ಉಯಿಘರ್ ಮುಸ್ಲಿಮರ ನಿಷ್ಕರುಣೆಯ ದಮನಕ್ಕೆ ಆದೇಶಿಸಿದ್ದ ಕ್ಸಿಜಿನ್‌ಪಿಂಗ್

Update: 2019-11-17 17:51 GMT

ಬೀಜಿಂಗ್, ನ.17: ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಉಯಿಘರ್ ಮುಸ್ಲಿಮರ ವಿರುದ್ಧ ಚೀನಿ ಪಡೆಗಳ ದೌರ್ಜನ್ಯಗಳ ಬಗ್ಗೆ ಬೆಳಕು ಚೆಲ್ಲುವ ಚೀನಿ ಸರಕಾರದ ದಾಖಲೆಗಳು ಸೋರಿಕೆಯಾಗಿವೆ. ಉಯಿಘರ್ ಪ್ರಾಂತದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಎಳ್ಳಷ್ಟೂ ಕರುಣೆ ತೋರದೆ, ಕಠಿಣವಾಗಿ ಕಾರ್ಯಾಚರಿಸುವಂತೆ ಚೀನಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆದೇಶಿಸಿದ್ದಾರೆಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಪಶ್ಚಿಮ ಚೀನಾದ ಉಯಿಘರ್ ಪ್ರಾಂತದಲ್ಲಿ 10 ಲಕ್ಷಕ್ಕೂ ಅಲ್ಪಸಂಖ್ಯಾತ ಮುಸ್ಲಿಮರನ್ನು ನಿರ್ಬಂಧಿತ ಶಿಬಿರಗಳಲ್ಲಿ ಇರಿಸಲಾಗಿದೆಯೆಂದು ಮಾನವಹಕ್ಕು ಗುಂಪುಗಳು ಆರೋಪಿಸಿವೆ.

 103 ಪುಟಗಳನ್ನೊಳಗೊಂಡ ಚೀನಿ ಸರಕಾರದ ಆಂತರಿಕ ದಾಖಲೆಗಳು ನ್ಯೂಯಾರ್ಕ್ ಟೈಮ್ಸ್‌ಗೆ ಲಭ್ಯವಾಗಿವೆ. ಈ ದಾಖಲೆಗಳಲ್ಲಿ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರ ಅಪ್ರಕಟಿತ ಭಾಷಣಗಳು ಹಾಗೂ ಆದೇಶಗಳಿವೆ ಮತ್ತು ಉಯಿಘರ್ ಮುಸ್ಲಿಮ್ ಸಮುದಾಯದ ಮೇಲೆ ಕಣ್ಗಾವಲು ಹಾಗೂ ನಿಯಂತ್ರಣದ ಕುರಿತಾದ ವರದಿಗಳಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ಶನಿವಾರ ತಿಳಿಸಿದೆ.

  ಚೀನಾದ ರಾಜಕೀಯ ಸಂಸ್ಥಾಪನೆಯೊಂದರ ಅಜ್ಞಾತ ಸದಸ್ಯರೊಬ್ಬರು ಈ ದಾಖಲೆಯನ್ನು ಸೋರಿಕೆ ಮಾಡಿದ್ದಾರೆನ್ನಲಾಗಿದೆ. 2014ರಲ್ಲಿ ನೈಋತ್ಯ ಚೀನಾದಲ್ಲಿ ರೈಲೊಂದರಲ್ಲಿ ಬಾಂಬ್ ಸ್ಫೋಟ ನಡೆದು, 31 ಮಂದಿ ಮೃತಪಟ್ಟ ಬಳಿಕ ಕ್ಸಿಜಿನ್‌ ಪಿಂಗ್ ಅವರು ಪ್ರತ್ಯೇಕವಾದ ಮತ್ತು ಒಳನುಸುಳುವಿಕೆ ಕೃತ್ಯಗಳನ್ನು ನಡೆಸುವವರ ವಿರುದ್ಧ ಯಾವುದೇ ಕರುಣೆಯನ್ನು ತೋರಿಸದಂತೆ ಆದೇಶಿಸಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.

 ತನ್ನ ಭಾಷಣದಲ್ಲಿ ಉಯಿಘರ್ ಮುಸ್ಲಿಮರ ದಮನ ಕಾರ್ಯಾಚರಣೆಯನ್ನು ಹಾಗೂ ಬಂಧನವನ್ನು ಕ್ಸಿಜಿನ್‌ಪಿಂಗ್ ಸಮರ್ಥಿಸಿಕೊಂಡಿದ್ದರು. ನಾಪತ್ತೆಯಾದ ಅಥವಾ ಬಂಧನದಲ್ಲಿರುವ ತಮ್ಮ ಕುಟುಂಬ ಸದಸ್ಯರನ್ನು ಹುಡುಕಲು ಮನೆಗೆ ಮರಳಿದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ನೀಡುವ ಮಾರ್ಗದರ್ಶಿ ಪುಸ್ತಕವನ್ನು ಕೂಡಾ ಈ ಸೋರಿಕೆಯಾದ ದಾಖಲೆಗಳು ಒಳಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News