ರಾಜ್ಯಸಭೆಯಲ್ಲಿ ಪ್ರತಿಪಕ್ಷದಲ್ಲಿ ಕೂರಲಿರುವ ಶಿವಸೇನೆ, ಎನ್‌ಡಿಎ ಸಭೆಗೂ ಹಾಜರಾಗುವುದಿಲ್ಲ: ಸಂಜಯ್ ರಾವತ್

Update: 2019-11-16 16:26 GMT

ಮುಂಬೈ, ನ.16: ಬಿಜೆಪಿ ಮತ್ತು ಶಿವಸೇನೆ ಪರಸ್ಪರ ಮೈತ್ರಿ ಕಡಿದುಕೊಳ್ಳಲು ಕಾರಣವಾದ ಮಹಾರಾಷ್ಟ್ರದಲ್ಲಿನ ರಾಜಕೀಯ ಕ್ಷೋಭೆಯು ರಾಜ್ಯಸಭೆಯಲ್ಲಿ ಆಸನ ವ್ಯವಸ್ಥೆಗಳ ಪರಿಷ್ಕರಣೆಗೂ ಕಾರಣವಾಗಿದೆ. ಇತ್ತೀಚಿಗಷ್ಟೇ ಮೋದಿ ಸರಕಾರದಿಂದ ಹೊರಬಂದಿರುವ ಶಿವಸೇನೆಯು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಲಿದೆ ಎಂದು ಪಕ್ಷದ ವಕ್ತಾರ ಸಂಜಯ್ ರಾವತ್ ಅವರು ಶನಿವಾರ ಇಲ್ಲಿ ತಿಳಿಸಿದರು. ರಾವತ್ ಶಿವಸೇನೆಯ ಮೂವರು ರಾಜ್ಯಸಭಾ ಸದಸ್ಯರಲ್ಲೋರ್ವರಾಗಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರವಿವಾರ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಶಿವಸೇನೆ ಭಾಗವಹಿಸುವುದಿಲ್ಲ ಎಂದೂ ರಾವತ್ ತಿಳಿಸಿದರು.

“ಹಳೆಯ ಎನ್‌ಡಿಎ ಮತ್ತು ಈಗಿನ ಎನ್‌ಡಿಎ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ.” ಇಂದು ಎನ್‌ಡಿಎ ಸಂಚಾಲಕರು ಯಾರು? ಎನ್‌ಡಿಎದ ಸ್ಥಾಪಕರಲ್ಲೊಬ್ಬರಾಗಿದ್ದ ಎಲ್.ಕೆ.ಆಡ್ವಾಣಿಯವರು ತೊರೆದಿದ್ದಾರೆ ಅಥವಾ ನಿಷ್ಕ್ರಿಯರಾಗಿದ್ದಾರೆ ಎಂದರು. ಶಿವಸೇನೆ ಎನ್‌ಡಿಎ ತೊರೆಯುತ್ತಿರುವ ಬಗ್ಗೆ ವಿಧ್ಯುಕ್ತ ಪ್ರಕಟಣೆ ಮಾತ್ರ ಬಾಕಿಯಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ರಾವುತ್,ನೀವು ಹಾಗೆ ತಿಳಿದುಕೊಳ್ಳಬಹುದು.ಹಾಗೆ ಹೇಳಲು ಯಾವುದೇ ಸಮಸ್ಯೆಯಿಲ್ಲ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News