ಅವೈಜ್ಞಾನಿಕ ಟೆಂಡರ್ ಪ್ರಕ್ರಿಯೆ ಕೈಬಿಡದಿದ್ದರೆ ಬೆಂಗಳೂರು ಬಂದ್: ಮಹಾ ಒಕ್ಕೂಟದ ಎಚ್ಚರಿಕೆ

Update: 2019-11-16 13:52 GMT

ಬೆಂಗಳೂರು, ನ.16: ಸ್ಥಳೀಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ, ಬಲಾಢ್ಯರಿಗೆ ಅನುವು ಮಾಡಿಕೊಡಲು ಬಿಬಿಎಂಪಿ ಕಡ್ಡಾಯ ಹರಾಜು ಪ್ರಕ್ರಿಯೆ ಜಾರಿಗೆ ತಂದಿದ್ದು, ಇದನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ, ಬೆಂಗಳೂರು ಬಂದ್ ಮುಷ್ಕರ ನಡೆಸಲಾಗುವುದು ಎಂದು ಬಿಬಿಎಂಪಿ ಮಾರುಕಟ್ಟೆ ಮಳಿಗೆದಾರರ ಸಂಘ ಸಂಸ್ಥೆಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆರ್.ವಿ.ಗೋಪಿ, ನೂತನವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಬೆಂಗಳೂರಿನ ಮಾರುಕಟ್ಟೆ ಮಳಿಗೆಗಳಿಗೆ ಸಾರ್ವಜನಿಕ ಟೆಂಡರ್ ಕಂ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ನಡೆಸಲಿದೆ ಎಂದು ನೋಟಿಸ್‌ಗಳನ್ನು ಮಳಿಗೆಗಳಿಗೆ ಅಂಟಿಸಲಾಗಿದೆ. ಆದರೆ, ಇದರಿಂದ ಹಲವು ವರ್ಷಗಳಿಂದ ಸ್ಥಳೀಯವಾಗಿರುವ ವ್ಯಾಪಾರಿಗಳು ಆತಂಕಗೊಂಡಿದ್ದು, ತಮ್ಮ ಮಳಿಗೆಗಳು ಬಲಾಢ್ಯರ ಕೈ ಸೇರಲಿದೆ ಎಂದು ಭಯಭೀತರಾಗಿದ್ದಾರೆ ಎಂದು ಹೇಳಿದರು.

ರಾಜಧಾನಿ ಬೆಂಗಳೂರಿನ ವ್ಯಾಪ್ತಿಯಲ್ಲಿ ಕೆಆರ್ ಮಾರುಕಟ್ಟೆ, ಮಲ್ಲೇಶ್ವರ, ರಸಲ್ ಮಾರ್ಕೆಟ್ ಸೇರಿದಂತೆ ಬಿಬಿಎಂಪಿ ಕೇಂದ್ರ ವಿಭಾಗದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ನೂರಾರು ಮಾರುಕಟ್ಟೆಗಳಿವೆ. ಆದರೆ, ಇದೀಗ ಕೋರ್ಟಿನ ನೆಪದಲ್ಲಿ ಈ ಮಾರುಕಟ್ಟೆಯ ಮಳಿಗೆಗಳಿಗೆ ಹರಾಜು ನಡೆಸಲು ನೋಟಿಸ್ ನೀಡಲಾಗಿದ್ದು, ಇದರಿಂದ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೆಲೆಯೇ ಇಲ್ಲದಂತೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ ಕೆಸಿಸಿಐ) ಅಧ್ಯಕ್ಷರೊಂದಿಗೆ ಸಭೆ ನಡೆಸಲಾಗಿದ್ದು, ವಾಣಿಜ್ಯ ವಹಿವಾಟುಗಳಿಗೆ ತೊಂದರೆಯಾಗದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ, ಹಲವು ದಶಕಗಳಿಂದ ಮಾರುಕಟ್ಟೆಯಲ್ಲಿಯೇ ವ್ಯಾಪಾರ ನಡೆಸುತ್ತಿದ್ದೇವೆ. ಆದರೆ, ಏಕಾಏಕಿ ಟೆಂಡರ್, ಹರಾಜು ಎನ್ನುತ್ತಾರೆ. ಇದರಿಂದ ಶ್ರೀಮಂತರಿಗೆ ಮಳಿಗೆಗಳು ಹೋಗಲಿದ್ದು, ಬಡ ಮತ್ತು ಸ್ಥಳೀಯರಿಗೆ ವ್ಯಾಪಾರಕ್ಕೆ ಅವಕಾಶವೇ ಇಲ್ಲದಂತೆ ಆಗಲಿದೆ ಎಂದು ಅವರು ತಿಳಿಸಿದರು.

ಎಲ್ಲ ಹಣಕ್ಕಾಗಿ

ಮಳಿಗೆಗಳಿಗೆ ಹರಾಜು ಪ್ರಕ್ರಿಯೆ ನಡೆಸುವುದೇ ಹಣಕ್ಕಾಗಿ. ಇದರಿಂದ ಹೊರ ರಾಜ್ಯದ ವ್ಯಾಪಾರಿಗಳಿಗೆ ಅನುಕೂಲವಾಗಲಿದ್ದು, ಸ್ಥಳೀಯ ವ್ಯಾಪಾರಿಗಳು ಬೀದಿಗೆ ಬೀಳಲಿದ್ದಾರೆ. ಹಾಗಾಗಿ, ರಾಜ್ಯ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ, ಬೆಂಗಳೂರು ಬಂದ್ ಮುಷ್ಕರ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮಾರುಕಟ್ಟೆ ಮಳಿಗೆದಾರರ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್.ವಿ.ಗೋಪಿ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News