ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿ ಗುರುವಾರ ಟೀಮ್ ಇಂಡಿಯಾ ಆಯ್ಕೆ

Update: 2019-11-20 18:16 GMT
ರೋಹಿತ್ ಶರ್ಮಾ

ಕೋಲ್ಕತಾ, ನ.20: ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಸರಣಿಗಾಗಿ ಭಾರತದ ಸೀಮಿತ ಓವರ್‌ಗಳ ತಂಡಕ್ಕೆ ಆಟಗಾರರ ಆಯ್ಕೆಗೆ ಕೋಲ್ಕತಾದಲ್ಲಿ ಗುರುವಾರ ರಾಷ್ಟ್ರೀಯ ಆಯ್ಕೆ ಸಮಿತಿ ಸಭೆ ಸೇರಲಿದೆ.

ಉಪನಾಯಕ ರೋಹಿತ್ ಶರ್ಮಾ ಅವರ ಕೆಲಸದ ಹೊರೆ ಕಡಿಮೆಗೊಳಿಸುವುದು ಮತ್ತು ಆರಂಭಿಕ ಆಟಗಾರ ಶಿಖರ್ ಧವನ್ ಅವರ ಕಳಪೆ ಫಾರ್ಮ್ ಬಗ್ಗೆ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಎಂಎಸ್‌ಕೆ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಆಯ್ಕೆ ಸಮಿತಿ ಕೊನೆಯ ಸಭೆ ಇದಾಗಿರಬಹುದು. ಪ್ರಸಾದ್ ಮತ್ತು ಕೇಂದ್ರ ವಲಯದ ಆಯ್ಕೆಗಾರ ಗಗನ್ ಖೋಡಾ ಆಯ್ಕೆ ಸಮಿತಿಯಲ್ಲಿ ನಾಲ್ಕು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಗಳನ್ನು ತೆರವುಗೊಳಿಸಬೇಕಾಗಿದೆ. ಎಲ್ಲವೂ ಸರಿಯಾಗಿ ನಡೆದರೆ, ಕೆರಿಬಿಯನ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್‌ಗೆ ವಿಶ್ರಾಂತಿ ಸಿಗಬಹುದು. ಇದರಿಂದಾಗಿ ಅವರಿಗೆ ಮುಂದಿನ ವರ್ಷ ನ್ಯೂಝಿಲ್ಯಾಂಡ್ ವಿರುದ್ಧ ಕಠಿಣ ಪ್ರವಾಸಕ್ಕೆ ತಯಾರಾಗಲು ಅನುಕೂಲವಾಗುತ್ತದೆ. ನ್ಯೂಝಿಲ್ಯಾಂಡ್‌ನಲ್ಲಿ ಭಾರತ ಐದು ಪಂದ್ಯಗಳ ಟ್ವೆಂಟಿ- 20 ಅಂತರ್‌ರಾಷ್ಟ್ರೀಯ, ಮೂರು ಪಂದ್ಯಗಳ ಏಕದಿನ ಸರಣಗಳನ್ನು ಆಡಲಿದೆ ಮತ್ತು ಎರಡು ಟೆಸ್ಟ್ ಪಂದ್ಯಗಳು ಇರುತ್ತವೆ. ಭಾರತ ತಂಡವು ಡಿಸೆಂಬರ್ 6 ರಂದು ಮುಂಬೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಸರಣಿಯ ಮೊದಲ ಪಂದ್ಯವನ್ನು ಆಡಲಿದೆ. ಎರಡನೇ ಪಂದ್ಯ ತಿರುವನಂತಪುರದಲ್ಲಿ ಡಿ. 8ರಂದು ಮತ್ತು ಮೂರನೇ ಪಂದ್ಯ ಹೈದರಾಬಾದ್‌ನಲ್ಲಿ ಡಿ. 11ರಂದು ನಡೆಯಲಿವೆ.

