ಭಯೋತ್ಪಾದನೆಗೆ ನೆರವು ಆರೋಪ ಎದುರಿಸುತ್ತಿರುವ ಕಂಪೆನಿಯಿಂದ ಬಿಜೆಪಿಗೆ ಕೋಟ್ಯಾಂತರ ರೂ. ದೇಣಿಗೆ

Update: 2019-11-22 09:01 GMT

ಹೊಸದಿಲ್ಲಿ: ಮುಂಬೈ ಬಾಂಬ್ ಸ್ಫೋಟ ಆರೋಪಿ ಜತೆ  ವಹಿವಾಟು ಹೊಂದಿದ್ದಕ್ಕಾಗಿ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿರುವ  ಆರ್‍ ಕೆಡಬ್ಲ್ಯು ಡೆವಲೆಪರ್ಸ್ ಲಿ. ಸಂಸ್ಥೆಯಿಂದ ಬಿಜೆಪಿ ದೊಡ್ಡ ಮೊತ್ತದ ದೇಣಿಗೆ ಪಡೆದಿರುವುದು ಬೆಳಕಿಗೆ ಬಂದಿದೆ. ಈ ನಿರ್ದಿಷ್ಟ ಕಂಪೆನಿಯಿಂದ ಬಿಜೆಪಿಗೆ ದೇಣಿಗೆ ದೊರಕಿರುವುದು ಪಕ್ಷವು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖವಾಗಿದೆ.

 ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನ  ಸಹಚರ ಎನ್ನಲಾಗಿರುವ  ಇಕ್ಬಾಲ್ ಮೆಮೊನ್ ಆಲಿಯಾಸ್ ಇಕ್ಬಾಲ್ ಮಿರ್ಚಿಯ ಜತೆ  ಆರ್ಥಿಕ ವಹಿವಾಟು ಹೊಂದಿದ್ದಕ್ಕೆ ಹಾಗೂ  ಆತನಿಂದ ಆಸ್ತಿ ಖರೀದಿಸಿರುವುದಕ್ಕೆ ಈ ನಿರ್ದಿಷ್ಟ ಸಂಸ್ಥೆ ಈಡಿ ತನಿಖೆಗೊಳಪಟ್ಟಿದೆ. ಸಂಕಷ್ಟದಲ್ಲಿರುವ ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಜತೆ ನಂಟು ಹೊಂದಿರುವ ಇದೇ ಸಂಸ್ಥೆ ಬಿಜೆಪಿಗೆ ರೂ 10 ಕೋಟಿ ದೇಣಿಗೆಯನ್ನು 2014-15ರಲ್ಲಿ ನೀಡಿತ್ತು.

ಇಲೆಕ್ಟೋರಲ್ ಟ್ರಸ್ಟುಗಳಿಂದ  ಬಿಜೆಪಿ ದೇಣಿಗೆ ಪಡೆಯುತ್ತಿದೆಯಾದರೂ ಒಂದು ನಿರ್ದಿಷ್ಟ ಕಂಪೆನಿ ಇಷ್ಟೊಂದು  ದೊಡ್ಡ ಮೊತ್ತದ ದೇಣಿಗೆಯನ್ನು ಬಿಜೆಪಿಗೆ ಇಲ್ಲಿಯ ತನಕ ನೀಡಿಲ್ಲ. ಭೂಗತ ಲೋಕದ ಪರವಾಗಿ ಆರ್ಥಿಕ ವ್ಯವಹಾರಗಳನ್ನು ನಡೆಸಿದ್ದಕ್ಕಾಗಿ ಸಂಸ್ಥೆಯ ಮಾಜಿ ನಿರ್ದೇಶಕ ರಂಜೀತ್ ಬಿಂದ್ರಾ ಅವರನ್ನು ಈಡಿ ಈಗಾಗಲೇ ಬಂಧಿಸಿದೆ.

