ಸೈಯದ್ ಮುಷ್ತಾಕ್ ಅಲಿ ಟ್ರೋಫಿ: ಗುರುವಾರದಿಂದ ಸೂಪರ್ ಲೀಗ್ ಹಂತ

Update: 2019-11-20 18:09 GMT

ಸೂರತ್, ನ.20: ಮ್ಯಾರಥಾನ್ ಗ್ರೂಪ್ ಹಂತದ ಪಂದ್ಯಗಳ ಮುಕ್ತಾಯದ ನಂತರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2019 ರ ಸೂಪರ್ ಲೀಗ್ ಹಂತದ ಪಂದ್ಯಗಳು ಗುರುವಾರ ಪ್ರಾರಂಭವಾಗಲಿವೆ. ಕರ್ನಾಟಕ ಮೊದಲ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ. ಸೂಪರ್ ಲೀಗ್ ಹಂತದಲ್ಲಿ 10 ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಲು ಹೋರಾಟ ನಡೆಸಲಿವೆ. ಜಾರ್ಖಂಡ್, ಮುಂಬೈ, ಬರೋಡಾ, ಹರ್ಯಾಣ, ಮಹಾರಾಷ್ಟ್ರ, ರಾಜಸ್ಥಾನ, ದಿಲ್ಲಿ, ಕರ್ನಾಟಕ, ಪಂಜಾಬ್ ಮತ್ತು ತಮಿಳುನಾಡು ತಂಡಗಳು ಹಣಾಹಣಿಗೆ ಸಜ್ಜಾ ಗಿವೆ. 10 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ತಮಿಳುನಾಡು, ಕರ್ನಾಟಕ, ಮುಂಬೈ, ಪಂಜಾಬ್ ಮತ್ತು ಜಾರ್ಖಂಡ್ ಒಂದು ಗ್ರೂಪ್‌ನಲ್ಲಿ, ಬರೋಡಾ, ಹರ್ಯಾಣ , ಮಹಾರಾಷ್ಟ್ರ, ರಾಜಸ್ಥಾನ ಮತ್ತು ದಿಲ್ಲಿ ತಂಡಗಳು ಇನ್ನೊಂದು ಗುಂಪಿನಲ್ಲಿ ಸ್ಥಾನ ಪಡೆದಿವೆ.

ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಯಾಗಲಿವೆ. ಸೆಮಿಫೈನಲ್ ಪಂದ್ಯಗಳು ನ.28ರಂದು ಮತ್ತು ಡಿ. 1ರಂದು ಸೂರತ್‌ನಲ್ಲಿ ನಡೆಯಲಿವೆ. ಹಾಲಿ ಚಾಂಪಿಯನ್ ಕರ್ನಾಟಕ ಮತ್ತೆ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಿದೆ. ತಂಡದಲ್ಲಿ ಅನುಭವಿಗಳಾದ ಮನೀಷ್ ಪಾಂಡೆ ಮತ್ತು ಕೆ.ಎಲ್. ರಾಹುಲ್ ಇದ್ದಾರೆ. ದೇವದತ್ತ ಪಡಿಕ್ಕಲ್ ಅವರಂತಹ ಯುವ ಆಟಗಾರರಿದ್ದಾರೆ. ಎಡಗೈ ಓಪನರ್ ಪಡಿಕ್ಕಲ್ ಆರು ಇನಿಂಗ್ಸ್‌ಗಳಿಂದ ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಒಳಗೊಂಡ 303 ರನ್ ಗಳಿಸಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಮೂರನೇ ಅಗ್ರ ಸ್ಕೋರರ್ ಮತ್ತು ಸೂಪರ್ ಲೀಗ್ ಹಂತದಲ್ಲಿ ತಂಡಗಳಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಶ್ರೇಯಸ್ ಗೋಪಾಲ್ 13 ವಿಕೆಟ್ ಕಬಳಿಸಿ ಬೌಲಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಗ್ರೂಪ್ ಹಂತದಲ್ಲಿ ಕರ್ನಾಟಕವು ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಜಯಿಸಿದೆ. ಬರೋಡಾ ವಿರುದ್ಧ ಸೋಲು ಅನುಭವಿಸಿದ್ದ ಕರ್ನಾಟಕ ಸತತ 15 ಪಂದ್ಯಗಳ ಸತತ ಗೆಲುವಿನ ಓಟದಲ್ಲ್ಲಿ ಎಡವಿತ್ತು. ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕ ಸತತ 15 ಜಯ ಗಳಿಸಿ ದಾಖಲೆ ನಿರ್ಮಿಸಿತ್ತು. ಮುಂಬೈ ಕೂಡ ಪ್ರಬಲ ಸ್ಪರ್ಧಿಯಾಗಿದ್ದು ಶ್ರೇಯಸ್ ಅಯ್ಯರ್ ತಂಡದಲ್ಲಿದ್ದಾರೆ, ಡೋಪಿಂಗ್ ನಿಷೇಧದ ನಂತರ ಪೃಥ್ವಿ ಶಾ ತಂಡಕ್ಕೆ ವಾಪಸಾಗಿದ್ದಾರೆ. ಶಾ ತನ್ನ ಪುನರಾಗಮನದ ಆಟದಲ್ಲಿ ಅರ್ಧಶತಕ ದಾಖಲಿಸಿದ್ದರು. 6 ಇನಿಂಗ್ಸ್‌ಗಳಿಂದ 208 ರನ್‌ಗಳೊಂದಿಗೆ 158 ರ ಸ್ಟ್ರೈಕ್‌ರೇಟ್ ಹೊಂದಿರುವ ಸೂರ್ಯಕುಮಾರ್ ಯಾದವ್ ಮತ್ತು 140ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಏಳು ಇನಿಂಗ್ಸ್‌ಗಳಿಂದ ಆದಿತ್ಯ ತಾರೆ 301 ರನ್ ಗಳಿಸಿದ್ದಾರೆ. ಮೇಘಾಲಯ ವಿರುದ್ಧ 1 ಪಂದ್ಯದಲ್ಲಿ ಸೋತಿರುವುದನ್ನು ಹೊರತುಪಡಿಸಿ, ಮುಂಬೈ ಆರು ಪಂದ್ಯಗಳಲ್ಲಿ ಜಯ ಗಳಿಸಿದೆ. ಗ್ರೂಪ್ ಡಿಯಲ್ಲಿ ಗಮನಹರಿಸಬೇಕಾದ ಇತರ ತಂಡ ತಮಿಳುನಾಡು. ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಕಾರ್ತಿಕ್ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ, ನಾಲ್ಕು ಇನಿಂಗ್ಸ್‌ಗಳಿಂದ 200 ರನ್ ಗಳಿಸಿದರೆ, ಸಾಯಿ ಕಿಶೋರ್ ಮತ್ತು ಟಿ . ನಟರಾಜನ್ ತಲಾ 12 ವಿಕೆಟ್‌ಗಳೊಂದಿಗೆ ಬೌಲಿಂಗ್‌ನಲ್ಲಿ ಯಶಸು ಗಳಿಸಿದ್ದಾರೆ . ತಮಿಳುನಾಡು ಕೂಡ ತಮ್ಮ ಆರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಕಳೆದುಕೊಂಡಿತು, ಆದರೆ ಕಠಿಣ ಪರೀಕ್ಷೆಯು ಮುಂದೆ ಪ್ರಾರಂಭವಾಗಲಿದೆ. ಆರು ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದಿರುವ ಎಡಗೈ ವೇಗಿ ಲುಕ್ಮನ್ ಮೆರಿವಾಲಾ ಅವರು ಬರೋಡಾ ತಂಡದ ಯಶಸ್ಸಿಗೆ ಕಾರಣರಾಗಿದ್ದಾರೆ. ಹರ್ಯಾಣದ ಹರ್ಷಲ್ ಪಟೇಲ್ ಗರಿಷ್ಠ ವಿಕೆಟ್ ಪಡೆದ 5 ಮಂದಿ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು 7 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್ ಬ್ಯಾಟಿಂಗ್‌ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ.7 ಇನಿಂಗ್ಸ್‌ಗಳಿಂದ ಮೂರು ಅರ್ಧಶತಕಗಳೊಂದಿಗೆ 386 ರನ್ ಗಳಿಸಿದ್ದಾರೆ. ಈ ನಡುವೆ ರಾಜಸ್ಥಾನಕ್ಕೆ ದೀಪಕ್ ಚಹಾರ್ ಸೇವೆ ಲಭಿಸಿದೆ. ಅವರು ಗರಿಷ್ಠ ವಿಕೆಟ್ ಪಡೆಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮೂರನೇ ಟ್ವೆಂಟಿ 20 ಯಲ್ಲಿ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ಸಾಧಿಸಿದ ಬಳಿಕ ಚಹಾರ್ ಕೇವಲ ನಾಲ್ಕು ಪಂದ್ಯಗಳಲ್ಲಿ ರಾಜಸ್ಥಾನ ಪರ 10 ವಿಕೆಟ್ ಪಡೆದಿದ್ದಾರೆ.

ದಿಲ್ಲಿ ದಾಂಡಿಗ ಶಿಖರ್ ಧವನ್ ಅವರಿಂದ ಇನ್ನೂ ಸ್ಫೋಟಕ ಬ್ಯಾಟಿಂಗ್ ಕಂಡು ಬಂದಿಲ್ಲ. ಅವರು ಇಲ್ಲಿಯವರೆಗೆ ನಾಲ್ಕು ಪಂದ್ಯಗಳಲ್ಲಿ 0, 9, 19 ಮತ್ತು 35 ರನ್ ಗಳಿಸಿದ್ದಾರೆ. ಸೂಪರ್ ಲೀಗ್‌ನಲ್ಲಿ ಅದನ್ನು ಸುಧಾರಿಸಲು ಎದುರು ನೋಡುತ್ತಿದ್ದರೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಹರಾಜಿಗೆ ವಿವಿಧ ತಂಡಗಳನ್ನು ಆಕರ್ಷಿಸಲು ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News