ಚುನಾವಣಾ ಬಾಂಡ್ ವಿರುದ್ಧ ಆರ್ ಬಿಐ ನೀಡಿದ್ದ ಗಂಭೀರ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ದ ಮೋದಿ ಸರಕಾರ: ವರದಿ

Update: 2019-11-18 10:57 GMT

ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ಹರಿದು ಬರುವ ದೇಣಿಗೆಯನ್ನು ಪಾರದರ್ಶಕ-ರಹಿತಗೊಳಿಸುವಂತಹ ಎಲೆಕ್ಟೋರಲ್ ಬಾಂಡ್ ಅಥವಾ ಚುನಾವಣಾ ಬಾಂಡ್ ಗಳನ್ನು ಜಾರಿಗೊಳಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬಹಳ ಮುಂಚಿತವಾಗಿಯೇ  ಸರಕಾರಕ್ಕೆ ಶಿಫಾರಸು ಮಾಡಿದ್ದರೂ ನರೇಂದ್ರ ಮೋದಿ ಸರಕಾರ ಅದನ್ನು ನಿರ್ಲಕ್ಷ್ಯಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿತ್ತು ಎಂದು www.huffingtonpost.in ವರದಿ ಮಾಡಿದೆ.

ತಮ್ಮ 2017ನೇ ವರ್ಷದ ಬಜೆಟ್‍ ನಲ್ಲಿ ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ಈ ಯೋಜನೆ ಘೋಷಿಸುವ ನಾಲ್ಕು ದಿನಗಳ ಮುನ್ನ ಯೋಜನೆ ಕುರಿತಾದ ದಾಖಲೆಗಳನ್ನು ಪರೀಶೀಲಿಸಿದ ತೆರಿಗೆ ಅಧಿಕಾರಿಯೊಬ್ಬರು ಇಂತಹ ಯೋಜನೆ ಜಾರಿಗೆ ಆರ್‍ ಬಿಐ ಕಾಯಿದೆಗೆ ತಿದ್ದುಪಡಿ ಅಗತ್ಯವೆಂದು ಕಂಡುಕೊಂಡಿದ್ದರು. ಜನವರಿ 28, 2017ರಂದು ಅಗತ್ಯ ತಿದ್ದುಪಡಿಗಳ ಕರಡು ಸಿದ್ಧಪಡಿಸಿ ತಮ್ಮ ಹಿರಿಯಾಧಿಕಾರಿಗಳಿಗೆ ನೀಡಿದ್ದು, ಅವರು ಅದನ್ನು ಆಗಿನ ಆರ್‍ ಬಿಐ ಡೆಪ್ಯುಟಿ ಗವರ್ನರ್ ರಾಮ ಸುಬ್ರಮಣಿಯಂ ಗಾಂಧಿಗೆ ಅದನ್ನು ಕಳುಹಿಸಿದ್ದರು.ಇಂತಹ ತಿದ್ದುಪಡಿಗಳನ್ನು ಜಾರಿಗೆ ತಂದರೆ ಅಕ್ರಮ ಹಣ ವರ್ಗಾವಣೆಗೆ ಕಾರಣವಾಗಬಹುದು ಹಾಗೂ ಯಾರು ಒಂದು ನಿರ್ದಿಷ್ಟ ಪಕ್ಷಕ್ಕೆ ಬಾಂಡ್ ಮೂಲಕ ದೇಣಿಗೆ ನೀಡಿದರೆಂದು ತಿಳಿಯುವುದು ಸಾಧ್ಯವಾಗದು ಎಂದು ಆರ್‍ ಬಿಐ ಉತ್ತರಿಸಿತ್ತೆಂದು huffingtonpost.in ವರದಿ ತಿಳಿಸಿದೆ.

