ಕೇಂದ್ರ, ರಾಜ್ಯ ಸರಕಾರವನ್ನು ಟೀಕಿಸಿದ ಪತ್ರಕರ್ತನ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲು

Update: 2019-11-17 18:09 GMT

ಹೊಸದಿಲ್ಲಿ, ನ. 17: ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಟೀಕಿಸಿದ ಪತ್ರಕರ್ತನ ವಿರುದ್ಧ ತೆಲಂಗಾಣದಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಇನ್ನೊಂದು ಘಟನೆ ವರದಿಯಾಗಿದೆ.

 ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಟೀಕಿಸಿದ ತೆಲುಗು ಮಾಸ ಪತ್ರಿಕೆ ‘ವೀಕ್ಷಣಂ’ನ ಸಂಪಾದಕರಾದ ಎನ್. ವೇಣುಗೋಪಾಲ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಹಾಗೂ ತೆಲಂಗಾಣ ಸಾರ್ವಜನಿಕ ಭದ್ರತಾ ಕಾಯ್ದೆ ಅಡಿಯಲ್ಲಿ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಆದರೆ, ವೇಣುಗೋಪಾಲ್ ಅವರನ್ನು ಇದುವರೆಗೆ ಬಂಧಿಸಿಲ್ಲ. ರಾಜ್ಯದ ವಿರುದ್ಧ ಮಾವೋವಾದಿಗಳ ಪಿತೂರಿ ಪ್ರಕರಣದಲ್ಲಿ ಅವರನ್ನು 7ನೇ ಆರೋಪಿ ಎಂದು ಪರಿಗಣಿಸಲಾಗಿದೆ.

 ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಕೆ. ಚಂದ್ರಶೇಖರ್ ನೇತೃತ್ವದ ತೆಲಂಗಾಣದ ಟಿಆರ್‌ಎಸ್ ಸರಕಾರ ಬಹುಸಂಖ್ಯಾತರ ಬಗ್ಗೆ ಒಲವು ಹೊಂದಿರುವ ಬಗ್ಗೆ ವೇಣುಗೋಪಾಲ್ ಪತ್ರಿಕೆಯಲ್ಲಿ ಟೀಕಿಸಿದ್ದರು.

ತೆಲಂಗಾಣ ರಾಜ್ಯ ಸ್ಥಾಪನೆಯಾದ ಬಳಿಕ ಅವರು ಟಿಆರ್‌ಎಸ್ ಸರಕಾರ ಹಾಗೂ ಅದರ ಜನ ವಿರೋಧಿ ನೀತಿಗಳ ಬಗ್ಗೆ ಕಟುವಾಗಿ ಟೀಕಿಸುತ್ತಾ ಬಂದಿದ್ದಾರೆ.

 ರಿಮಾಂಡ್ ಕೇಸ್ ಡೈರಿಯಲ್ಲಿ ಆರೋಪಿಯಾಗಿ ವೇಣುಗೋಪಾಲ್ ಅವರ ಹೆಸರನ್ನು ಪೊಲೀಸರು ಸೇರಿಸಿದ್ದಾರೆ. ಅಲ್ಲದೆ, ಅವರು ‘ವಿಪ್ಲವ ರಚಾಯಿತಲ ಸಂಘಂ’ನ ಸದಸ್ಯರು ಎಂದು ಹೇಳಿದ್ದಾರೆ. ‘ವಿರಸಂ’ ಎಂದು ಜನಪ್ರಿಯವಾಗಿರುವ ಈ ಸಂಘಟನೆಯ ಸ್ಥಾಪಕ ಎಡಪಂಥೀಯ ವಿಚಾರವಾದಿ ವರವರ ರಾವ್.

 ಆದರೆ, ವೇಣುಗೋಪಾಲ್ ಅವರು 2009ರಲ್ಲೇ ‘ವಿರಸಂ’ನ ಸಂಪರ್ಕ ಕಡಿದುಕೊಂಡಿದ್ದಾರೆ ಎಂದು ‘ವೀಕ್ಷಣಂ’ನ ಸಂಪಾದಕೀಯ ತಂಡ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News