ಪಂಪಾದಿಂದಲೇ 10 ಮಹಿಳೆಯರನ್ನು ವಾಪಸ್ ಕಳುಹಿಸಿದ ಪೊಲೀಸರು

Update: 2019-11-16 14:12 GMT

ತಿರುವನಂತಪುರ, ನ.16: ಎರಡು ತಿಂಗಳ ವಾರ್ಷಿಕ ಯಾತ್ರೆಯಲ್ಲಿ ಆಗಮಿಸುವ ಭಕ್ತರಿಗಾಗಿ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನವನ್ನು ಶನಿವಾರ ಸಂಜೆ ಐದು ಗಂಟೆಗೆ ತೆರೆಯಲಾಗಿದೆ. ಇದೇ ವೇಳೆ ದೇವಸ್ಥಾನವನ್ನು ಪ್ರವೇಶಿಸಲೆಂದು ಆಗಮಿಸಿದ್ದ, 50ಕ್ಕೂ ಕಡಿಮೆ ವಯೋಮಾನದ 10 ಮಹಿಳೆಯರನ್ನು ಪೊಲೀಸರು ಪಂಪಾ ಪಟ್ಟಣದಿಂದಲೇ ವಾಪಸ್ ಕಳುಹಿಸಿದ್ದಾರೆ. ಈ ಮಹಿಳೆಯರು ಆಂಧ್ರಪ್ರದೇಶದ ವಿಜಯವಾಡಾದಿಂದ ಬಂದಿದ್ದರು ಎನ್ನಲಾಗಿದೆ.

ಆದರೆ,ಈ ಮಹಿಳೆಯರು ತಮ್ಮ ಸ್ವಂತ ಇಚ್ಛೆಯಿಂದ ಸನ್ನಿಧಾನಕ್ಕೆ ತೆರಳುವ ಉದ್ದೇಶವನ್ನು ಕೈಬಿಟ್ಟಿದ್ದು,ಅವರು ಮರಳಿ ಹೋಗುವಂತೆ ಒತ್ತಡ ಹೇರಿರಲಿಲ್ಲ ಎಂದು ಮಹಿಳೆಯರ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು ತಿಳಿಸಿದರು.

ಶಬರಿಮಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು,ದೇವಸ್ಥಾನದಲ್ಲಿ ಮತ್ತು ಸುತ್ತುಮುತ್ತಲು 10,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

 ದೇವಸ್ಥಾನಕ್ಕೆ ಭೇಟಿ ನೀಡಲು ಬಯಸುವ ಮಹಿಳಾ ಹಕ್ಕು ಕಾರ್ಯಕರ್ತರಿಗೆ ತಾನು ರಕ್ಷಣೆಯನ್ನು ಒದಗಿಸುವುದಿಲ್ಲ ಎಂದು ಕೇರಳ ಸರಕಾರವು ಶುಕ್ರವಾರ ಹೇಳಿದೆ. ದೇವಸ್ಥಾನ ಭೇಟಿಗೆ ರಕ್ಷಣೆಯನ್ನು ಬಯಸುವವರು ನ್ಯಾಯಾಲಯದ ಆದೇಶವನ್ನು ಹೊಂದಿರಬೇಕು ಎಂದು ಕೇರಳ ದೇವಸ್ವಂ ಮಂಡಳಿ ಸಚಿವ ಕೆ.ಸುರೇಂದ್ರನ್ ತಿಳಿಸಿದ್ದಾರೆ.

ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿಯಂತಹ ಮಹಿಳೆಯರ ಪ್ರವಾಸ ಯೋಜನೆಗಳ ಮೇಲೆ ಕಣ್ಣಿರಿಸಿರುವುದಾಗಿ ಪೊಲೀಸರು ಶನಿವಾರ ಹೇಳಿದ್ದಾರೆ. ನ.20ರಂದು ತಾನು ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿರುವ ದೇಸಾಯಿ,ಮಹಿಳೆಯರಿಗೆ ರಕ್ಷಣೆ ಒದಗಿಸುವುದಿಲ್ಲ ಎಂದು ಸರಕಾರವು ಹೇಳಿದೆ. ಹೀಗಾಗಿ ಮಹಿಳೆಯರು ರಕ್ಷಣೆಯಿಲ್ಲದೆ ಶಬರಿಮಲೆ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಈಗ ಮಹಿಳೆಯರನ್ನು ತಡೆಯಲಾಗುತ್ತಿದೆ. ಸರಕಾರವು ಸಂಪೂರ್ಣವಾಗಿ ಮಹಿಳೆಯರ ವಿರುದ್ಧ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿದ್ದಾರೆ. 2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ನಿಷೇಧವನ್ನು ರದ್ದುಗೊಳಿಸಿದ ಬಳಿಕ ದೇಸಾಯಿ ದೇವಸ್ಥಾನವನ್ನು ಪ್ರವೇಶಿಸುವ ವಿಫಲ ಯತ್ನ ನಡೆಸಿದ್ದರು.

ಮಹಿಳೆಯರ ಪ್ರವೇಶ ವಿಷಯ ಕುರಿತು ತಾನು ಅಡ್ವೊಕೇಟ್ ಜನರಲ್ ಸಿ.ಪಿ.ಸುಧಾಕರ ಪ್ರಸಾದ ಅವರಿಂದ ಕಾನೂನು ಅಭಿಪ್ರಾಯವನ್ನು ಕೋರುವುದಾಗಿ ರಾಜ್ಯದ ಪೊಲೀಸ್ ವರಿಷ್ಠ ಲೋಕನಾಥ ಬೆಹೆರಾ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ವರ್ಷ ಶಬರಿಮಲೆ ದೇವಸ್ಥಾನವನ್ನು ಪ್ರವೇಶಿಸಲು ಋತುಸ್ರಾವ ವಯೋಮಾನದ 45 ಮಹಿಳೆಯರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News