ಉಪಚುನಾವಣೆ: ಅವಿವೇಕಿಗಳ ಅವಾಂತರಗಳು

Update: 2019-11-20 05:36 GMT

ಕರ್ನಾಟಕದ ವಿಧಾನ ಸಭೆಯ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸೋಮವಾರ ಕೊನೆಗೊಂಡಿದೆ.ರಾಜ್ಯದಲ್ಲಿ ಆಪರೇಷನ್ ಕಮಲದ ಇನ್ನೊಂದು ಮಾದರಿಯ ಮೂಲಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರಕಾರದ ಅಳಿವು ಉಳಿವನ್ನು ನಿರ್ಧರಿಸುವ ಮಹಾಸಮರ ಎಂದು ವರ್ಣಿಸಲಾಗುತ್ತಿರುವ ಈ ಚುನಾವಣೆಯಲ್ಲಿ ‘ಅನರ್ಹ’ರೆಂದು ಬಿರುದು ಪಡೆದವರನ್ನು ಗೆಲ್ಲಿಸಲು ಮುಖ್ಯಮಂತ್ರಿ ಯಡಿಯೂರಪ್ಪಸೇರಿದಂತೆ ಸಚಿವ ಸಂಪುಟದ ಎಲ್ಲ ಮಂತ್ರಿಗಳು ಹೌಹಾರಿ ಓಡಾಡುತ್ತ, ತೇಕುತ್ತ ಬೆವರಿಳಿಸುತ್ತಿದ್ದಾರೆ.ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು 2-3 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಟ್ಟು ಮುನ್ನೂರಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಗಳನ್ನು ವಾಪಸು ಪಡೆಯಲು ನವೆಂಬರ್ 21 ಕೊನೆಯ ದಿನವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ ಹೊಸಕೋಟೆ ಬಿಟ್ಟು ಉಳಿದ ಕಡೆ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿವೆ.

ಈ ಬಾರಿ ಉಪಚುನಾವಣೆಯ ನಾಮ ಪತ್ರ ಸಲ್ಲಿಕೆ ಹಿಂದಿನಂತೆ ಸಹಜವಾಗಿರಲಿಲ್ಲ. ಅದರಲ್ಲೂ ಅನರ್ಹರು ನಾಮಪತ್ರ ಸಲ್ಲಿಸಲು ಬಂದಾಗ ಅನೇಕ ಕಡೆ ಜನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ನಾಮಪತ್ರಗಳನ್ನು ಸಲ್ಲಿಸುವ ಮೊದಲ ದಿನವೇ ನಡೆದ ಘಟನೆಗಳನ್ನು ನೋಡಿದರೆ, ಇನ್ನು ಪ್ರಚಾರದ ಸಂದರ್ಭದಲ್ಲಿ ಎಂತೆಂತಹ ಘಟನೆಗಳು ಸಂಭವಿಸುತ್ತವೆಯೋ ಊಹಿಸುವುದು ಕಷ್ಟ. ಇದು ಮತದಾರರ ತಪ್ಪಲ್ಲ. ಮತದಾರರು ಐದು ವರ್ಷಗಳಿಗೆಂದು ತಮ್ಮ ಪ್ರತಿನಿಧಿಗಳನ್ನು ಚುನಾಯಿಸಿ ವಿಧಾನ ಸಭೆಗೆ ಕಳಿಸಿದ್ದರು. ಆದರೆ ಚುನಾಯಿತರಾಗಿ ಬಂದ 17 ಶಾಸಕರು ಇನ್ನೂ ಮೂರುವರೆ ವರ್ಷಗಳ ಕಾಲಾವಧಿ ಇರುವಾಗಲೇ ರಾಜೀನಾಮೆ ನೀಡಿ ಇಂತಹ ಸ್ಥಿತಿಯನ್ನು ತಾವೇ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಊರಿಗೆಲ್ಲ ನೈತಿಕತೆಯ ಉಪದೇಶ ಮಾಡುವ ಬಿಜೆಪಿಯ ಪಾತ್ರ ಮುಖ್ಯವಾಗಿದೆ. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ತಪ್ಪುಗಳನ್ನು ಅಲ್ಲಗಳೆಯಲಾಗುವುದಿಲ್ಲ. ಯಾರೂ ಮಹಾ ಸಂಪನ್ನರೇನಲ್ಲ. ಇಂತಹವರನ್ನು ಚುನಾಯಿಸಿದ್ದಕ್ಕೆ ಜನ ಈಗ ಪಶ್ಚಾತ್ತಾಪ ಪಡಬೇಕಾಗಿದೆ.

ವಿಧಾನಸಭಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಉಪಚುನಾವಣೆ ನಡೆಯುವಂತೆ ಮಾಡಿದವರು ಕೋಟ್ಯಧಿಪತಿಗಳು. ತಮ್ಮ ರಿಯಲ್ ಎಸ್ಟೇಟ್, ಗಣಿಗಾರಿಕೆ ಮುಂತಾದ ಅಕ್ರಮ ದಂಧೆಗಳನ್ನು ನಿರಾತಂಕವಾಗಿ ನಡೆಸಲು ಇವರೆಲ್ಲ ಶಾಸನ ಸಭೆಗೆ ಸ್ಪರ್ಧಿಸಿ ಗೆದ್ದು ಬಂದವರು. ಇವರು ಮರ್ಯಾದೆಯಿಂದ ಐದು ವರ್ಷಗಳ ಕಾಲ ಶಾಸಕರಾಗಿರಬೇಕಾಗಿತ್ತು. ಆದರೆ, ದುಡ್ಡಿನ ಮದ ಇವರ ನೆತ್ತಿಗೇರಿ ತಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಕ್ಕೆ ಸರಿಯಾದ ಅನುದಾನ ದೊರೆತಿಲ್ಲ ಎಂದು ಕುಂಟು ನೆಪ ಹೇಳಿ ರಾಜೀನಾಮೆ ನೀಡಿದರು. ಇವರ ಅಕ್ರಮ ಸಂಪತ್ತಿನ ರಹಸ್ಯ ಗೊತ್ತಿದ್ದ ಬಿಜೆಪಿ ನಾಯಕರು ಕೇಂದ್ರದಲ್ಲಿ ಇರುವ ತಮ್ಮ ಅಧಿಕಾರ ಬಳಸಿಕೊಂಡು ಸಿಬಿಐ, ಜಾರಿ ನಿರ್ದೇಶನಾಲಯದ ದಾಳಿಯ ಬೆದರಿಕೆ ಹಾಕಿ ಬಲೆಗೆ ಬೀಳಿಸಿಕೊಂಡು ಮುಂಬೈನ ಐಷಾರಾಮಿ ರೆಸಾರ್ಟ್‌ನಲ್ಲಿ ನಾಲ್ಕು ತಿಂಗಳ ಕಾಲ ಇಟ್ಟು ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಉರುಳಿಸಿದರು. ಪಕ್ಷಾಂತರ ಎಂಬ ಅನೈತಿಕ ರಾಜಕಾರಣಕ್ಕೆ ಕುಮ್ಮಕ್ಕು ನೀಡಿದರು. ಈ ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಿ ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದ ನಂತರ ಇವರು ಮತ್ತೆ ಚುನಾವಣೆಗೆ ಇಳಿದಿದ್ದಾರೆ. ನ್ಯಾಯಾಲಯದಲ್ಲಿ ತಾಂತ್ರಿಕವಾಗಿ ಸ್ಪರ್ಧಿಸಬಹುದು ಎಂದು ತೀರ್ಪು ಬಂದ ಮಾತ್ರಕ್ಕೆ ಇವರು ನೈತಿಕ ವಾಗಿ ಗೆದ್ದಿದ್ದಾರೆಂದಲ್ಲ. ಇಂತಹವರನ್ನು ಮಹಾ ತ್ಯಾಗಿಗಳು ಎಂದು ವರ್ಣಿಸುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕಾಗಿತ್ತು.

ಈ ಉಪಚುನಾವಣೆ ಅಗತ್ಯವಿರಲಿಲ್ಲ. ಇದಕ್ಕಾಗಿ ಸಾರ್ವಜನಿಕರ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ವ್ಯಯವಾಗುತ್ತದೆ. ಇದು ಕರ್ನಾಟಕದ ಜನತೆಯ ಹಿತ ರಕ್ಷಣೆಗಾಗಿ ನಡೆಯುವ ಚುನಾವಣೆ ಅಲ್ಲ. ಇದು ಇವರ ಲೂಟಿ ಹೊಡೆದ ದುಡ್ಡಿನ ಅಸಹ್ಯ ಪ್ರದರ್ಶನ, ಇದಕ್ಕೆ ಕಾರಣರಾದವರಿಗೆ ಜನ ತಕ್ಕ ಪಾಠ ಕಲಿಸಬೇಕಾಗಿದೆ. ಚುನಾವಣೆ ಪ್ರಚಾರದಲ್ಲಾದರೂ ಇಂತಹವರು ಘನತೆ, ಗಾಂಭೀರ್ಯದಿಂದ ವರ್ತಿಸಲಿ, ಇಲ್ಲವಾದರೆ ಜನರೆದುರು ತಲೆತಗ್ಗಿಸುವ ಪರಿಸ್ಥಿತಿ ಬಂದೀತು.

