ಅಪರಾಧಗಳ ಆರೋಪವಿರುವ ವಿದೇಶಿಯರಿಗಾಗಿ ಎರಡು ಬಂಧನ ಕೇಂದ್ರಗಳ ಸ್ಥಾಪನೆ:ಪ.ಬಂ.ಸಚಿವ

Update: 2019-11-16 14:15 GMT

 ಕೋಲ್ಕತಾ, ನ.16: ಪಶ್ಚಿಮ ಬಂಗಾಳ ಸರಕಾರವು ಕ್ರಿಮಿನಲ್ ಆರೋಪಗಳಲ್ಲಿ ಬಂಧಿಸಲ್ಪಟ್ಟರುವ ವಿದೇಶಿ ಪ್ರಜೆಗಳನ್ನಿರಿಸಲು ಕೋಲ್ಕತಾ ಮತ್ತು ಉತ್ತರ 24 ಪರಗಣಗಳ ಜಿಲ್ಲೆಯ ಬನಗಾಂವ್‌ನಲ್ಲಿ ಎರಡು ಬಂಧನ ಕೇಂದ್ರಗಳನ್ನು ಸ್ಥಾಪಿಸಲಿದೆ,ಅದರೆ ಇವುಗಳಿಗೂ ಎನ್‌ಆರ್‌ಸಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯದ ಸಚಿವ ಉಜ್ವಲ ಬಿಸ್ವಾಸ್ ಅವರು ಶನಿವಾರ ಇಲ್ಲಿ ತಿಳಿಸಿದರು. ಈ ಶಿಬಿರಗಳು ತಲಾ 200 ಕೈದಿಗಳನ್ನು ಹೊಂದಿರಲಿವೆ.

ಸರಕಾರವು ಈಗಾಗಲೇ ಕೋಲ್ಕತಾದಲ್ಲಿ ಕೇಂದ್ರ ಸ್ಥಾಪನೆಗೆ ಜಾಗವನ್ನು ಅಂತಿಮಗೊಳಿಸಿದೆ ಮತ್ತು ಬನಗಾಂವ್‌ನಲ್ಲಿ ಜಾಗವನ್ನು ಅನ್ವೇಷಿಸುತ್ತಿದೆ. ತಾತ್ಕಾಲಿಕ ಕ್ರಮವಾಗಿ ಸರಕಾರಿ ಕಟ್ಟಡವೊಂದನ್ನು ಬಳಸಿಕೊಳ್ಳಬಹುದು ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಸ್ವಾಸ್ ಹೇಳಿದರು.

ವಿಚಾರಣೆಯನ್ನೆದುರಿಸುತ್ತಿರುವ ಮತ್ತು ದೋಷ ನಿರ್ಣಯಗೊಂಡಿರುವ ವಿದೇಶಿ ಪ್ರಜೆಗಳನ್ನು ಸ್ಥಳೀಯ ಕೈದಿಗಳ ಜೊತೆ ಇರಿಸಬಾರದು ಎಂಬ ಸರ್ವೋಚ್ಚ ನ್ಯಾಯಾಲಯದ ನಿರ್ದೇಶಕ್ಕನುಗುಣವಾಗಿ ಈ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.

ಸದ್ಯಕ್ಕೆ 110 ವಿದೇಶಿ ಪ್ರಜೆಗಳು ರಾಜ್ಯದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದು,ಹೆಚ್ಚಿನವರು ಆಫ್ರಿಕಾದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News