​ವಾಲ್‌ಮಾರ್ಟ್‌ನಲ್ಲಿ ಗುಂಡಿನ ದಾಳಿ: ಮೂವರು ಬಲಿ

Update: 2019-11-19 03:35 GMT
ಫೋಟೊ : voanews.com

ವಾಷಿಂಗ್ಟನ್: ಒಹ್ಲಹೊಮಾದ ವಾಲ್‌ಮಾರ್ಟ್ ಮಳಿಗೆಯ ಹೊರಗೆ ನಿನ್ನೆ ಸಂಜೆ ನಡೆದ ಗುಂಡಿನ ದಾಳಿಯಲ್ಲಿ ದಾಳಿಕೋರ ಸೇರಿದಂತೆ ಕನಿಷ್ಠ ಮೂವರು ಹತ್ಯೆಗೀಡಾಗಿದ್ದಾರೆ.

ಆಂತರಿಕ ವ್ಯಾಜ್ಯದ ಕಾರಣದಿಂದ ಮಳಿಗೆಯ ಹೊರಗೆ ವಾಹನ ನಿಲುಗಡೆ ಜಾಗದಲ್ಲಿ ಈ ದಾಳಿ ನಡೆದಿದೆ ಎಂದು ಡಂಕನ್ ಪಟ್ಟಣದ ಪೊಲೀಸ್ ಮುಖ್ಯಸ್ಥ ಡ್ಯಾನಿ ಫೋರ್ಡ್ ಹೇಳಿದ್ದಾರೆ.

"ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಇವರಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಸೇರಿದ್ದಾರೆ. ಮೃತಪಟ್ಟವರ ಪೈಕಿ ಒಬ್ಬರು ವಾಹನದ ಒಳಗೆ ಹಾಗೂ ಒಬ್ಬರು ವಾಹನ ಹೊರಗೆ ಇದ್ದರು ಎಂದು ವಿವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಪಿಸ್ತೂಲು ಪತ್ತೆಯಾಗಿದೆ.
ಮೂವರು ವಾಹನದಲ್ಲಿ ಕುಳಿತಿದ್ದಾಗ ಅಲ್ಲಿಗೆ ಆಗಮಿಸಿದ ಹಂತಕ ಏಕಾಏಕಿ ಗುಂಡಿನ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಸುದ್ದಿವಾಹಿನಿಗೆ ವಿವರ ನೀಡಿದ್ದಾರೆ. ಈ ಹಂತದಲ್ಲಿ ಮತ್ತೊಬ್ಬ ವ್ಯಕ್ತಿ ಆತನ ಪಿಸ್ತೂಲು ಕಸಿದುಕೊಳ್ಳಲು ಮುಂದಾದಾಗ ದಾಳಿಕೋರ ತಾನೇ ಸ್ವತಃ ಗುಂಡು ಹಾರಿಸಿಕೊಂಡ ಎಂದು ವಿವರಿಸಿದ್ದಾರೆ.

ಪತಿ ಹಾಗೂ ಪತ್ನಿ ನಡುವಿನ ವಿವಾದ ಈ ಹತ್ಯೆಗೆ ಕಾರಣ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಈ ಘಟನೆಯಲ್ಲಿ ತಮ್ಮ ಯಾವ ಸಿಬ್ಬಂದಿಯೂ ಷಾಮೀಲಾಗಿಲ್ಲ ಎಂದು ವಾಲ್‌ಮಾರ್ಟ್ ಸ್ಪಷ್ಟಪಡಿಸಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಶಾಲೆಗಳನ್ನು ತಾತ್ಕಾಲಿಕಾಗಿ ಮುಚ್ಚಲಾಗಿದೆ.

ಈ ತಿಂಗಳ ಆರಂಭದಿಂದ ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ಬಂದಿದ್ದು, ಇದರ ಅನ್ವಯ 21 ವರ್ಷ ಮೇಲ್ಪಟ್ಟವರು ಲೈಸನ್ಸ್ ಅಥವಾ ಪರ್ಮಿಟ್ ಇಲ್ಲದೇ ಮುಕ್ತವಾಗಿ ಪಿಸ್ತೂಲು ಹೊಂದಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News