ಪ್ರಜಾಪ್ರಭುತ್ವದಲ್ಲಿ ಚುನಾವಣೆ ನಡೆಯುವುದು ಜನರು ತಮ್ಮ ಪ್ರತಿನಿಧಿಗಳನ್ನು ಆರಿಸಲು. ಚುನಾಯಿತರಾಗಿ ಬರುವವರು ಮಾನ ಮರ್ಯಾದೆ ಇಟ್ಟುಕೊಂಡು ತಮ್ಮನ್ನು ಆಯ್ಕೆ ಮಾಡಿದ ಜನರ ಸೇವೆ ಮಾಡಬೇಕು. ಇದು ಚಿಕ್ಕ ಮಕ್ಕಳೂ ಅರ್ಥ ಮಾಡಿಕೊಂಡ ಸರಳ ತಿಳುವಳಿಕೆ. ಹಿಂದೆ ಇಂತಹ ಮಾನವಂತರು ಶಾಸನಸಭೆಗಳಿಗೆ ಆರಿಸಿ ಬರುತ್ತಿದ್ದರು. ಆದರೆ ಈಗ ಚುನಾವಣೆ ಎಂಬುದು ಹಣ ಚೆಲ್ಲಿ ಅದರ ನೂರು ಪಟ್ಟು ಬಾಚಿಕೊಳ್ಳುವ ದಂಧೆಯಾಗಿದೆ. ಅಷ್ಟೇ ಅಲ್ಲ ಅಂತಹವರ ಅಕ್ರಮ ದಂಧೆಗಳನ್ನು ರಕ್ಷಸಿಕೊಳ್ಳಲು ಶಾಸಕತ್ವ ರಕ್ಷಾ ಕವಚವಾಗಿ ಬಳಕೆಯಾಗುತ್ತಿದೆ. ರಾಜಕಾರಣಿಗಳ ನಾಲಿಗೆ ಎಂದೋ ನಿಯತ್ತು ಕಳೆದುಕೊಂಡಿದೆ. ಅನರ್ಹ ಶಾಸಕರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಹೇಳುತ್ತ ಬಂದ ಮುಖ್ಯಮಂತ್ರಿ ಯಡಿಯೂರಪ್ಪರಿಂದ ಹಿಡಿದು ಎಲ್ಲ ಭಾಜಪ ನಾಯಕರು ‘‘ಅನರ್ಹರು ತ್ಯಾಗ ಬಲಿದಾನ ಮಾಡಿದ್ದಾರೆ, ಅವರನ್ನು ಗೆಲ್ಲಿಸಬೇಕು’’ ಎಂದು ಹೇಳುತ್ತ ನಾಮಪತ್ರ ಸಲ್ಲಿಸಲು ಅವರ ಜೊತೆ ಹೋಗಿ ಹಲ್ಲು ಕಿಸಿದು ಫೋಟೊ ತೆಗೆಸಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೋಟ್ಯಧಿಪತಿ ಅನರ್ಹ ಅಭ್ಯರ್ಥಿಯೊಬ್ಬರ ಬಗ್ಗೆ ಅವರು ಗೆದ್ದು ಬಂದರೆ 24 ತಾಸುಗಳಲ್ಲಿ ಮಂತ್ರಿಯಾಗಿಸುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳುತ್ತಾರೆ, ಇದಕ್ಕಿಂತ ಅಸಹ್ಯ ಇನ್ಯಾವುದಿದೆ.?

ಕರ್ನಾಟಕದ ಜನತೆ ಶಾಸನ ಸಭೆಗಳಿಗೆ ನಂಬಿಕಸ್ಥ, ಮರ್ಯಾದಸ್ಥ ಜನರನ್ನು ಚುನಾಯಿಸುತ್ತಾ ಬಂದಿದ್ದಾರೆ, ಈ ಬಾರಿ ಜನಾದೇಶ ಭಿನ್ನವಾಗಿರಲಾರದು. ನೈತಿಕತೆಗೆ ಎಳ್ಳುನೀರು ಬಿಟ್ಟ ಅನರ್ಹ, ಪಕ್ಷಾಂತರಿಗಳಿಗೆ ಜನ ಪಾಠ ಕಲಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News