“ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕಾಗಿ ಕ್ಷಮೆ ಕೇಳುತ್ತೇವೆ”

Update: 2019-11-22 17:28 GMT

ಲಂಡನ್, ನ. 22: ನೂರು ವರ್ಷಗಳ ಹಿಂದೆ ಪಂಜಾಬ್‌ನ ಅಮೃತಸರದಲ್ಲಿ ನಡೆದ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕಾಗಿ ಭಾರತದ ಕ್ಷಮೆ ಯಾಚಿಸುವುದಾಗಿ ಬ್ರಿಟನ್‌ನ ಪ್ರತಿಪಕ್ಷ ಲೇಬರ್ ಪಾರ್ಟಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ.

ಬ್ರಿಟನ್ ಸಂಸತ್ತಿಗೆ ಡಿಸೆಂಬರ್ 12ರಂದು ಮಧ್ಯಂತರ ಚುನಾವಣೆ ನಡೆಯಲಿದೆ. ಲೇಬರ್ ಪಾರ್ಟಿಯು ಗುರುವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಬ್ರಿಟನ್‌ನ ವಸಾಹತುಶಾಹಿ ಇತಿಹಾಸದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಹಾಗೂ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕಾಗಿ ಭಾರತದ ಕ್ಷಮೆ ಕೋರಲಾಗುವುದು ಎಂದು ಪ್ರಣಾಳಿಕೆ ಭರವಸೆ ನೀಡಿದೆ.

ಬ್ರಿಟನ್‌ನ ‘ಗತಕಾಲದ ಅನ್ಯಾಯಗಳ’ ಬಗ್ಗೆ ತನಿಖೆ ನಡೆಸಲು ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಹಾಗೂ ‘ಆಪರೇಶನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯಲ್ಲಿ ಬ್ರಿಟನ್‌ನ ಪಾತ್ರದ ಬಗ್ಗೆ ಸಾರ್ವಜನಿಕ ಪರಿಶೀಲನೆ ನಡೆಸಲಾಗುವುದು ಎಂದು ಅದು ತಿಳಿಸಿದೆ.

ಲೇಬರ್ ಪಾರ್ಟಿ ನಾಯಕ ಜೆರೆಮಿ ಕಾರ್ಬಿನ್ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಪಂಜಾಬ್‌ನ ಅಮೃತಸರದ ಸ್ವರ್ಣಮಂದಿರದ ಒಳಗೆ ಅಡಗಿಕೊಂಡಿದ್ದ ಸಿಖ್ ಭಯೋತ್ಪಾದಕರನ್ನು ಹೊರದಬ್ಬುವುದಕ್ಕಾಗಿ ಭಾರತೀಯ ಸೇನೆಯು 1984 ಜೂನ್‌ನಲ್ಲಿ ‘ಆಪರೇಶನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News