ಇಕ್ಬಾಲ್ ಮಿರ್ಚಿಯ ಆಸ್ತಿಯನ್ನು ಖರೀದಿಸಿದ ಕಂಪೆನಿಯೆಂದು ಜಾರಿ ನಿರ್ದೇಶನಾಲಯದಿಂದ ಆರೋಪ ಹೊತ್ತಿರುವ ಸನ್‍ ಬ್ಲಿಂಕ್ ರಿಯಲ್ ಎಸ್ಟೇಟ್  ನಿರ್ದೇಶಕರಾಗಿರುವ ಮೆಹುಲ್ ಅನಿಲ್ ಬವಿಷಿ ಎಂಬವರು  ಬಿಜೆಪಿಗೆ  2 ಕೋಟಿ ರೂ. ದೇಣಿಗೆ ನೀಡಿದ ಸ್ಕಿಲ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರೂ ಆಗಿದ್ದಾರೆ. ಈ ದೇಣಿಗೆ 2014-15ರಲ್ಲಿ ಪಡೆದಿರುವ ವಿಚಾರ ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿದೆ.

ಆರ್‍ ಕೆಡಬ್ಲ್ಯು ಡೆವಲೆಪರ್ಸ್ ಸಂಸ್ಥೆಯ ನಿರ್ದೇಶಕರಾಗಿರುವ ಪ್ಲೇಸಿಡ್ ಜೇಕಬ್ ನೊರೊನ್ಹಾ ಎಂಬವರು ದರ್ಶನ್ ಡೆವಲಪರ್ಸ್ ಪ್ರೈ. ಲಿ. ಸಂಸ್ಥೆಯ ನಿರ್ದೇಶಕರೂ ಆಗಿದ್ದು ಈ ಸಂಸ್ಥೆಯೂ ಬಿಜೆಪಿಗೆ 2016-17ರಲ್ಲಿ ರೂ 7.5 ಕೋಟಿ ದೇಣಿಗೆ ನೀಡಿರುವುದು  ಆಯೋಗಕ್ಕೆ ಪಕ್ಷ ಸಲ್ಲಿಸಿರುವ ದಾಖಲೆಗಳಲ್ಲಿವೆ.

ಮಿರ್ಚಿಯ ಆಸ್ತಿ ಮಾರಾಟಕ್ಕೆ ಆರ್‍ ಕೆಡಬ್ಲ್ಯು ಡೆವಲಪರ್ಸ್ ಸಹಾಯ ಮಾಡಿದ್ದರಿಂದ ಬಿಂದ್ರಾ 30 ಕೋಟಿ ರೂ.  ಕಮಿಷನ್ ಪಡೆದಿದ್ದರೆಂಬುದು ಈಡಿ ಆರೋಪವಾಗಿದೆ. ಆರೆಕೆಡಬ್ಲ್ಯು ಡೆವಲಪರ್ಸ್ ಜತೆ  ವ್ಯವಹಾರ ಹೊದಿದ್ದಕ್ಕಾಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನೂ ಈಡಿ  ಪ್ರಶ್ನಿಸಿತ್ತು. ಆರ್‍ಕೆಡಬ್ಲ್ಯು  ಡೆವಲೆಪರ್ಸ್ ಸಂಸ್ಥೆಯ ಜತೆ ವ್ಯವಹಾರ ಹೊಂದಿದ್ದ ಎಸೆನ್ಶಿಯಲ್ ಹಾಸ್ಪಿಟಾಲಿಟಿ ಎಂಬ  ಸಂಸ್ಥೆಯ ನಿರ್ದೇಶಕಿಯಾಗಿದ್ದಾರೆ ಶಿಲ್ಪಾ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕಳೆದ ತಿಂಗಳು  ಇಕ್ಬಾಲ್ ಮಿರ್ಚಿ,  ಎನ್‍ಸಿಪಿ ನಾಯಕ ಪ್ರಫುಲ್ ಪಟೇಲ್ ಒಡೆತನದ ಮಿಲೀನಿಯಂ ಡೆವಲೆಪರ್ಸ್ ಹಾಗೂ ಸನ್ ಬ್ಲಿಂಕ್ ನಡುವಿನ ಆಸ್ತಿ ವ್ಯವಹಾರಗಳ ತನಿಖೆಗೆ ಸಂಬಂಧಿಸಿದಂತೆ  ಪ್ರಫುಲ್ ಪಟೇಲ್ ಅವರನ್ನು ವಿಚಾರಣೆಗೆ  ಈಡಿ ಕರೆಸಿತ್ತಲ್ಲದೆ ಬಿಂದ್ರಾ ಸಹಿತ ಇಬ್ಬರನ್ನು ಬಂಧಿಸಿತ್ತು,. ಆದರೆ ಪಟೇಲ್ ತಾವು ಯಾವುದೇ ಅವ್ಯವಹಾರ ನಡೆಸಿಲ್ಲ ಎಂದಿದ್ದರು.  ಇದೇ ವಿಚಾರ ಕುರಿತಂತೆ ಮಿರ್ಚಿಯ ಭಾವ ಮುಕ್ತಾರ್ ಮೆನನ್ ವಿಚಾರಣೆಯನ್ನೂ ಈಡಿ ನಡೆಸಿತ್ತು. ಮಿರ್ಚಿ ಆಸ್ತಿ ಖರೀದಿಗೆ ಸನ್ ಬ್ಲಿಂಕ್ ಸಂಸ್ಥೆಗೆ ಸಹಾಯ ಮಾಡಿದ್ದನ್ನು ಬಿಂದ್ರಾ ಒಪ್ಪಿಕೊಂಡಿದ್ದಾರೆಂದೂ ಈಡಿ ಅಧಿಕಾರಿಗಳು ಹೇಳಿದ್ದರು.