ಮೂರು ಏಕದಿನ ಪಂದ್ಯಗಳನ್ನು ಚೆನ್ನೈ (ಡಿ. 15), ವಿಶಾಖಪಟ್ಟಣ (ಡಿ. 18) ಮತ್ತು ಕಟಕ್ (ಡಿ.22)ನಲ್ಲಿ ಆಡಲಾಗುವುದು.

ರೋಹಿತ್ ಈ ವರ್ಷ 60 ಸ್ಪರ್ಧಾತ್ಮಕ ಪಂದ್ಯಗಳನ್ನು (ಐಪಿಎಲ್ ಸೇರಿದಂತೆ) ಆಡಿದ್ದರಿಂದ ಅವರು ಬಹಳಷ್ಟು ದಣಿದಿದ್ದಾರೆ. ಅವರ ಕೆಲಸದ ಹೊರೆ ಚರ್ಚೆಯ ಪ್ರಮುಖ ಅಂಶವಾಗಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ 25 ಏಕದಿನ, 11 ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ನಾಯಕ ಕೊಹ್ಲಿ ಅವರಿಗಿಂತ ರೋಹಿತ್ ಶರ್ಮಾ ಮೂರು ಏಕದಿನ ಮತ್ತು ನಾಲ್ಕು ಟ್ವೆಂಟಿ-20 ಪಂದ್ಯಗಳನ್ನು ಹೆಚ್ಚು ಆಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಎರಡು ಬಾರಿ ವಿಶ್ರಾಂತಿ ಪಡೆದಿದ್ದಾರೆ. ಹಿರಿಯ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಒತ್ತಡದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ವೇಳೆ ಗಾಯಗೊಂಡು ತಂಡದಿಂದ ಹೊರಗುಳಿದಿದ್ದರು. ಬಳಿಕ ಕ್ರಿಕೆಟ್‌ಗೆ ಮರಳಿದ್ದರೂ ಧವನ್ ಉತ್ತಮ ಫಾರ್ಮ್‌ನಲ್ಲಿಲ್ಲ.

ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಯಾಂಕ್ ಅಗರ್ವಾಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಆಯ್ಕೆ ಸಮಿತಿಯು ಅವರನ್ನು ಮೂರನೇ ಓಪನರ್ ಆಗಿ ಸೀಮಿತ ಓವರ್‌ಗಳ ತಂಡಕ್ಕೆ ಆಯ್ಕೆ ಮಾಡಿದರೆ ಕೆ.ಎಲ್. ರಾಹುಲ್ ಅವರಿಗೆ ಉತ್ತಮ ಸಾಥ್ ನೀಡುವುದನ್ನು ನಿರೀಕ್ಷಿಸಲಾಗಿದೆ. ಹೀಗಾದರೆ ಕರ್ನಾಟಕದ ಇಬ್ಬರು ಆಟಗಾರರು ಟೀಮ್ ಇಂಡಿಯಾದ ಇನಿಂಗ್ಸ್ ಆರಂಭಿಸುವುದನ್ನು ನೋಡಲು ಸಾಧ್ಯ.

34ರ ಹರೆಯದ ಧವನ್ ದೀರ್ಘಕಾಲದವರೆಗೆ ಕ್ರಿಕೆಟ್‌ನಲ್ಲಿ ಇರುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಅವರು 41 (42 ಎಸೆತಗಳು), 31 (27 ಎಸೆತಗಳು) ಮತ್ತು 19 ರನ್ (16 ಎಸೆತ) ಗಳಿಸಿದ್ದಾರೆ. ದಿಲ್ಲಿಯ ಎಡಗೈ ಆಟಗಾರ ಧವನ್ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

