ಗಾಂಧಿ ಕುಟುಂಬದ ವಿಶೇಷ ಭದ್ರತೆ ಹಿಂದೆಗೆತ: ಲೋಕಸಭೆಯಲ್ಲಿ ನಿಲುವಳಿ ಸೂಚನೆಗೆ ಕಾಂಗ್ರೆಸ್ ಪಟ್ಟು

Update: 2019-11-19 15:42 GMT
PTI

ಹೊಸದಿಲ್ಲಿ, ನ.19: ಗಾಂಧಿ ಕುಟುಂಬಕ್ಕೆ ನೀಡಲಾಗಿದ್ದ ವಿಶೇಷ ಭದ್ರತಾ ಪಡೆ(ಎಸ್‌ಪಿಜಿ) ಭದ್ರತೆಯನ್ನು ಹಿಂಪಡೆದಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಲೋಕಸಭೆಯಲ್ಲಿ ತೀವ್ರವಾಗಿ ವಿರೋಧಿಸಿರುವ ವಿಪಕ್ಷ ಕಾಂಗ್ರೆಸ್, ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಬೇಕೆಂದು ಆಗ್ರಹಿಸಿದೆ.

ಗಂಭೀರ ಬೆದರಿಕೆ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ನೀಡುತ್ತಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆದು, ಝಡ್ ಪ್ಲಸ್ ಶ್ರೇಣಿಯಲ್ಲಿ ಸಿಆರ್‌ಪಿಎಫ್ ಭದ್ರತೆ ಒದಗಿಸುವ ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ವಿವರಣೆ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಆಗ್ರಹಿಸುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಅಮಿತ್ ಶಾ ಸದನದಿಂದ ನಿರ್ಗಮಿಸಿದರು. ಆಗ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗಿದರು.

ಗಾಂಧಿ ಕುಟುಂಬಕ್ಕೆ ಎಸ್‌ಪಿಜಿ ಭದ್ರತೆಯನ್ನು ವಾಜಪೇಯಿ ಸರಕಾರ ನೀಡಿತ್ತು. 1991ರಿಂದ 2019ರ ಮಧ್ಯೆ ಎನ್‌ಡಿಎ ಎರಡು ಬಾರಿ ಅಧಿಕಾರಕ್ಕೆ ಬಂದರೂ ಎಸ್‌ಪಿಜಿ ರದ್ದುಗೊಳಿಸಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧುರಿ ಹೇಳಿದರು. ಸದನದ ಕಲಾಪವನ್ನು ಸ್ಥಗಿತಗೊಳಿಸಿ, ಎಸ್‌ಪಿಜಿ ಹಿಂಪಡೆದಿರುವ ಕುರಿತ ಚರ್ಚೆಗೆ ಆಗ್ರಹಿಸಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕು ಎಂಬ ಚೌಧುರಿಯ ಒತ್ತಾಯವನ್ನು ಸ್ಪೀಕರ್ ತಿರಸ್ಕರಿಸಿದರು.

ಬಳಿಕ ಪ್ರಶ್ನೋತ್ತರ ಅವಧಿಯಲ್ಲೂ ಕಾಂಗ್ರೆಸ್ ಸದಸ್ಯರು ಈ ವಿಷಯ ಪ್ರಸ್ತಾವಿಸಿ ಪ್ರತಿಭಟನೆಗೆ ಮುಂದಾದರು. ಇವರನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸದಸ್ಯರೂ ಬೆಂಬಲಿಸಿದ್ದು 20ಕ್ಕೂ ಹೆಚ್ಚು ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದಾಗ ಸ್ವಸ್ಥಾನಕ್ಕೆ ಮರಳುವಂತೆ ಸ್ಪೀಕರ್ ಓಂ ಬಿರ್ಲಾ ಕೇಳಿಕೊಂಡರು. ಈಗ ಸದನದಲ್ಲಿ ರೈತರ ಸಮಸ್ಯೆಗೆ ಸಂಬಂಧಿಸಿದ ವಿಷಯದ ಚರ್ಚೆ ನಡೆಯುತ್ತಿದೆ. ಈ ಪ್ರಮುಖ ವಿಷಯದ ಚರ್ಚೆಗೆ ಅಡ್ಡಿಯಾಗುವುದು ಸರಿಯಲ್ಲ ಎಂದು ಸ್ಪೀಕರ್ ಹೇಳಿದರು. ಆದರೆ ಪ್ರತಿಭಟನೆ ಮುಂದುವರಿಸಿದ ಕಾಂಗ್ರೆಸ್ ಸದಸ್ಯರು, ನಮಗೆ ನ್ಯಾಯಬೇಕು, ಸರ್ವಾಧಿಕಾರ ಕೊನೆಯಾಗಲಿ, ಪ್ರಧಾನಿ ಉತ್ತರಿಸಲಿ, ದ್ವೇಷ ರಾಜಕೀಯ ಸಮಾಪ್ತಿಯಾಗಲಿ ಮುಂತಾದ ಘೋಷಣೆ ಕೂಗತೊಡಗಿದರು.

ಬಳಿಕ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News