ಯುರೋಪಿಯನ್ ಸಂಸದರ ನಿಯೋಗದ ಕಾಶ್ಮೀರ ಪ್ರವಾಸ 'ಖಾಸಗಿ ಭೇಟಿ': ರಾಜ್ಯಸಭೆಗೆ ತಿಳಿಸಿದ ಸರಕಾರ

Update: 2019-11-20 11:08 GMT

ಹೊಸದಿಲ್ಲಿ: ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ ಯುರೋಪಿಯನ್ ಸಂಸದರ ನಿಯೋಗ ದೇಶಕ್ಕೆ 'ಖಾಸಗಿ ಭೇಟಿ'ಗಾಗಿ ಬಂದಿತ್ತು ಎಂದು ಸರಕಾರ ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದೆ.

"ದಿಲ್ಲಿ ಮೂಲದ ಸಂಸ್ಥೆ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ನಾನ್-ಅಲೈನ್ಡ್ ಸ್ಟಡೀಸ್  ಆಹ್ವಾನದ ಮೇರೆಗೆ  ಅಕ್ಟೋಬರ್ 28ರಿಂದ ನವೆಂಬರ್ 1ರ ತನಕ ವಿಭಿನ್ನ ಆಡಳಿತ ಪಕ್ಷಗಳು ಹಾಗೂ ವಿಪಕ್ಷಗಳಿಗೆ ಸೇರಿದ ಯುರೋಪಿಯನ್ ಪಾರ್ಲಿಮೆಂಟ್‍ನ 27 ಸದಸ್ಯರ ತಂಡವು ಭಾರತಕ್ಕೆ ಖಾಸಗಿ ಭೇಟಿಗಾಗಿ ಆಗಮಿಸಿತ್ತು, ಎಂದು ಜಮ್ಮು ಮತ್ತು ಕಾಶ್ಮೀರ ಸರಕಾರ ಹೇಳಿದೆ,'' ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಯುರೋಪಿಯನ್ ಸಂಸದರ ನಿಯೋಗದ ಕಾಶ್ಮೀರ ಭೇಟಿ ಹಾಗೂ ಇತರ ವೆಚ್ಚಗಳನ್ನು ಯಾರು ಭರಿಸಿದ್ದರು ಹಾಗೂ ಈ ಪ್ರವಾಸ ಆಯೋಜಿಸಿದ್ದ ಸಂಸ್ಥೆ ಕೇಂದ್ರ ಸರಕಾರದ ಜತೆ ಸಹಯೋಗ ಹೊಂದಿತ್ತೇ ಎಂಬ ಕುರಿತಾದ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಮೇಲಿನ ಮಾಹಿತಿ ನೀಡಲಾಗಿದೆ.

ಜಮ್ಮು ಕಾಶ್ಮೀರ ವಿಚಾರದಲ್ಲಿ ಬಾಹ್ಯ ಹಸ್ತಕ್ಷೇಪ ಅನುಮತಿಸದೇ ಇರುವ ನೀತಿಯಿಂದ ಸರಕಾರ ಹಿಂದೆ ಸರಿದಿದೆಯೇ ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವ, ಪಾಕಿಸ್ತಾನದ ಜತೆಗಿನ ಯಾವುದೇ ವಿಚಾರ ಕೇವಲ ದ್ವಿಪಕ್ಷೀಯವಾಗಿ ಚರ್ಚಿಸಲಾಗುವುದು, ಮೂರನೇ ಪಕ್ಷಕ್ಕೆ ಈ ನಿಟ್ಟಿನಲ್ಲಿ ಯಾವುದೇ ಆಸ್ಪದವಿರುವುದಿಲ್ಲ,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News