ಚಿದಂಬರಂ ಜಾಮೀನು ಅರ್ಜಿ: ನ.26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

Update: 2019-11-20 06:44 GMT

ಹೊಸದಿಲ್ಲಿ, ನ.20: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿ ಉತ್ತರಿಸುವಂತೆ ಆದೇಶಿಸಿದೆ.

ದಿಲ್ಲಿ ಹೈಕೋರ್ಟ್ ನ.16ರಂದು ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಚಿದಂಬರಂ ಸಲ್ಲಿಸಿರುವ ಮೇಲ್ಮನವಿಯ ಅರ್ಜಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ಜಸ್ಟಿಸ್ ಆರ್.ಭಾನುಮತಿ ನೇತೃತ್ವದ ತ್ರಿಸದಸ್ಯ ಪೀಠ, ಈ.ಡಿ.ಗೆ ನೋಟಿಸ್ ನೀಡಿದೆ.

ಈ.ಡಿ. ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ.25ರಂದು ನೋಟಿಸ್‌ಗೆ ಉತ್ತರ ನೀಡುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು.

 ಜಸ್ಟಿಸ್ ಎಎಸ್ ಬೋಪಣ್ಣ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ.

 ಹಿರಿಯ ವಕೀಲರಾದ ಕಪಿಲ್ ಸಿಬಾಲ್ ಹಾಗೂ ಅಭಿಷೇಕ್ ಸಿಂಘ್ವಿ ಸುಪ್ರೀಂಕೋರ್ಟ್‌ನಲ್ಲಿ ಚಿದಂಬರಂ ಪರ ವಾದ ಮಂಡಿಸಿದರು. ಮೂರು ತಿಂಗಳುಗಳಿಂದ ಕಸ್ಟಡಿಯಲ್ಲಿರುವ ಚಿದಂಬರಂಗೆ ಜಾಮೀನು ನೀಡಲೇಬೇಕೆಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News