ಮಹಾರಾಷ್ಟ್ರ ಪ್ರಚಾರಾಭಿಯಾನದ ವೇಳೆ ಪ್ರಧಾನಿ ನರೇಂದ್ರ ಮೋದಿ ಮುಂಬೈ ಬಾಂಬ್ ದಾಳಿ ಘಟನೆಯನ್ನು ಉಲ್ಲೇಖಿಸಿ ``ಆ ಸಂದರ್ಭ ಅಧಿಕಾರದಲ್ಲಿರುವವರು ತಪ್ಪಿತಸ್ಥರನ್ನು ಬಂಧಿಸುವ ಬದಲು  `ಮಿರ್ಚಿ' ಬಿಸಿನೆಸ್‍ನಲ್ಲಿ ತೊಡಗಿದ್ದರು'' ಎಂದು ಆರೋಪಿಸಿದ್ದರು.

ಮಿರ್ಚಿ ಜತೆಗೆ ಕೆಲ ಸಂಸ್ಥೆಗಳು ಹೊಂದಿದ್ದ ವ್ಯವಹಾರಗಳು ``ದೇಶದ್ರೋಹಕ್ಕಿಂತ ಕಡಿಮೆಯೇನಲ್ಲ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ  ಹೇಳಿದ್ದೂ ಟೈಮ್ಸ್ ಆಫ್ ಇಂಡಿಯಾ ವರದಿಯೊಂದರಲ್ಲಿ ಉಲ್ಲೇಖಗೊಂಡಿದ್ದರೂ, ಆ ನಿರ್ದಿಷ್ಟ ವರದಿ ಈಗ ಟೈಮ್ಸ್ ವೆಬ್‍ಸೈಟ್‍ನಲ್ಲಿಲ್ಲ. ಆದರೂ   ಪ್ರೆಸ್‍ರೀಡರ್ ನಲ್ಲಿ ಹಾಗೂ ಟೈಮ್ಸ್ ನೌ ವೆಬ್‍ಸೈಟ್‍ನಲ್ಲಿ  ಅದು ಲಭ್ಯವಿದೆ.

Writer - ರೋಹಿಣಿ ಸಿಂಗ್, thewire.in

contributor

Editor - ರೋಹಿಣಿ ಸಿಂಗ್, thewire.in

contributor

Similar News