ಆದರೆ ಆಗಿನ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಆರ್‍ ಬಿಐ ವಾದವನ್ನು ತಕ್ಷಣ ತಿರಸ್ಕರಿಸಿದ್ದರಲ್ಲದೆ ಆಗಿನ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಹಾಗೂ ವಿತ್ತ ಸಚಿವರಿಗೆ ಟಿಪ್ಪಣಿ ಬರೆದು 'ಈ ಪ್ರಸ್ತಾವಿತ ವ್ಯವಸ್ಥೆ ಆರ್‍ ಬಿಐಗೆ ಅರ್ಥವಾಗಿಲ್ಲ' ಎಂದು ಬರೆದಿದ್ದರು. ಆರ್‍ ಬಿಐ ಎತ್ತಿದ ಅಂಶಗಳ ವಿರುದ್ಧ ಅವರು ವಾದಿಸಿಲ್ಲದೇ ಇದ್ದರೂ ಈ ಸಲಹೆ ಹಣಕಾಸು ಮಸೂದೆ `ಅದಾಗಲೇ ಮುದ್ರಣಗೊಂಡ' ನಂತರ ಬಂದಿತ್ತೆಂದು ಹೇಳಿದ್ದರು ಹಾಗೂ ಈ ಮೂಲಕ ಆರ್‍ ಬಿಐ ಸಲಹೆಯಲ್ಲಿ ಕೇಂದ್ರಕ್ಕೆ ಆಸಕ್ತಿಯಿಲ್ಲವೆಂಬುದನ್ನು ತೋರ್ಪಡಿಸಿದ್ದರಲ್ಲದೆ  ಈ ಎಲೆಕ್ಟೋರಲ್ ಬಾಂಡ್ ಪ್ರಸ್ತಾವ ಮುಂದುವರಿಸುವಂತೆ ಅಧಿಯಾ ಬರೆದಿದ್ದರು ಇದಕ್ಕೆ ರೇ ಒಪ್ಪಿ ಮುಂದೆ ಜೇಟ್ಲಿ ಕಡತಕ್ಕೆ ಸಹಿ ಹಾಕಿದ್ದರು ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಈ ಬಾಂಡ್‍ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಕುರಿತಾದ ನೀತಿ ನಿಯಮಗಳನ್ನು ವಿತ್ತ ಸಚಿವಾಲಯ ಜೂನ್ 2017ರಲ್ಲಿ ರಚಿಸಿತ್ತು. ಆದರೆ ಈ ಕುರಿತಾದ ಸಭೆಗೆ ಆರ್‍ ಬಿಐ ಅಧಿಕಾರಿಗಳು ಹಾಜರಾಗಿರಲಿಲ್ಲ. ಆದರೆ ಜುಲೈ 28, 2017ರಂದು ಆಗಿನ ಆರ್‍ ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಬಗ್ಗೆ ಜೇಟ್ಲಿ ಜತೆ ಚರ್ಚಿಸಿದ್ದರು. ಅದೇ ವರ್ಷದ ಆಗಸ್ಟ್ ನಲ್ಲಿ ಆರ್‍ ಬಿಐ ಮತ್ತೆ ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದು ಇಲೆಕ್ಟೋರಲ್ ಬಾಂಡ್ ಒಂದು ಉತ್ತಮ ಯೋಜನೆಯಲ್ಲ ಎಂಬುದನ್ನು ಮತ್ತೆ ವಿವರಿಸಿದ್ದರು.

"ಇಂತಹ ಬಾಂಡ್ ಗಳನ್ನು ಅನಪೇಕ್ಷಿತ ಚಟುವಟಿಕೆಗಳಿಗೆ ದುರ್ಬಳಕೆ ಮಾಡುವ ಸಾಧ್ಯತೆಯಿದೆ'' ಎಂದು ಆರ್‍ ಬಿಐ ಡೆಪ್ಯುಟಿ ಗವರ್ನರ್ ಬಿ ಪಿ ಕನುನ್ಗೊ ಬರೆದಿದ್ದರೆಂದು 'ಹಫ್‍ ಪೋಸ್ಟ್ ಇಂಡಿಯಾ' ವರದಿ ಮಾಡಿದೆ, ದುರ್ಬಳಕೆ ಮಾಡಲು ಕಷ್ಟವಾಗುವಂತಹ ಕ್ರಮಗಳನ್ನೂ ಅವರು ಸಲಹೆ ನೀಡಿದ್ದರು. ಈ ಬಾಂಡ್ ಗಳ ಅವಧಿ ಕೇವಲ 15 ದಿನಗಳಾಗಿರಬೇಕು ಹಾಗೂ ಕೆವೈಸಿ ಇರುವ ಬ್ಯಾಂಕ್ ಖಾತೆಗಳ ಮೂಲಕ ಮಾತ್ರ ಈ  ಬಾಂಡ್ ಗಳನ್ನು ಖರೀದಿಸಲು ಅನುವು ಮಾಡಿಕೊಡಬೇಕು ಹಾಗೂ ಒಂದು ವರ್ಷ ಖರೀದಿಸಬಹುದಾದ ಬಾಂಡ್ ಗಳ ಮೇಲೆ ಮಿತಿ ಹೇರಬೇಕು ಎಂದು ಅವರು ಸೂಚಿಸಿದ್ದರೂ ಸರಕಾರ ಮಾತ್ರ 15 ದಿನಗಳ ಅವಧಿಯ ಶಿಫಾರಸನ್ನು ಮಾತ್ರ ಒಪ್ಪಿತ್ತು.

ಇಲೆಕ್ಟೋರಲ್ ಬಾಂಡ್ ಘೋಷಿಸುವಾಗ ಅದು ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವುದು ಎಂದು ಜೇಟ್ಲಿ ಹೇಳಿದ್ದರೂ ವಾಸ್ತವ ಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಆಡಳಿತ ಪಕ್ಷಕ್ಕೆ 2017-18ರಲ್ಲಿ  ಬಲ್ಲ ಮೂಲಗಳಿಂದ ರೂ 437.0 ಕೋಟಿ ದೇಣಿಗೆ ದೊರೆತಿದ್ದರೆ  ಗೌಪ್ಯ ಮೂಲಗಳಿಂದ ರೂ 553.38 ಕೋಟಿ ದೇಣಿಗೆ ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News