ಹಾಂಕಾಂಗ್‌ನಲ್ಲಿ ಮೊದಲ ಬಾರಿಗೆ ಸೈನಿಕರನ್ನು ನಿಯೋಜಿಸಿದ ಚೀನಾ

Update: 2019-11-16 16:53 GMT

ಬೀಜಿಂಗ್, ನ. 16: ಹಾಂಕಾಂಗ್‌ನಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರಜಾಪ್ರಭುತ್ವ ಪರ ಧರಣಿಗಳು ಆರಂಭವಾದ ಬಳಿಕ ಮೊದಲ ಬಾರಿಗೆ ಶನಿವಾರ ಚೀನಾವು ಅಲ್ಲಿ ಸೈನಿಕರನ್ನು ನಿಯೋಜಿಸಿದೆ. ನಾಗರಿಕ ಉಡುಪಿನಲ್ಲಿರುವ ಸೈನಿಕರು ನಗರದಲ್ಲಿರುವ ರಸ್ತೆ ತಡೆಗಳನ್ನು ತೆರವುಗೊಳಿಸುತ್ತಿದ್ದಾರೆ.

ಹಾಂಕಾಂಗ್‌ನಲ್ಲಿ ನಾಗರಿಕ ಅಶಾಂತಿ ಆರಂಭಗೊಂಡ ಐದು ತಿಂಗಳ ಬಳಿಕ ಮೊದಲ ಬಾರಿಗೆ ನಗರದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಹಾಂಕಾಂಗ್ ಗ್ಯಾರಿಸನ್‌ನಿಂದ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಹಾಂಕಾಂಗ್‌ನ ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ.

ರಸ್ತೆ ತಡೆಗಳನ್ನು ನಿವಾರಿಸಲು ಡಝನ್‌ಗಟ್ಟಳೆ ಸೈನಿಕರು ತಮ್ಮ ಕೌಲೂನ್ ಗ್ಯಾರಿಸನ್‌ನಿಂದ ಹೊರಟರು ಎಂದು ಪತ್ರಿಕೆ ಹೇಳಿದೆ. ಸಾರ್ವಜನಿಕ ಸಮುದಾಯ ಕಾರ್ಯದಲ್ಲಿ ಪಿಎಲ್‌ಎ ಸ್ಥಳೀಯ ಗ್ಯಾರಿಸನ್‌ನ ಸೈನಿಕರನ್ನು ತೊಡಗಿಸಿರುವುದು ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಲ್ಲಿ ಇದೇ ಮೊದಲ ಬಾರಿಯಾಗಿದೆ.

ಹಸಿರು ಟಿ-ಶರ್ಟ್ ಮತ್ತು ಕಪ್ಪು ಚಡ್ಡಿ ಹಾಕಿದ ಸೈನಿಕರು ಕೈಯಲ್ಲಿ ಕೆಂಪು ಬಕೆಟ್‌ಗಳನ್ನು ಹಿಡಿದುಕೊಂಡು ಪಿಎಲ್‌ಎಯ ಕೌಲೂನ್ ಟೊಂಗ್ ಬರಾಕ್‌ಗಳಿಂದ ಸಂಜೆ ಸುಮಾರು 4 ಗಂಟೆಗೆ ಹೊರಗೋಡಿದರು. ಬಳಿಕ ಅವರು ಬ್ಯಾಪ್ಟಿಸ್ಟ್ ವಿಶ್ವವಿದ್ಯಾನಿಲಯದ ಆವರಣದ ಸಮೀಪ ರೆನ್‌ಫ್ರೂ ರಸ್ತೆಯಲ್ಲಿನ ತಡೆಗಳನ್ನು ತೆರವುಗೊಳಿಸಿದರು.

ತಮ್ಮ ಕೆಲಸಕ್ಕೂ ಹಾಂಕಾಂಗ್ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸೈನಿಕರೊಬ್ಬರು ಹೇಳಿದರು. ‘‘ಇದನ್ನು ನಾವೇ ಮಾಡಿದ್ದೇವೆ. ಹಿಂಸೆಯನ್ನು ನಿಲ್ಲಿಸುವುದು ಮತ್ತು ಅವ್ಯವಸ್ಥೆಯನ್ನು ಕೊನೆಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News