ಭಾರತ ವಿರುದ್ಧ ಡೇವಿಸ್ ಕಪ್: 17ರ ಹರೆಯದ ಇಬ್ಬರು ಆಟಗಾರರಿಗೆ ಪಾಕ್ ಮಣೆ

Update: 2019-11-20 18:09 GMT

ಹೊಸದಿಲ್ಲಿ, ನ.20: ಹಿರಿಯ ಆಟಗಾರರಾದ ಐಸಾಮ್‌ವುಲ್ ಹಕ್ ಖುರೇಶಿ ಹಾಗೂ ಅಖೀಲ್ ಖಾನ್ ಡೇವಿಸ್ ಕಪ್ ಪಂದ್ಯವನ್ನು ತಟಸ್ಥ ತಾಣಕ್ಕೆ ಸ್ಥಳಾಂತರಗೊಳಿಸಿದ್ದನ್ನು ಪ್ರತಿಭಟಿಸಿ ಡೇವಿಸ್ ಕಪ್ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಪಾಕಿಸ್ತಾನ ತಂಡ ಇಬ್ಬರು 17ರ ವಯಸ್ಸಿನ ಆಟಗಾರರನ್ನು ಭಾರತ ವಿರುದ್ಧ ಕಣಕ್ಕಿಳಿಸಲು ನಿರ್ಧರಿಸಿದೆ. ಅಂತರ್‌ರಾಷ್ಟ್ರೀಯ ಟೆನಿಸ್ ಒಕ್ಕೂಟ(ಐಟಿಎಫ್)ನ.29-30ರಂದು ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದ ಡೇವಿಸ್ ಕಪ್ ಪಂದ್ಯವನ್ನು ಕಝಖ್‌ಸ್ತಾನದ ನೂರ್-ಸುಲ್ತಾನ್‌ಗೆ ಸ್ಥಳಾಂತರಗೊಳಿಸಿದೆ. ತಟಸ್ಥ ತಾಣಕ್ಕೆ ಪಂದ್ಯವನ್ನು ಸ್ಥಳಾಂತರಗೊಳಿಸುವುದನ್ನು ಪ್ರಶ್ನಿಸಿ ಪಾಕಿಸ್ತಾನ ಸಲ್ಲಿಸಿದ್ದ ಮೇಲ್ಮನವಿಯನ್ನು ಐಟಿಎಫ್ ಮಂಗಳವಾರ ತಿರಸ್ಕರಿಸಿತು.

ಪಾಕಿಸ್ತಾನ ಟೆನಿಸ್ ಒಕ್ಕೂಟ ಯುವ ಆಟಗಾರರಾದ ಅಬ್ದುಲ್ ರೆಹ್ಮಾನ್ ಹಾಗೂ ಶುಐಬ್ ಖಾನ್‌ರನ್ನು ಆಯ್ಕೆ ಮಾಡಿದೆ. ಈ ಇಬ್ಬರು ಜೂನಿಯರ್ ಐಟಿಎಫ್ ರ್ಯಾಂಕಿಂಗ್ ಲಿಸ್ಟ್ ನಲ್ಲಿ ಕ್ರಮವಾಗಿ 446 ಹಾಗೂ 1004ನೇ ಸ್ಥಾನದಲ್ಲಿದ್ದಾರೆ. ಅಮ್ಜಾದ್ ಜೊತೆ ಇನ್ನಿಬ್ಬರು ಯುವ ಆಟಗಾರರಾದ ಯೂಸುಫ್ ಖಾನ್ ಹಾಗೂ ಅಹ್ಮದ್ ಕಮಿಲ್ ಪಾಕ್‌ನ ಡೇವಿಸ್ ಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ 2018ರ ಎಪ್ರಿಲ್‌ನಲ್ಲಿ ಉಝ್ಬೇಕಿಸ್ತಾನ ವಿರುದ್ಧ ಕೊನೆಯ ಬಾರಿ ಡೇವಿಸ್ ಕಪ್ ಪಂದ್ಯದ ಆತಿಥ್ಯವಹಿಸಿಕೊಂಡಿತ್ತು. ಅಖೀಲ್ ಹಾಗೂ ಐಸಾಮ್‌ರಲ್ಲದೆ ಮುರ್ತಝಾ, ಹೀನಾ ಆಶೀಖ್ ಹಾಗೂ ಶಾಝಾದ್ ಖಾನ್ ತಂಡದಲ್ಲಿದ್ದರು. ಪಾಕ್ ಈ ಪಂದ್ಯವನ್ನು 0-4 ಅಂತರದಿಂದ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News