ಶರೀಫ್ ಜೊತೆ ದ್ವೇಷವಿಲ್ಲ; ವಿದೇಶ ಪ್ರಯಾಣಕ್ಕೆ ಸರಕಾರ ವ್ಯವಸ್ಥೆ ಮಾಡುತ್ತಿದೆ: ಪಾಕ್ ಪ್ರಧಾನಿ ಇಮ್ರಾನ್

Update: 2019-11-16 15:16 GMT

ಇಸ್ಲಾಮಾಬಾದ್, ನ. 16: ಮಾಜಿ ಪ್ರಧಾನಿ ನವಾಝ್ ಶರೀಫ್ ಜೊತೆ ನನಗೇನೂ ದ್ವೇಷವಿಲ್ಲ, ಅವರ ಆರೋಗ್ಯವು ರಾಜಕೀಯಕ್ಕಿಂತ ಹೆಚ್ಚು ಮುಖ್ಯವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ.

ಶರೀಫ್‌ರ ಹೆಸರನ್ನು ‘ವಿಮಾನ ಪ್ರಯಾಣ ನಿಷೇಧ’ ಪಟ್ಟಿಯಿಂದ ತೆಗೆಯಲು ಇಮ್ರಾನ್ ಖಾನ್ ಸರಕಾರವು ಮೀನಮೇಷ ಎಣಿಸುತ್ತಿದ್ದು, ನನ್ನ ಸಹೋದರನಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ನಾನು ಪ್ರಧಾನಿಯನ್ನೇ ಹೊಣೆಗಾರನಾಗಿಸುತ್ತೇನೆ ಎಂದು ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ಮುಖ್ಯಸ್ಥ ಶೆಹಬಾಝ್ ಶರೀಫ್ ಎಚ್ಚರಿಕೆ ನೀಡಿದ ಒಂದು ದಿನದ ಬಳಿಕ, ಇಮ್ರಾನ್ ಈ ಹೇಳಿಕೆ ನೀಡಿದ್ದಾರೆ.

ಶುಕ್ರವಾರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದ ಇಮ್ರಾನ್ ಖಾನ್, ನನ್ನ ಸರಕಾರವು ಶರೀಫ್ ಕುಟುಂಬದ ಹಿರಿಯನಿಗೆ ಪ್ರತಿ ವೇದಿಕೆಯಲ್ಲಿ ಮಾನವೀಯ ನೆಲೆಯಲ್ಲಿ ನೆರವು ನೀಡಿದೆ ಹಾಗೂ ಅವರ ಹೆಸರನ್ನು ವಿಮಾನ ಪ್ರಯಾಣ ನಿಷೇಧ ಪಟ್ಟಿಯಿಂದ ತೆಗೆದುಹಾಕುವುದಕ್ಕೆ ಸಂಬಂಧಿಸಿ ಕಾನೂನು ಆಯ್ಕೆಯೊಂದನ್ನು ಸಿದ್ಧಪಡಿಸಿದೆ ಎಂದು ಹೇಳಿದರು ಎಂದು ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.

ವಿಮಾನ ಪ್ರಯಾಣ ನಿಷೇಧ ಪಟ್ಟಿಯಿಂದ ಶರೀಫ್ ಹೆಸರನ್ನು ತೆಗೆಯಲು ಇಂಡೆಮ್ನಿಟಿ ಬಾಂಡನ್ನು ಸಲ್ಲಿಸುವ ಬದಲು ಶರೀಫ್ ಕುಟುಂಬವು ನ್ಯಾಯಾಲಯಕ್ಕೆ ಹೋದರೂ ಸರಕಾರಕ್ಕೇನೂ ಸಮಸ್ಯೆಯಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News