ಅಯೋಧ್ಯೆ ತೀರ್ಪು: ಮರುಪರಿಶೀಲನಾ ಅರ್ಜಿ ಸಲ್ಲಿಸಲಿರುವ ಎಐಎಂಪಿಎಲ್ ಬಿ, ಜಮೀಯತ್ ಉಲಮಾ ಇ ಹಿಂದ್

Update: 2019-11-17 14:12 GMT

ಹೊಸದಿಲ್ಲಿ, ನ.17: ಸರ್ವೋಚ್ಚ ನ್ಯಾಯಾಲಯದ ಅಯೋಧ್ಯೆ ತೀರ್ಪು ಸಾಕ್ಷ್ಯಾಧಾರಗಳು ಮತ್ತು ತರ್ಕವನ್ನು ಆಧರಿಸಿಲ್ಲ, ಹೀಗಾಗಿ ಅದನ್ನು ಪ್ರಶ್ನಿಸಿ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಜಮೀಯತ್ ಉಲಮಾ ಇ ಹಿಂದ್‌ನ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಅವರು ರವಿವಾರ ತಿಳಿಸಿದ್ದಾರೆ.

ಮುಸ್ಲಿಂ ಕಕ್ಷಿದಾರರ ಹೆಚ್ಚಿನ ವಾದಗಳನ್ನು ಮತ್ತು ಸಾಕ್ಷ್ಯಾಧಾರಗಳನ್ನು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿತ್ತು, ಆದರೂ ಹಿಂದು ಕಕ್ಷಿದಾರರ ಪರವಾಗಿ ತೀರ್ಪು ನೀಡಿದೆ ಎಂದು ಮದನಿ ಅವರು ಹೇಳಿಕೆಯಲ್ಲಿ ತಿಳಿಸಿದರು.

ಜಮೀಯತ್‌ನ ಮಾಜಿ ಉತ್ತರ ಪ್ರದೇಶ ಕಾರ್ಯದರ್ಶಿ ಎಂ.ಸಿದ್ದಿಕ್ ಅವರು ಪ್ರಕರಣದ ಮೂಲ ಅರ್ಜಿದಾರರ ಲ್ಲೋರ್ವರಾಗಿದ್ದರು. ಜಮೀಯತ್‌ನ ಹಾಲಿ ಉ.ಪ್ರ.ಕಾರ್ಯದರ್ಶಿ ಅಷದ್ ರಶೀದಿ ಅವರು ನಂತರ ಪ್ರಕರಣದಲ್ಲಿ ಅರ್ಜಿದಾರರಾಗಿದ್ದರು ಎಂದು ಜಮೀಯತ್ ಕಾರ್ಯದರ್ಶಿ ಫಝ್ಲುರ್ರಹ್ಮಾನ್ ಹೇಳಿದರು.

ರವಿವಾರ ನಡೆದ ಜಮೀಯತ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಯೋಧ್ಯೆ ತೀರ್ಪಿನ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ.

ತೀರ್ಪಿನ ವಿರುದ್ಧ ಮೇಲ್ಮನವಿಯನ್ನು ಸಲ್ಲಿಸಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸಲು ಜಮೀಯತ್ ಶುಕ್ರವಾರ ಮದನಿ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ವಕೀಲರು ಮತ್ತು ತಜ್ಞರೊಡನೆ ಸಮಾಲೋಚನೆಗಳ ಬಳಿಕ ಸಮಿತಿಯು ಮರುಪರಿಶೀಲನೆ ಅರ್ಜಿ ಸಲ್ಲಿಕೆಗೆ ಶಿಫಾರಸು ಮಾಡಿತ್ತು.

ಮುಸ್ಲಿಮರಿಗೆ ಸಂಪೂರ್ಣ ನ್ಯಾಯ ದೊರಕಿಲ್ಲ. ಮುಸ್ಲಿಮರು ಮಸೀದಿಯನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ,ಹೀಗಾಗಿ ಮಸೀದಿ ನಿರ್ಮಾಣಕ್ಕಾಗಿ ಪರ್ಯಾಯ ನಿವೇಶನವನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಮದನಿ ಹೇಳಿದರು.

ಕಾನೂನು ಹೋರಾಟದ ಪರ್ಯಾಯ ಮಾರ್ಗ ಲಭ್ಯವಿದೆಯಾದರೂ ಕೊನೆಯ ಉಸಿರು ಇರುವವರೆಗೂ ಮಸೀದಿ ಯನ್ನು ರಕ್ಷಿಸಲು ಶರಿಯಾ ಬದ್ಧತೆಯೂ ಇದೆ ಎಂದು ಸಮಿತಿಯು ತನ್ನ ಶಿಫಾರಸಿನಲ್ಲಿ ಹೇಳಿದೆ.

ಬಾಬರಿ ಮಸೀದಿ ನಿರ್ಮಾಣ ಕುರಿತು ಹಲವಾರು ವಿವಾದಗಳನ್ನು ನಿವಾರಿಸಿರುವ ಕೆಲವು ಅಭಿಪ್ರಾಯಗಳನ್ನು ಸರ್ವೋಚ್ಚ ನ್ಯಾಯಾಲಯವು ವ್ಯಕ್ತಪಡಿಸಿದೆ. ಯಾವುದೇ ಮಂದಿರವನ್ನು ನೆಲಸಮಗೊಳಿಸಿ ಮಸೀದಿಯನ್ನು ನಿರ್ಮಿಸಿರಲಿಲ್ಲ ಎನ್ನುವುದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣೆ ವರದಿಯೂ ದೃಢಪಡಿಸಿದೆ. ಮಸೀದಿಯ ಕೆಳಗೆ ಮಂದಿರವು ಪತ್ತೆಯಾಗಿತ್ತು ಎನ್ನುವ ಯಾವುದೇ ಪುರಾತತ್ವ ಸಾಕ್ಷಾಧಾರಗಳಿಲ್ಲ ಎಂದು ಜಮೀಯತ್ ಹೇಳಿಕೆಯಲ್ಲಿ ತಿಳಿಸಿದೆ.

