ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ಪತ್ರಕರ್ತ ರಜತ್ ಶರ್ಮಾ ರಾಜೀನಾಮೆ

Update: 2019-11-16 18:24 GMT

ಹೊಸದಿಲ್ಲಿ, ನ.16: ಹಿರಿಯ ಪತ್ರಕರ್ತ ರಜತ್ ಶರ್ಮಾ ಶನಿವಾರ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಂಸ್ಥೆಯೊಳಗೆ ವಿವಿಧ ರೀತಿಯ ಜಗ್ಗಾಟ ಹಾಗೂ ಒತ್ತಡದ ನಡುವೆ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಾಗದೇ ತಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಶರ್ಮಾ ತಿಳಿಸಿದ್ದಾರೆ. 20 ತಿಂಗಳ ಕಾಲ ಅಧ್ಯಕ್ಷರಾಗಿದ್ದ ಶರ್ಮಾ ಪ್ರಧಾನ ಕಾರ್ಯದರ್ಶಿ ವಿನೋದ್ ತಿಹಾರ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ತಿಹಾರಗೆ ಅಸೋಸಿಯೇಶನ್‌ನಲ್ಲಿ ಬಿಗಿ ಹಿಡಿತವಿತ್ತು. ‘‘ದಿಲ್ಲಿಯ ಕ್ರಿಕೆಟ್ ಆಡಳಿತದಲ್ಲಿ ಯಾವಾಗಲೂ ಎಳೆಯುವಿಕೆ ಹಾಗೂ ಒತ್ತಡಗಳಿರುತ್ತಿದ್ದವು. ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂ ಕ್ರಿಕೆಟ್ ಹಿತಾಸಕ್ತಿಯ ವಿರುದ್ಧ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ನನ್ನ ಅನುಭವಕ್ಕೆ ಬಂದಿದೆ. ನನ್ನ ಸಮಗ್ರತೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯೆಂಬ ಆದರ್ಶದೊಂದಿಗೆ ಡಿಡಿಸಿಎಯನ್ನು ಮುನ್ನಡೆಸುವುದು ನನ್ನಿಂದ ಸಾಧ್ಯವಿಲ್ಲ. ನಾನು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ’’ ಎಂದು ರಜತ್ ಶರ್ಮಾ ಹೇಳಿದ್ದಾರೆ.

ಶರ್ಮಾ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಬಳಿಕ ಸಿಇಒ ರವಿ ಚೋಪ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸುನೀಲ್ ವಲ್ಸಾನ್ ಹಾಗೂ ಯಶ್ಪಾಲ್ ಶರ್ಮಾ ಅವರನ್ನೊಳಗೊಂಡ ದ್ವಿಸದಸ್ಯ ಕ್ರಿಕೆಟ್ ಸಲಹಾ ಸಮಿತಿಯು ರಾಜೀನಾಮೆ ನೀಡಿದೆ. ಮಾಜಿ ವಿತ್ತ ಸಚಿವರಾದ ದಿವಂಗತ ಅರುಣ್ ಜೇಟ್ಲಿ ಅವರ ಸಕ್ರಿಯ ಬೆಂಬಲದ ಫಲವಾಗಿ ರಜತ್ ಶರ್ಮಾ ಕ್ರಿಕೆಟ್ ಆಡಳಿತಕ್ಕೆ ಪ್ರವೇಶಿಸಿದ್ದರು. ಜೇಟ್ಲಿ ನಿಧನರಾದ ಬಳಿಕ ಶರ್ಮಾ ತನ್ನ ನೆಲೆ ಕಳೆದುಕೊಂಡಿದ್ದರು ಎಂದು ಡಿಡಿಸಿಎನ ಕೆಲವು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News