಿ ಬರುವ ಆಸ್ತಿ ಹಕ್ಕು ಆಕೆಯದ್ದೇ ಆಗಿರುತ್ತದೆ. ಮಕ್ಕಳೂ ಸೇರಿ ಬೇರೆ ಯಾರಿಗೂ ಆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿ ಅರ್ಜಿಯನ್ನು ನ್ಯಾಯಪೀಠವು ವಜಾಗೊಳಿಸಿದೆ.

ಹಿಂದು ಉತ್ತರಾಧಿಕಾರ ಕಾಯ್ದೆ ಪ್ರಕಾರ, ತಾಯಿ ಆಸ್ತಿ ಮೇಲೆ ಮಕ್ಕಳಿಗೆ ಅಧಿಕಾರ ಇಲ್ಲ. ವೈಯಕ್ತಿಕ ಲಾಭ ಗಳಿಸುವ ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಸುಳ್ಳು ದೂರಿನಿಂದ ಕೋರ್ಟ್ ಸಮಯ ವ್ಯರ್ಥವಾಗಿದೆ ಎಂದು ಕೋರ್ಟ್ ಅರ್ಜಿ ವಜಾಗೊಳಿಸಿದೆ.

ಬೋಗಸ್ ಅರ್ಜಿಗಳ ಕುರಿತು ಅಧೀನ ನ್ಯಾಯಾಲಯಗಳು ಕೂಲಂಕಷವಾಗಿ ಪರಿಶೀಲಿಸಿ, ಆರಂಭಿಕ ಹಂತದಲ್ಲೇ ವಜಾಗೊಳಿಸಬೇಕು. ಇಂತಹ ಅರ್ಜಿಗಳನ್ನು ಪರಿಗಣಿಸಬಾರದು. ಅಗತ್ಯ ಬಿದ್ದಲ್ಲಿ ಪ್ರತಿವಾದಿಗಳಿಗೆ ತಗಲುವ ವ್ಯಾಜ್ಯದ ವೆಚ್ಚವನ್ನು ಅರ್ಜಿದಾರರಿಂದಲೇ ವಸೂಲಿ ಮಾಡಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಕೋರ್ಟ್ ಆದೇಶದಲ್ಲಿ ಉಲ್ಲೇಖ ಮಾಡಿದೆ.

ಬೆಂಗಳೂರು ಉತ್ತರ ತಾಲೂಕಿನ ಗಿಡದಕೋನೇನಹಳ್ಳಿ ಮುದ್ದಯ್ಯನ ಪಾಳ್ಯದ ಮರಿಹೊನ್ನಮ್ಮ ತಮ್ಮ ಹೆಸರಿನಲ್ಲಿದ್ದ ಜಮೀನನ್ನು ನಾಗರಭಾವಿಯ ಚಿಕ್ಕಣ್ಣ ಎಂಬುವವರಿಗೆ ಮಾರಾಟ ಮಾಡಿದ್ದರು. ಜಮೀನು ಖರೀದಿಸಿದ್ದ ಚಿಕ್ಕಣ್ಣ ಭೂ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದರು. ಭೂಮಿ ಮಾರಾಟ ಪ್ರಶ್ನಿಸಿ ಮರಿಹೊನ್ನಮ್ಮ ಮಕ್ಕಳಾದ ಮಾರೇಗೌಡ, ಮುನಿರಾಜು ಹಾಗೂ ಮಲಾ ಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News