ಶಾಲೆ ಕೈಪಿಡಿಯಲ್ಲಿ ಗಾಂಧಿ ಕುರಿತು ತಪ್ಪು ಮಾಹಿತಿ ಕಣ್ತಪ್ಪಿನಿಂದ ಸಂಭವಿಸಿದೆ: ಒಡಿಶಾ ಸರಕಾರ

Update: 2019-11-16 17:49 GMT

ಭುವನೇಶ್ವರ, ನ. 16: ಮಹಾತ್ಮಾ ಗಾಂಧಿ ಅವರ ಸಾವು ಆಕಸ್ಮಿಕ ಎಂದು ವಿವರಿಸಿದ ಅಧಿಕೃತ ಕೈಪಿಡಿ ಕುರಿತ ವ್ಯಾಪಕ ಟೀಕೆ ಎದುರಿಸಿರುವ ಒಡಿಶಾ ಸರಕಾರ, ಇದು ಕಣ್ತಪ್ಪಿನಿಂದ ಸಂಭವಿಸಿದೆ. ಸತ್ಯವನ್ನು ತಿರುಚುವ ಹಾಗೂ ಮಕ್ಕಳಿಗೆ ತಪ್ಪು ಮಾಹಿತಿ ನೀಡುವ ಯಾವುದೇ ಉದ್ದೇಶ ಇಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದೆ.

 ರಾಜ್ಯ ವಿಧಾನ ಸಭೆಯಲ್ಲಿ ಈ ವಿವಾದದ ಕುರಿತು ಸ್ಪೀಕರ್ ಎಸ್.ಎನ್. ಪತ್ರಾವೊ ಶುಕ್ರವಾರ ನಿರ್ದೇಶನ ನೀಡಿದ ಬಳಿಕ ಶಾಲೆ ಹಾಗೂ ಸಮೂಹ ಶಿಕ್ಷಣ ಸಚಿವ ಸಮೀರ್ ರಂಜನ್ ದಾಸ್ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಸರಕಾರ ಈಗಾಗಲೇ ಕೈಪಿಡಿ ಹಿಂದೆ ತೆಗೆದುಕೊಂಡಿದೆ. ಓರ್ವ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇನ್ನಿಬ್ಬರು ಅಧಿಕಾರಿಗಳಿಗೆ ವಿವರಣೆ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

 ಮಹಾತ್ಮಾ ಗಾಂಧಿ ಅವರ 150 ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಎರಡು ಪುಟಗಳ ಕೈಪಿಡಿ ‘ಆಮಾ ಬಾಪುಜಿ: ಏಕಾ ಝಲಕ’ ಪ್ರಕಟಿಸಲಾಗಿತ್ತು. ಈ ಕೈಪಿಡಿಯಲ್ಲಿ ಮಹಾತ್ಮಾ ಗಾಂಧಿ ಅವರ ಬೋಧನೆ, ಸಾಧನೆ, ಒಡಿಶಾದೊಂದಿಗೆ ಅವರ ಸಂಪರ್ಕ ಮೊದಲಾದ ವಿಷಯಗಳನ್ನು ಹೇಳಲಾಗಿತ್ತು. ಅಲ್ಲದೆ, ಅವರು 1948 ಜನವರಿ 30ರಂದು ದಿಲ್ಲಿಯ ಬಿರ್ಲಾ ಹೌಸ್‌ನಲ್ಲಿ ಆಕಸ್ಮಿಕ ಕಾರಣದಿಂದ ನಿಧನರಾದರು ಎಂದು ತಪ್ಪು ಮಾಹಿತಿ ನೀಡಲಾಗಿತ್ತು.

 ಈ ಬಗ್ಗೆ ಕ್ಷಮೆ ಕೋರುವಂತೆ ಹಾಗೂ ಕೈಪಿಡಿಯ ತಪ್ಪನ್ನು ಕೂಡಲೇ ಸರಿಪಡಿಸುವಂತೆ ರಾಜಕೀಯ ನಾಯಕರು ಹಾಗೂ ಹೋರಾಟಗಾರರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಆಗ್ರಹಿಸಿದ್ದರು.

ಈ ವಿಷಯ ವಿಧಾನಸಭೆಯಲ್ಲಿ ಶುಕ್ರವಾರ ಕೋಲಾಹಲಕ್ಕೆ ಕಾರಣವಾಗಿತ್ತು. ಮಹಾತ್ಮಾ ಗಾಂಧಿ ಕುರಿತ ವಿಚಾರಗಳನ್ನು ತಪ್ಪಾಗಿ ಪ್ರತಿಪಾದಿಸುತ್ತಿರುವುದನ್ನು ಎಲ್ಲ ಸದಸ್ಯರು ಪಕ್ಷಬೇಧ ಮರೆತು ಖಂಡಿಸಿದ್ದರು.

 ಮಕ್ಕಳನ್ನು ದಾರಿ ತಪ್ಪಿಸುವ, ಅವರಿಗೆ ತಪ್ಪು ಮಾಹಿತಿ ನೀಡುವ, ಸತ್ಯವನ್ನು ತಿರುಚುವ ಯಾವುದೇ ಉದ್ದೇಶ ಇಲ್ಲ. ಅದು ಕಣ್ತಪ್ಪಿನಿಂದ ಸಂಭವಿಸಿದೆ ಎಂದು ದಾಸ್ ಹೇಳಿದ್ದಾರೆ.

 ಕೈಪಿಡಿಯ ತಪ್ಪುಗಳನ್ನು ಸರಿಪಡಿಸಲಾಗುವುದು. ಅಲ್ಲದೆ, ಹೊಸತಾಗಿ ಮುದ್ರಿಸಿ ಒಂದು ತಿಂಗಳ ಒಳಗೆ ವಿದ್ಯಾರ್ಥಿಗಳಿಗೆ ಹಂಚಲಾಗುವುದು ಎಂದು ದಾಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News