ಪೈಲಟ್‌ನ ಸೋಗು ಹಾಕಿದ ಈತ ಮಾಡಿದ್ದೇನು ಗೊತ್ತೇ ?

Update: 2019-11-20 03:42 GMT

ಹೊಸದಿಲ್ಲಿ: ಪೈಟಲ್‌ನ ಸೋಗುಹಾಕಿ 15 ಬಾರಿ ವಿಮಾನಯಾನ ಕೈಗೊಂಡಿದ್ದ ವ್ಯಕ್ತಿಯೊಬ್ಬ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ದೆಹಲಿಯ ವಸಂತಕುಂಜ್ ನಿವಾಸಿ ರಾಜನ್ ಮಹಬೂಬಾನಿ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ.

ಸ್ಟೀವನ್ ಸ್ಪಿಲ್‌ಬರ್ಗ್ ಅವರ "ಕ್ಯಾಚ್ ಮಿ ಇಫ್ ಯೂ ಕ್ಯಾನ್" ಚಿತ್ರದ ನಾಯಕ ಫ್ರಾಂಕ್ ಅಬಗ್ನಲೆ ಜೂನಿಯರ್, ಪಾನ ಆ್ಯಮ್ ಪೈಲಟ್‌ನ ವೇಷ ಹಾಕಿಕೊಂಡು ಕೋಟ್ಯಂತರ ಡಾಲರ್ ವಂಚಿಸುತ್ತಾನೆ. ಇದೇ ಮಾದರಿಯಲ್ಲಿ ರಾಜನ್ ಈ ಮೊದಲು 15 ವಿಮಾನಗಳಲ್ಲಿ ಪೈಲಟ್‌ನಂತೆ ಸೋಗು ಹಾಕಿಕೊಂಡು ಉಚಿತವಾಗಿ ಮೇಲ್ದರ್ಜೆ ಸೌಲಭ್ಯ ಪಡೆಯುವುದು, ಸರದಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ವಿಮಾನ ಪ್ರವೇಶಿಸುವುದು ಹೀಗೆ ವಿಶೇಷ ಆತಿಥ್ಯವನ್ನು ಪಡೆದು ಪ್ರಯಾಣಿಸಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಕಾರ್ಪೊರೇಟ್ ಗ್ರಾಹಕರನ್ನು ಹಾಗೂ ಸ್ನೇಹಿತರ ಮೇಲೆ ಪ್ರಭಾವ ಬೀರಲು ಇದನ್ನು ಸಾಮಾಜಿಕ ಜಾಲತಾಣಗಳಲ್ಲೂ ಬಿಂಬಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಬ್ಯಾಂಕಾಕ್‌ನಿಂದ ನಕಲಿ ಐಡಿ ಪಡೆದು ಇದನ್ನು ದೆಹಲಿ ಹಾಗೂ ಕೊಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಹಲವು ಬಾರಿ ಬಳಸಿದ್ದಾಗಿ ಈತ ಬಹಿರಂಗಪಡಿಸಿದ್ದಾನೆ. ತಾನು ಕೊಲ್ಕತ್ತಾದಲ್ಲಿ ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯ ಸಲಹೆಗಾರ, ಬೋಧಕ ಎಂದು ಬಿಂಬಿಸಿಕೊಂಡಿದ್ದ. ಏರ್ ಏಷಿಯಾ ಇಂಡಿಯಾ ವಿಮಾನದಲ್ಲಿ ದೆಹಲಿಯಿಂದ ಕೊಲ್ಕತ್ತಾಗೆ ಯಾನ ಕೈಗೊಳ್ಳುವ ಪ್ರಯತ್ನದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ.

ಏರ್ ಏಷಿಯಾ ಸಿಬ್ಬಂದಿ ಅನುಮಾನದಿಂದ ಲುಫ್ತಾನ್ಸಾ ಅಧಿಕಾರಿಗಳಿಗೆ ಮಾಹಿತಿ ನೀಡಿ ಈತನ ನೈಜತೆ ದೃಢಪಡಿಸುವಂತೆ ಕೋರಿದ್ದಾರೆ. ಲುಫ್ತಾನ್ಸಾ ಸಿಬ್ಬಂದಿ ವಿಚಾರಣೆ ನಡೆಸಿ ಬಳಿಕ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News