ಸಿಯಾಚಿನ್‌ನಲ್ಲಿ ಹಿಮಪಾತ: 4 ಯೋಧರು ಸಹಿತ 6 ಮಂದಿ ಮೃತ್ಯು

Update: 2019-11-19 06:47 GMT
ಫೈಲ್ ಚಿತ್ರ

ಹೊಸದಿಲ್ಲಿ, ನ.18: ಉತ್ತರ ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ಸೋಮವಾರ ಸಂಭವಿಸಿದ ಭೀಕರ ಹಿಮಪಾತದಲ್ಲಿ ನಾಲ್ವರು ಯೋಧರು ಸೇರಿದಂತೆ 6 ಮಂದಿ ಮೃತಪಟ್ಟಿದ್ದಾರೆ. ಸೋಮವಾರ ಸಂಜೆ 3:00 ಗಂಟೆಯ ವೇಳೆಗೆ ಹಿಮಪಾತ ಸಂಭವಿಸಿದ್ದು, ಆರು ಮಂದಿ ಯೋಧರು ಹಾಗೂ ಇಬ್ಬರು ಹಮಾಲಿ (ಹೊರೆಯಾಳು)ಗಳಿದ್ದ ತಂಡವು ಹಿಮದಡಿಯಲ್ಲಿ ಸಿಲುಕಿಕೊಂಡಿತ್ತು. ಹಿಮದಡಿಯಲ್ಲಿ ಸಿಲುಕಿದ್ದ ಎಲ್ಲಾ ಎಂಟು ಮಂದಿಯನ್ನು ರಕ್ಷಣಾ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದ್ದು, ಅವರಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಲಿಕಾಪ್ಟರ್‌ಗಳ ಮೂಲಕ ಸಮೀಪದ ಸೇನಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.

ಹಿಮಪಾತದಲ್ಲಿ ಸಿಲುಕಿಕೊಂಡಿದ್ದ ಯೋಧರು ಗಸ್ತು ತಂಡದ ಭಾಗವಾಗಿದ್ದರು. ಅವರು ಸಮುದ್ರಮಟ್ಟದಿಂದ 18,000ದಷ್ಟು ಎತ್ತರವಿರುವ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಹಿಮದಡಿಯಲ್ಲಿ ಸಿಲುಕಿಕೊಂಡಿದ್ದರು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಾಕೋರಂ ಪರ್ವತ ಶ್ರೇಣಿಯಲ್ಲಿ ಸುಮಾರು 20,000 ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್ ವಿಶ್ವದ ಅತ್ಯಂತ ಎತ್ತರದ ರಣಾಂಗಣವಾಗಿದ್ದು,ಇಲ್ಲಿ ಯೋಧರು ಹಿಮಹುಣ್ಣು ಮತ್ತು ಭಾರೀ ವೇಗದಿಂದ ಬೀಸುವ ಗಾಳಿಯ ವಿರುದ್ಧ ಸೆಣಸುತ್ತಿರುತ್ತಾರೆ. ಚಳಿಗಾಲದಲ್ಲಿ ಹಿಮಪಾತ ಮತ್ತು ಭೂಕುಸಿತಗಳು ಸಾಮಾನ್ಯವಾಗಿದ್ದು,ತಾಪಮಾನ ಮೈನಸ್ 60 ಡಿ.ಸೆ.ಗೂ ಇಳಿಯುತ್ತದೆ. 1984ರಿಂದೀಚೆಗೆ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಹಿಮಪಾತವು ಹಲವಾರು ಯೋಧರನ್ನು ಬಲಿತೆಗೆದುಕೊಂಡಿದೆ.

2016ರಲ್ಲಿ ಸಂಭವಿಸಿದ ಹಿಮಪಾತದಲ್ಲಿ 10 ಯೋಧರು ಸಾವನ್ನಪ್ಪಿದ್ದರು. ಕರ್ನಾಟಕದ ಯೋಧ ಮಂಜುನಾಥ್ ಹಿಮದಡಿಯಲ್ಲಿ ಸಿಲುಕಿಕೊಂಡಿದ್ದರೂ, ಆರು ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಅವರನ್ನು ಮೇಲಕ್ಕೆತ್ತಲಾಗಿತ್ತು. ಆದರೆ ಅವರು ಆನಂತರ ಮೃತಪಟ್ಟಿದ್ದರು.

ಕಳೆದ ತಿಂಗಳು ರಾಜ್‌ನಾಥ್ ಸಿಂಗ್ ಅವರು ಲಡಾಖ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಿಯಾಚಿನ್ ಗ್ಲೇಸಿಯರ್‌ನ್ನು ಪ್ರವಾಸಿಗರಿಗಾಗಿ ತೆರೆದಿಡಲಾಗುವುದೆಂದು ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News