ಧವನ್ ಫಾರ್ಮ್ ಕಂಡುಕೊಳ್ಳಲು ದೇಶೀಯ ಕ್ರಿಕೆಟ್‌ಗೆ ಮರಳಿದ್ದರೂ, ಅಲ್ಲಿಯೂ ಅವರಿಗೆ ಉತ್ತಮ ಬ್ಯಾಟಿಂಗ್ ಸಾಧ್ಯವಾಗಿಲ್ಲ. ಸೈಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ವಿರುದ್ಧ 0 (9ಎ), ಜಾರ್ಖಂಡ್ ವಿರುದ್ಧ 9 (6), ಸಿಕ್ಕಿಂ ವಿರುದ್ಧ 19 (18) ಮತ್ತು ಒಡಿಶಾ ವಿರುದ್ಧ 35 ರನ್ (33)ಗಳಿಸಿದ್ದಾರೆ. ಮತ್ತೊಂದೆಡೆ, ಇಂದೋರ್‌ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಅಗರ್ವಾಲ್ ರೋಚಕ ದ್ವಿಶತಕ ಸಿಡಿಸಿದ್ದರು. 28 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳನ್ನು ಬಾರಿಸಿದ್ದರು.

ಆದಾಗ್ಯೂ, ಆಯ್ಕೆಗಾರರು ಇತರ ಆಯ್ಕೆಗಳನ್ನು ಎದುರು ನೋಡುವ ಮೊದಲು ಧವನ್‌ಗೆ ಮತ್ತೊಂದು ಅವಕಾಶವನ್ನು ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ವಿಕೆಟ್‌ಕೀಪರ್ ರಿಷಭ್ ಪಂತ್ ಅವರಿಗೂ ಇದೇ ಪರಿಸ್ಥಿತಿ ಇದೆ. ಸಂಜು ಸ್ಯಾಮ್ಸನ್ ಅವರು ವಿಕೆಟ್ ಕೀಪಿಂಗ್ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಮುಂಬರುವ ಸರಣಿಯಲ್ಲಿ ಪಂತ್‌ಗೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ 38 ವರ್ಷದ ದಂತಕಥೆ ಧೋನಿ ಅವರಿಂದ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.

ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ ಮತ್ತು ಭುವನೇಶ್ವರ ಕುಮಾರ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಶಿವಂ ದುಬೆ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

 ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಎಡಗೈ ಸ್ಪಿನ್ನರ್ ಕೃನಾಲ್ ಪಾಂಡ್ಯ ಅವರಿಗೂ ತಂಡದಲ್ಲಿ ಸ್ಥಾನ ಭದ್ರಪಡಿಸಲು ಸ್ಪರ್ಧೆ ಎದುರಿಸುವಂತಾಗಿದೆ. ಯಜುವೇಂದ್ರ ಚಹಾಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ರವೀಂದ್ರ ಜಡೇಜ ಇವರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ದೀಪಕ್ ಚಹಾರ್ ವೇಗದ ದಾಳಿಯ ವಿಭಾಗವನ್ನು ಮುನ್ನಡೆಸುವುದನ್ನು ನಿರೀಕ್ಷಿಸಲಾಗಿದೆ. ಖಲೀಲ್ ಅಹ್ಮದ್ ದುಬಾರಿ ರನ್ ಬಿಟ್ಟುಕೊಡುತ್ತಿರುವುದು ತಂಡಕ್ಕೆ ಸಮಸ್ಯೆಯಾಗಿದೆ.

ಎಡಗೈ ವೇಗಿ ಕಳೆದ ಎರಡು ಟ್ವೆಂಟಿ 20 ಪಂದ್ಯಗಳಲ್ಲಿ ಎಂಟು ಓವರ್‌ಗಳಲ್ಲಿ 81 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆೆ. 37ಕ್ಕೆ 1 ಮತ್ತು 44ಕ್ಕೆ 1 ವಿಕೆಟ್ ಪಡೆದಿದ್ದಾರೆ. ರಾಜ್‌ಕೋಟ್ ಪಂದ್ಯದಲ್ಲಿ ಅವರ ಓವರ್‌ನಲ್ಲಿ 7 ಬಾರಿ ಚೆಂಡು ಬೌಂಡರಿ ಗೆರೆ ದಾಟಿದೆ. ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧ ಪಾದಾರ್ಪಣೆ ಮಾಡಿದ ಖಲೀಲ್ 14 ಟ್ವೆಂಟಿ-20 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಆದರೆ 11 ಏಕದಿನ ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಉಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News