ಕೊರಿಯಾ ಮಾಸ್ಟರ್ಸ್: ಶ್ರೀಕಾಂತ್, ಸಮೀರ್ ಶುಭಾರಂಭ

Update: 2019-11-20 18:04 GMT

ಗ್ವಾಂಗ್‌ಜು(ಕೊರಿಯಾ), ನ.20: ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದ್ದು, ಶಟ್ಲರ್‌ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಸಮೀರ್ ವರ್ಮಾ ಬುಧವಾರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ. 37 ನಿಮಿಷಗಳಲ್ಲಿ ಕೊನೆಗೊಂಡ ಮೊದಲ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಶ್ರೀಕಾಂತ್ ಹಾಂಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್‌ರನ್ನು 21-18, 21-17 ಗೇಮ್‌ಗಳ ಅಂತರದಿಂದ ಮಣಿಸಿದರು.

ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಹಾಂಕಾಂಗ್ ಆಟಗಾರನ ವಿರುದ್ಧ 11-3 ಹೆಡ್-ಟು-ಹೆಡ್ ದಾಖಲೆ ಕಾಯ್ದುಕೊಂಡು ಪ್ರಾಬಲ್ಯ ಮುಂದುವರಿಸಿದರು. ಶ್ರೀಕಾಂತ್ ಎರಡನೇ ಸುತ್ತಿನಲ್ಲಿ ಜಪಾನ್‌ನ ಕಾಂಟಾ ಸುನೆಯಾಮಾರನ್ನು ಎದುರಿಸಲಿದ್ದಾರೆ.

ಸಮೀರ್ ವರ್ಮಾ ಅವರ ಎದುರಾಳಿ ಜಪಾನ್‌ನ ಕಝಮಸ ಸಕೈ ಮೊದಲ ಗೇಮ್‌ನ ಮಧ್ಯದಲ್ಲೇ ಗಾಯಗೊಂಡು ನಿವೃತ್ತಿಯಾದರು. ಆಗ 11-8 ಮುನ್ನಡೆಯಲ್ಲಿದ್ದ ಸಮೀರ್ ಎರಡನೇ ಸುತ್ತಿಗೆ ತೇರ್ಗಡೆಯಾದರು.

  ಇದೇ ವೇಳೆ ಸೌರಭ್ ವರ್ಮಾ ಅವರ ಸವಾಲು ಅಂತ್ಯವಾಗಿದೆ. ಸೌರಭ್ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಫೇವರಿಟ್ ಕಿಮ್ ಡಾಂಗ್‌ಹುನ್ ವಿರುದ್ಧ 21-13, 12-21, 13-21 ಗೇಮ್‌ಗಳ ಅಂತರದಿಂದ ಸೋಲುಂಡಿದ್ದಾರೆ. ಸೌರಭ್ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಡಾಂಗ್‌ಹನ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News