1949ರಲ್ಲಿ ಬಾಬರಿ ಮಸೀದಿಯಲ್ಲಿ ಕಾನೂನು ಬಾಹಿರವಾಗಿ ವಿಗ್ರಹಗಳನ್ನಿಡಲಾಗಿತ್ತು,ಅಲ್ಲಿಯವರೆಗೂ ಅಲ್ಲಿ ದಿನಕ್ಕೆ ಐದು ಬಾರಿ ನಮಾಝ್ ನಡೆಯುತ್ತಿತ್ತು ಮತ್ತು 1992ರಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಕಾನೂನು ಬಾಹಿರ ಕೃತ್ಯ ಎನ್ನುವುದನ್ನು ಸರ್ವೋಚ್ಚ ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯಗಳು ಒಪ್ಪಿಕೊಂಡಿದ್ದವು. ಮುಸ್ಲಿಮರು 90 ವರ್ಷಕ್ಕೂ ಹೆಚ್ಚು ಸಮಯ ಮಸೀದಿಯಲ್ಲಿ ನಮಾಝ್ ಸಲ್ಲಿಸಿದ್ದರು. ಹೀಗಿದ್ದರೂ ಅದನ್ನು ಹಿಂದು ಕಕ್ಷಿದಾರರಿಗೆ ನೀಡಿದ್ದು ಹೇಗೆ ಎನ್ನುವುದು ಗೊಂದಲಕಾರಿಯಾಗಿದೆ ಎಂದು ಜಮೀಯತ್ ಹೇಳಿಕೆಯಲ್ಲಿ ತಿಳಿಸಿದೆ.

ಜಮೀಯತ್ ಹೆಜ್ಜೆಯಲ್ಲಿ ಎಐಎಂಪಿಎಲ್‌ಬಿ

ಅಯೋಧ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಅರ್ಜಿ ಸಲ್ಲಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ)ಯು ರವಿವಾರ ನಿರ್ಧರಿಸಿದೆ.

ಲಕ್ನೋದಲ್ಲಿ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಐಎಂಪಿಎಲ್‌ಬಿಯ ನ್ಯಾಯವಾದಿ ಝಫರ್ಯಾಬ್ ಜಿಲಾನಿ ಅವರು,ಮಸೀದಿಯ ಜಾಗವು ಅಲ್ಲಾಹ್‌ಗೆ ಸೇರಿದೆ ಮತ್ತು ಶರಿಯಾ ಕಾನೂನಿನಡಿ ಅದನ್ನು ಯಾರಿಗೂ ನೀಡಲು ಸಾಧ್ಯವಿಲ್ಲ. ಮಸೀದಿಯ ಬದಲಾಗಿ ಐದು ಎಕರೆ ಪರ್ಯಾಯ ಜಾಗವನ್ನು ಸ್ವೀಕರಿಸಲು ಮಂಡಳಿಯು ಸ್ಪಷ್ಟವಾಗಿ ನಿರಾಕರಿಸಿದೆ. ಮಸೀದಿಗೆ ಪರ್ಯಾಯ ಯಾವುದೂ ಇರಲು ಸಾಧ್ಯವಿಲ್ಲ ಎನ್ನುವುದು ಮಂಡಳಿಯ ಅಭಿಪ್ರಾಯವಾಗಿದೆ ಎಂದು ತಿಳಿಸಿದರು.

ಮರುಪರಿಶೀಲನೆ ಕೋರಿಕೆಗೆ ಇಕ್ಬಾಲ್ ಅನ್ಸಾರಿ ವಿರೋಧ

ಅತ್ತ ಅಯೋಧ್ಯೆಯಲ್ಲಿ ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಯೋಧ್ಯೆ ಪ್ರಕರಣದ ಮೂಲ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಮೇಲ್ಮನವಿಯನ್ನು ಸಲ್ಲಿಸುವ ಎಐಎಂಪಿಎಲ್‌ಬಿ ನಿರ್ಧಾರದಿಂದ ಅಂತರವನ್ನು ಕಾಯ್ದುಕೊಂಡರು. ನ.9ರಂದು ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ತಾನು ತೀರ್ಪಿನ ಮರುಪರಿಶೀಲನೆಗಾಗಿ ಕೋರುವುದಿಲ್ಲ ಎಂದು ಅನ್ಸಾರಿ ಪ್ರಕಟಿಸಿದ್ದರು.

ಫಲಿತಾಂಶವು ಒಂದೇ ಆಗಿರುವುದರಿಂದ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸುವುದರಿಂದ ಯಾವುದೇ ಉಪಯೋಗವಿಲ್ಲ. ಈ ಕ್ರಮವು ಸೌಹಾರ್ದಪೂರ್ಣ ವಾತಾವರಣವನ್ನೂ ಕೆಡಿಸುತ್ತದೆ ಎಂದ ಅನ್ಸಾರಿ,ತನ್ನ ಅಭಿಪ್ರಾಯವು ಎಐಎಂಪಿಎಲ್‌ಬಿಯ ಅಭಿಪ್ರಾಯಕ್ಕಿಂತ ಭಿನ್ನವಾಗಿದೆ. ಈಗಲೇ ಮಂದಿರ-ಮಸೀದಿ ವಿವಾದವು ಅಂತ್ಯಗೊಳ್ಳಬೇಕೆಂದು ತಾನು ಬಯಸಿದ್ದೇನೆ ಎಂದರು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News